ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ ಸಚಿವ ಬಿ ಸಿ ನಾಗೇಶ್: ಶಿಕ್ಷಣ ಸಚಿವರ ವಿರುದ್ಧ ಪ್ರಕರಣ ದಾಖಲಿಸಲು ಕಾಂಗ್ರೆಸ್‌ ಆಗ್ರಹ

  • ಶಿಕ್ಷಣ ಸಚಿವರ ಮೇಲೆ ಧ್ವಜಸಂಹಿತೆ ಉಲ್ಲಂಘನೆಯಡಿ ಕೇಸ್‌ ದಾಖಲಿಸಿ
  • 'ಆರ್‌ಎಸ್‌ಎಸ್‌ ಮನಸ್ಥಿತಿಯ ಸಚಿವರ ನಡೆ'ಗೆ ಕಾಂಗ್ರೆಸ್‌  ಕಿಡಿ

ರಾಜ್ಯಾದ್ಯಂತ ವಿವಾದದ ಕೇಂದ್ರವಾಗಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷನ ಎಡವಟ್ಟು ನಿರ್ಧಾರಗಳಿಗೆ ಬೆನ್ನೆಲುಬಾಗಿ ನಿಂತು ಸುದ್ದಿಗೆ ಗ್ರಾಸವಾಗಿದ್ದವರು ಸಚಿವ ಬಿ ಸಿ ನಾಗೇಶ್.‌ ಸಂಘ ಪರಿವಾರದ ಅಜೆಂಡಾ ಪೂರ್ಣಗೊಳಿಸಲು ಸಾರ್ವಜನಿಕ ಹಾಗೂ ಶಿಕ್ಷಣದ ಹಿತಾಸಕ್ತಿಯನ್ನೇ ಬದಿಗೊತ್ತಿ ನಿಂತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿ ವಿವಾದಿತ ಸಚಿವರೆಂದೇ ಖ್ಯಾತಿ ಪಡೆದವರು ಬಿ ಸಿ ನಾಗೇಶ್.

ಈಗ ಅದೇ ಶಿಕ್ಷಣ ಸಚಿವರು ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿ ಮತ್ತೆ ಸುದ್ದಿಯಾಗಿದ್ದಾರೆ. ತಮ್ಮ ತವರಿನಲ್ಲಿ ನಡೆದ ತಿರಂಗಾ ಧ್ವಜಯಾತ್ರೆಯ ಪಾದಯಾತ್ರೆ ವೇಳೆ ರಾಷ್ಟ್ರಧ್ವಜದ ಜೊತೆ ಭಗವಾ ಧ್ವಜವನ್ನು ಹಿಡಿದು ಸಚಿವ ನಾಗೇಶ್‌ ಹೆಜ್ಜೆ ಹಾಕಿದ್ದರು. ಈ ವೇಳೆ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಭಗವಾ ಧ್ವಜವನ್ನು ಹಿಡಿದು ಸಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎನ್ನುವುದು ಕಾಂಗ್ರೆಸ್‌ ಆರೋಪ.

ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, "ಶಿಕ್ಷಣ ಸಚಿವರಿಗೆ ಧ್ವಜಸಂಹಿತೆ ನೀತಿ ಅರಿವಿಲ್ಲದೇ ಇರುವುದು ನಿಜಕ್ಕೂ ದುರಂತ" ಎಂದಿದ್ದಾರೆ.

"ನಮ್ಮ ರಾಷ್ಟ್ರೀಯ ದಿನಾಚರಣೆಗಳ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಿಡಿದಾಗ ಅದಕ್ಕಿಂತ ಎತ್ತರ ಹಾಗೂ ಅದರ ಬಲಭಾಗದಲ್ಲಿ ಬೇರೆ ಧ್ವಜಗಳು ಹಾರದಂತೆ ನೋಡಿಕೊಳ್ಳಬೇಕೆನ್ನುವ ನಿಯಮವೂ ಇವರಿಗೆ ಗೊತ್ತಿಲ್ಲ ಎಂದಾದರೆ ಹೇಗೆ" ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? :'ಬೊಮ್ಮಾಯಿ ಮಾಡೆಲ್‘ ಅಂದ್ರೆ ಸ್ವಪಕ್ಷೀಯರಿಂದಲೇ ಆಕ್ರೋಶಕ್ಕೆ ಒಳಗಾಗುವ ಆಡಳಿತ: ಕಾಂಗ್ರೆಸ್ ಟೀಕೆ 

ಜೊತೆಗೆ ಈ ವಿಚಾರವನ್ನು ತೀವ್ರವಾಗಿ ಖಂಡಿಸಿರುವ ಹರಿಪ್ರಸಾದ್, ಸಚಿವ ನಾಗೇಶ್‌ ವಿರುದ್ಧ ಧ್ವಜಸಂಹಿತೆ ಅಡಿ ಕೇಸ್‌ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್