‘ಸರ್ಕಾರ ನಡೀತಾ ಇಲ್ಲ..’ ಎಂಬ ಹೇಳಿಕೆ ಹಿಂದಿನ ಮರ್ಮವೇನು? ಮಾಧುಸ್ವಾಮಿ ಮೇಲೆ ಯಡಿಯೂರಪ್ಪ ಬಣ ಮುಗಿಬಿದ್ದಿದ್ಯಾಕೆ?

ಸಮಾಜವಾದದ ಹಿನ್ನೆಲೆಯ ಮಾಧುಸ್ವಾಮಿ ಬಿ ಎಸ್ ಯಡಿಯೂರಪ್ಪ ಕಾರಣಕ್ಕಾಗಿ ಕೆಜೆಪಿ ಸೇರಿ, ನಂತರದ ದಿನಗಳಲ್ಲಿ ಯಡಿಯೂರಪ್ಪ ಅವರ ಜತೆಗೇ ಬಿಜೆಪಿಗೆ ಬಂದವರು. ಕಳೆದ ವರ್ಷ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿ, ಸಂಘ ಪರಿವಾರದವರ ಕೆಂಗಣ್ಣಿಗೆ ಗುರಿಯಾಗಿದ್ದ ಅವರು, ಈಗ ತಮ್ಮ ಸರ್ಕಾರದ ವಿರುದ್ಧವೇ ಹಗುರವಾಗಿ ಮಾತನಾಡಿ ಯಡಿಯೂರಪ್ಪ ಬಣದವರ ಕೋಪತಾಪಕ್ಕೆ ಗುರಿಯಾಗಿದ್ದಾರೆ.
J C madhuswamy

ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಜೆ ಸಿ ಮಾಧುಸ್ವಾಮಿಯವರ ಹೆಸರು ಮತ್ತು ಅವರ ಹಿನ್ನೆಲೆ ರಾಜ್ಯದ ಬಹುತೇಕ ಜನರಿಗೆ ಗೊತ್ತಿರಲಿಲ್ಲ. ಜನತಾ ಪರಿವಾರ, ಸಮಾಜವಾದದ ಹಿನ್ನೆಲೆ ಎಂಬ ಕಾರಣಕ್ಕೆ ತುಮಕೂರು ಜಿಲ್ಲೆಯ ಜನರಿಗೆ ಪರಿಚಿತವಾಗಿದ್ದ ಮಾಧುಸ್ವಾಮಿ, 2019ರ ‘ಆಪರೇಷನ್ ಕಮಲ’ದ ನಂತರ ಇಡೀ ಕರ್ನಾಟಕಕ್ಕೇ ಚಿರಪರಿಚಿತರಾದರು.

2019ರ ಜುಲೈ ತಿಂಗಳಿನಲ್ಲಿ ನಡೆದ ಕರ್ನಾಟಕ ರಾಜಕೀಯ ಪ್ರಹಸನದಲ್ಲಿ ವಿಧಾನಸೌಧ ಕಾದ ಕೆಂಡದಂತಾಗಿತ್ತು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ 18ಕ್ಕೂ ಹೆಚ್ಚು ಶಾಸಕರನ್ನು ಮುಂಬೈಗೆ ಕಳಿಸಿದ್ದ ಬಿಜೆಪಿ, ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿ, ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದಿತ್ತು.

Eedina App

ಅವಿಶ್ವಾಸ ನಿಲುವಳಿ ಮೇಲೆ ಸದನದಲ್ಲಿ ಸುದೀರ್ಘ ಮೂರು ದಿನಗಳ ಕಾಲ ನಡೆದ ಚರ್ಚೆಯಲ್ಲಿ ಬಿಜೆಪಿ ಪರವಾಗಿ ಗಟ್ಟಿಧ್ವನಿಯಲ್ಲಿ ಮಾತನಾಡಿದವರಲ್ಲಿ ಚಿಕ್ಕನಾಯಕನಹಳ್ಳಿಯ ಬಿಜೆಪಿ ಶಾಸಕ ಜೆ ಸಿ ಮಾಧುಸ್ವಾಮಿ ಕೂಡ ಒಬ್ಬರು. ಇದೇ ಅವಕಾಶವನ್ನು ಬಳಸಿಕೊಂಡು ಮುನ್ನೆಲೆಗೆ ಬಂದ ಮಾಧುಸ್ವಾಮಿ, ನಂತರದಲ್ಲಿ ಮಂತ್ರಿಯಾದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿಯಂತಹ ಪ್ರಬಲ ಖಾತೆಗಳನ್ನು ಯಡಿಯೂರಪ್ಪ ಮಾಧುಸ್ವಾಮಿಗೆ ನೀಡಿದರು.

ಕಳೆದ ವರ್ಷ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿ, ಸಂಘ ಪರಿವಾರದವರ ಕೆಂಗಣ್ಣಿಗೆ ಗುರಿಯಾಗಿದ್ದ ಅವರು, ಈಗ ತಮ್ಮ ಸರ್ಕಾರದ ವಿರುದ್ಧವೇ ಹಗುರವಾಗಿ ಮಾತನಾಡಿ ಯಡಿಯೂರಪ್ಪ ಬಣದವರ ಕೋಪತಾಪಕ್ಕೆ ಗುರಿಯಾಗಿದ್ದಾರೆ.

AV Eye Hospital ad

“ಸರ್ಕಾರ ನಡೆಯುತ್ತಿಲ್ಲ, ಎಂಟು ತಿಂಗಳು ಇದೆ ಎಂದು ಹೇಗೋ ತಳ್ಳಿಕೊಂಡು ಹೋಗುತ್ತಿದ್ದೇವೆ” ಎಂಬ ಜೆ ಸಿ ಮಾಧುಸ್ವಾಮಿ ಅವರ ಮಾತು ರಾಜ್ಯ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ತಮ್ಮ ಸರ್ಕಾರದ ವಿರುದ್ಧವೇ, ಅದರಲ್ಲೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

‘ಕೇಂದ್ರ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ’ ಎಂದಿದ್ದ ಮಾಧುಸ್ವಾಮಿ

ಸ್ವಪಕ್ಷೀಯ ಸರ್ಕಾರದ ವಿರುದ್ಧ ಮಾಧುಸ್ವಾಮಿ ಮಾತನಾಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕೂಡ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿ ವಿವಾದ ಮಾಡಿಕೊಂಡಿದ್ದರು.

2021ರ ಮಾರ್ಚ್ ತಿಂಗಳಲ್ಲಿ ಮೈಸೂರಿನಲ್ಲಿ ನಡೆದ ‘ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ'ದಲ್ಲಿ ಮಾತನಾಡಿದ್ದ ಅವರು, “ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆ ಸಡಿಲಗೊಳ್ಳುತ್ತಿದ್ದು, ಪ್ರಾದೇಶಿಕ ಕೂಗಿಗೆ ನಾಂದಿಯಾಗುತ್ತಿದೆ” ಎಂದು ಹೇಳಿದ್ದರು. 

''ಕೇಂದ್ರ ಸರ್ಕಾರವು ಮನೆಯ ಹಿರಿಯ ಸದಸ್ಯನಂತೆ ವರ್ತಿಸದೇ ರಾಜ್ಯದ ವಿಷಯಗಳಿಗೆ ಕೈ ಹಾಕುತ್ತಿದೆ. ಸಂಪನ್ಮೂಲವನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿ ವಿಫಲವಾಗಿದೆ. ಕೇಂದ್ರದ ಈ ಧೋರಣೆಯಿಂದಾಗಿ ಪ್ರಾದೇಶಿಕತೆಯ ಕಾವು ಹೆಚ್ಚಾಗುತ್ತಿದೆ. ಪ್ರಾದೇಶಿಕ ಅಸಮಾನತೆಯ ಫಲವಾಗಿಯೇ ತೆಲಂಗಾಣ, ಜಾರ್ಖಂಡ್‌ ರಾಜ್ಯಗಳು ಸೃಷ್ಟಿಯಾಗಿ, ರಾಜ್ಯಗಳ ಸಂಖ್ಯೆ 16ರಿಂದ 29ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆ ಪಕ್ಷಕ್ಕೆ ಜನರು ವೋಟ್‌ ಹಾಕುತ್ತಿರುವುದು ಇದೇ ಕಾರಣಕ್ಕೆ,'' ಎಂದು ಹೇಳಿದ್ದರು. 

ಬಿಜೆಪಿ ಸರ್ಕಾರದ ಸಚಿವರಾಗಿದ್ದುಕೊಂಡೇ ತಮ್ಮದೇ ಪಕ್ಷ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿ ಮಾಧುಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷದವರು ಮಾಧುಸ್ವಾಮಿ ಮೇಲೆ ಮುಗಿಬಿದ್ದಿದ್ದರು. 

ಈ ಸುದ್ದಿ ಓದಿದ್ದೀರಾ?: ಸಣ್ಣ ನೀರಾವರಿ ಇಲಾಖೆ ಕುಂಟುತ್ತಾ, ತೆವಳುತ್ತಿರಬಹುದು: ಸಂಪುಟ ಸಹೋದ್ಯೋಗಿಗೆ ಸೋಮಶೇಖರ್ ತಿರುಗೇಟು

ಈಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿರುವ ಸಚಿವ ಮಾಧುಸ್ವಾಮಿ, “ಸರ್ಕಾರ ನಡೀತಾ ಇಲ್ಲ..” ಎಂದು ಹೇಳುವ ಮುಖಾಂತರ ಬಿ ಎಸ್ ಯಡಿಯೂರಪ್ಪ ಬಣದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಯಡಿಯೂರಪ್ಪ ಆಪ್ತರಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಹಲವು ವಿವಾದಗಳಲ್ಲಿ ಸರ್ಕಾರ ಸಿಕ್ಕಿಹಾಕಿಕೊಂಡು ನಲುಗುತ್ತಿರುವ ಸಂದರ್ಭದಲ್ಲೇ ಮಾಧುಸ್ವಾಮಿ ಈ ರೀತಿ ಹೇಳಿಕೆ ನೀಡಿರುವುದು ಅವರ ಮೇಲೆ ಮತ್ತಷ್ಟು ಕೋಪ ಹೆಚ್ಚಾಗಲು ಕಾರಣವಾಗಿದೆ. 

BSY-Madhuswamy

ಯಡಿಯೂರಪ್ಪ ಆಪ್ತ ಬಳಗದಲ್ಲೇ ಬಿರುಕು!

ಬಿಜೆಪಿ ಸೇರಿದ ಅಲ್ಪ ಕಾಲದಲ್ಲೇ ಜೆ ಸಿ ಮಾಧುಸ್ವಾಮಿ ಸಚಿವರಾಗಿದ್ದು ಬಿ ಎಸ್ ಯಡಿಯೂರಪ್ಪ ಅವರ ಕೃಪಾಕಟಾಕ್ಷದಿಂದಾಗಿ. 2008ಕ್ಕೂ ಮೊದಲು ಜನತಾ ಪರಿವಾರ ಮತ್ತು ಜೆಡಿಯು ಪಕ್ಷದಲ್ಲಿದ್ದ ಅವರು, ಬಿ ಎಸ್ ಯಡಿಯೂರಪ್ಪ ಅವರ ಕಾರಣಕ್ಕೆ ಕೆಜೆಪಿ ಸೇರಿ ನಂತರ ಅವರ ಹಿಂದೆಯೇ ಬಿಜೆಪಿಗೆ ಬಂದರು.

ಕೆಜೆಪಿಯಲ್ಲಿದ್ದಾಗಿನಿಂದಲೂ ಯಡಿಯೂರಪ್ಪ ಅಪ್ತರಾಗಿರುವ ಅವರು, ಮೈತ್ರಿ ಸರ್ಕಾರ ಉರುಳುವ ಸಂದರ್ಭದಲ್ಲಿ ಬಿಜೆಪಿ ಪಕ್ಷವನ್ನು ಸದನದಲ್ಲಿ ಪ್ರಬಲವಾಗಿ ಸಮರ್ಥನೆ ಮಾಡಿಕೊಂಡಿದ್ದರು. 

ಜನತಾ ಪರಿವಾರ ಮತ್ತು ಕಾಂಗ್ರೆಸ್‌ನಿಂದ ಈ ಹಿಂದೆ ಯಡಿಯೂರಪ್ಪ ಕಾರಣಕ್ಕಾಗಿ ಬಿಜೆಪಿ ಸೇರಿದ್ದ ಮತ್ತು 2019ರಲ್ಲಿ ಮೈತ್ರಿ ಪಕ್ಷಗಳನ್ನು ತೊರೆದು ಬಂದ ಶಾಸಕರ ನಡುವೆ ಅಸ್ತಿತ್ವಕ್ಕಾಗಿ ಬಣ ರಾಜಕೀಯ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಅವರು ನಮ್ಮ ಬೆಂಬಲಕ್ಕಿದ್ದಾರೆ ಎಂದು ತೋರಿಸಿಕೊಳ್ಳಲು ಹೊಸ ವಲಸಿಗ ಬಣದ ಎಸ್ ಟಿ ಸೋಮಶೇಖರ್ ಮತ್ತು ಮುನಿರತ್ನ ಮಾಧುಸ್ವಾಮಿ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತವೆ.

ಮಾಧುಸ್ವಾಮಿ ಹೇಳಿಕೆ ಕುರಿತು ಮುಖ್ಯಮಂತ್ರಿಗಳು 'ಎಲ್ಲ ಸರಿಯಾಗಿದೆ' ಎಂದು ಹೇಳಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಈ ದಿನ.ಕಾಮ್ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರನ್ನು ಪ್ರಶ್ನಿಸಿತು. "ಮುಖ್ಯಮಂತ್ರಿಗಳು ಹೇಳಿದ ಮೇಲೆ ಎಲ್ಲ ಮುಗೀತು ಬಿಡಿ" ಎಂದು ಸಚಿವರು ಮರುಮಾತಾಡದೆ ಕರೆ ಕಡಿತಗೊಳಿಸಿದರು.

S T Somashekhar

ಮಾಧುಸ್ವಾಮಿ ಹೇಳಿಕೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ್ದ ಸೋಮಶೇಖರ್, “ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ ಎಲ್ಲ ಕಾರ್ಯಕ್ರಮಗಳ ಬಗ್ಗೆ ಇವರೇ (ಮಾಧುಸ್ವಾಮಿ) ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಕು. ಹೇಳುವುದಿದ್ದರೆ ಮಾಧ್ಯಮಗಳ ಮುಂದೆಯೇ ಹೇಳಬೇಕು. ಆ ಧ್ವನಿ ಮಾಧುಸ್ವಾಮಿಯವರದ್ದೇ ಆಗಿದ್ದರೆ, ಅವರು ಹೇಳಿದ್ದು ತಪ್ಪು. ಅವರ ಸಣ್ಣ ನೀರಾವರಿ ಇಲಾಖೆ ಕುಂಟುತ್ತಾ, ತೆವಳುತ್ತಿರಬಹುದು. ನಾವು ಆ ಮಟ್ಟದಲ್ಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಇಲಾಖೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ಅದೇ ರೀತಿ ಬಸವರಾಜ ಬೊಮ್ಮಾಯಿ ಕೂಡ ಪ್ರಾಮುಖ್ಯತೆ ಕೊಡುತ್ತಿದ್ದಾರೆ" ಎಂದಿದ್ದರು. 

ಸರ್ಕಾರ ನಡೀತಾ ಇಲ್ಲ, ಮ್ಯಾನೇಜ್‌ ಮಾಡ್ತಿದ್ದೀವಿ ಅಷ್ಟೆ!

ವ್ಯಕ್ತಿಯೊಬ್ಬರು ಜೆ ಸಿ ಮಾಧುಸ್ವಾಮಿಗೆ ಕರೆ ಮಾಡಿ, “ನಮಸ್ತೆ ಸರ್, ನಾನು ಚನ್ನಪಟ್ಟಣದಿಂದ ಸಮಾಜ ಸೇವಕ ಭಾಸ್ಕರ್ ಅಂತ. ವಿಎಸ್ಎಸ್‌ಎನ್ ಬ್ಯಾಂಕ್‌ನಲ್ಲಿ ರೈತರು 50 ಸಾವಿರ ರೂಪಾಯಿ ಸಾಲ ಪಡೆದಿದ್ದಾರೆ. ಆ ಹಣ ಕಟ್ಟಬೇಕಾದರೆ ರಿನೀವಲ್‌ಗೆ ಅಂತ 1,300 ರೂಪಾಯಿಯನ್ನ ಬ್ಯಾಂಕ್ ಸಿಬ್ಬಂದಿ ತಗೊಂಡು, ಅವರೇ ಬಡ್ಡಿಗೆ ಅಂತ ಹಣ ಹಿಡ್ಕೋತಿದ್ದಾರೆ” ಎಂದು ಹೇಳಿದ್ದಾರೆ. 

ಅವರ ಮಾತಿಗೆ ಪ್ರತಿಕ್ರಿಯಿಸಿರುವ ಮಾಧುಸ್ವಾಮಿ “ಏನಪ್ಪ ಮಾಡ್ಲಿ.. ಇದೆಲ್ಲ ನನಗೆ ಗೊತ್ತು, ಬಡ್ಡಿ ಹೊಡ್ಕೊಂಡು ತಿಂತಾರೆ ಅಂತ ಸನ್ಮಾನ್ಯ ಸೋಮಶೇಖರ್ ಅವರ ಗಮನಕ್ಕೂ ತಂದಿದ್ದೇನೆ. ಅವರೇನು ಕ್ರಮ ಜರುಗಿಸ್ತಾ ಇಲ್ವಲ್ಲ… ಏನ್ ಮಾಡೋದು? ನಾನೇ ಕಟ್ಟಿದ್ದೀನಿ ಮಾರಾಯಾ, ರೈತರಷ್ಟೇ ಅಲ್ಲ ನನ್ನ ಹತ್ರನೂ ತಗೊಂಡವೋ” ಎಂದು ಹೇಳಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ಅವರು, “ಸರ್ಕಾರ ನಡೀತಾ ಇಲ್ಲ, ಮ್ಯಾನೇಜ್‌ ಮಾಡ್ತಿದ್ದೀವಿ ಅಷ್ಟೆ. ಇನ್ನು ಎಂಟು ತಿಂಗಳು ತಳ್ಳಿದ್ರೆ ಸಾಕು ಅಂತ ತಳ್ತಾ ಇದ್ದೀವಿ” ಎಂದು ಹೆಳಿದ್ದಾರೆ.

ಅವರ ಈ ಕೊನೆಯ ಮಾತುಗಳೇ ಈಗ ಮಾಧುಸ್ವಾಮಿ ವಿರುದ್ಧ ಯಡಿಯೂರಪ್ಪ ಬಣ ತಿರುಗಿಬೀಳಲು ಕಾರಣವಾಗಿದೆ.

ಕಾಂಗ್ರೆಸ್ ತೊರೆದು ಬಂದಿರುವ ಎಸ್ ಟಿ ಸೋಮಶೇಖರ್ ಅವರ ಮೇಲೆಯೇ ಮಾಧುಸ್ವಾಮಿ ಆರೋಪ ಮಾಡಿರುವುದರಿಂದ ಅವರು ಕೆಂಡವಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಬಿ  ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಮಾಧುಸ್ವಾಮಿ ಸಂಘ ಪರಿವಾರದ ನಾಯಕರ ಜತೆಗೆ ಸಖ್ಯ ಬೆಳಿಸಿದ್ದಾರೆ ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ಸಂಘ ಪರಿವಾರ ಮತ್ತು ಮೂಲ ಬಿಜೆಪಿ ಬಣ ಬಸವರಾಜ ಬೊಮ್ಮಾಯಿ ವಿರುದ್ಧ ತಿರುಗಿಬಿದ್ದಿದೆ. ಇದೇ ಸಂದರ್ಭದಲ್ಲಿ ಜೆ ಸಿ ಮಾಧುಸ್ವಾಮಿ ಸಹ ಬಸವರಾಜ ಬೊಮ್ಮಾಯಿ ವಿರೋಧಿ ಬಣದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಯಡಿಯೂರಪ್ಪ ಬಣದ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಜೆಪಿಯ ಯಡಿಯೂರಪ್ಪ ಬಣದ ಸಚಿವರಾದ ಎಸ್ ಟಿ ಸೋಮಶೇಖರ್, ಮುನಿರತ್ನ ಹಾಗೂ ಶ್ರೀರಾಮುಲು ಮಾತನಾಡಿ, “ಮಾಧುಸ್ವಾಮಿ ಮಾತನಾಡಿದ್ದು ಸರಿಯಲ್ಲ” ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, 'ಈಗ ಎಲ್ಲವೂ ಸರಿಯಾಗಿದೆ' ಎಂದು ಹೇಳಿದ್ದಾರೆ.

ಹಿಂದೂ ಕಾರ್ಯಕರ್ತರ ಹತ್ಯೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದ ಸಂಘ ಪರಿವಾರ ಮತ್ತು ಮೂಲ ಬಿಜೆಪಿಗರು ಮಾಧುಸ್ವಾಮಿ ವಿಚಾರದಲ್ಲಿ ಮಾತನಾಡದೆ ಮೌನವಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. 

ಟಿಕೆಟ್ ಕೈತಪ್ಪುವ ಆತಂಕ: ಸಂಘ ಪರಿವಾರದ ಓಲೈಕೆಗೆ ಮುಂದಾದ ಮಾಧುಸ್ವಾಮಿ

ಬಿ ಎಸ್ ಯಡಿಯೂರಪ್ಪ ಕಾರಣಕ್ಕಾಗಿ 2013ರಲ್ಲಿ ಕೆಜೆಪಿ ಸೇರಿದ ಮಾಧುಸ್ವಾಮಿ, 2018ರಲ್ಲಿ ಸುಲಭವಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದರು. ಸಂಘ ಪರಿವಾರ ಮೂಲದ ಕಿರಣ್‌ಕುಮಾರ್ ಅವರನ್ನು ಬದಿಗೆ ಸರಿಸಿ ಟಿಕೆಟ್ ಪಡೆದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತ ವಿಭಜನೆಯ ಕಾರಣದಿಂದ ಅಚ್ಚರಿ ಎಂಬಂತೆ ಗೆದ್ದೇಬಿಟ್ಟಿದ್ದರು. 

ಈ ಸುದ್ದಿ ಓದಿದ್ದೀರಾ?: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆಪಡುವವರಲ್ಲಿ ನಾನೂ ಒಬ್ಬ: ಸಚಿವ ಶ್ರೀರಾಮುಲು

2023ರ ಚುನಾವಣೆಯಲ್ಲಿ ಕಿರಣ್‌ಕುಮಾರ್ ಅವರಿಗೇ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ. ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೆ ಉತ್ತಮ ಒಡನಾಟವಿಟ್ಟುಕೊಳ್ಳದ ಮಾಧುಸ್ವಾಮಿಗೆ ಈಗ ಬಿಜೆಪಿ ಅನಿವಾರ್ಯವಾಗಿದೆ. ಮುಂದಿನ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ  ಬಿ ಎಸ್ ಯಡಿಯೂಪ್ಪ ಅವರ ಮಾತು ನಡೆಯುವುದಿಲ್ಲ ಎಂಬ ಅಂದಾಜಿನ ಜತೆಗೆ, ಮಾಜಿ ಬಿಜೆಪಿ ಶಾಸಕ ಕಿರಣ್‌ಕುಮಾರ್ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ಮಾಧುಸ್ವಾಮಿಗೆ ಆತಂಕ ಮೂಡಿಸಿದೆ. 

ಇದೇ ಕಾರಣಕ್ಕೆ ಯಡಿಯೂರಪ್ಪ ಬಣದ ಜತೆಗೆ ಅಂತರ ಕಾಯ್ದುಕೊಂಡಿರುವ ಮಾಧುಸ್ವಾಮಿ, ಈಗ ಆರ್‍‌ಎಸ್‌ಎಸ್ ಮುಖಂಡರ ಜತೆಗೆ ಸಖ್ಯ ಬೆಳೆಸಿ, ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಂಘ ಪರಿವಾರದ ಮುಖಂಡರ ಆಸೆ ಮತ್ತು ಆಶಯಗಳಂತೆ ಕಾನೂನುಗಳನ್ನು ರಚಿಸಿ ಸದನದಲ್ಲಿ ಮಂಡಿಸುವಲ್ಲಿ ಅವರು ಹಿಂದೆ ಉಳಿದಿಲ್ಲ.  ಸಂಘ ಪರಿವಾರದ ನಾಯಕರಂತೆ ಸರ್ಕಾರದ ನಾಯಕತ್ವದ ವಿರುದ್ಧ ಬಿಡುಬೀಸು ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ.

ತಾವೇ ಕಾನೂನು ಸಚಿವರಾಗಿರುವ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸಾರ್ವಜನಿಕವಾಗಿ ಹೇಳಿರುವ ಜೆ ಸಿ ಮಾಧುಸ್ವಾಮಿ ಅವರ ಮಾತಿನ ಹಿಂದಿನ ಮರ್ಮ ಏನೆಂಬ ಬಗ್ಗೆ ವಿವಿಧ ಆಯಾಮಗಳಲ್ಲಿ  ಈಗ ಚರ್ಚೆ ನಡೆಯುತ್ತಿದೆ. 2023ರ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಖಚಿತ ಮಾಹಿತಿ ಮಾಧುಸ್ವಾಮಿಗೆ ಸಿಕ್ಕಿದೆಯಾ? ಅಥವಾ ಯಡಿಯೂರಪ್ಪ ಬಣ ತೊರೆದು ಸಂಘ ಪರಿವಾರದ ಬಣ ಸೇರಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ರಾ ಎಂಬುದರ ಬಗ್ಗೆ ತಿಳಿಯಲು ಚುನಾವಣೆವರೆಗೂ ಕಾಯಲೇಬೇಕಿದೆ.

ಬಿಜೆಪಿ ಉನ್ನತ ಮೂಲಗಳ ಪ್ರಕಾರ, ಜೆ ಸಿ ಮಾಧುಸ್ವಾಮಿ ಈಗಾಗಲೇ ಆರ್‌ಎಸ್‌ಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕೆಲವೇ ದಿನಗಳಲ್ಲಿ, ಸಂಘ ಪರಿವಾರದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಮಾಧುಸ್ವಾಮಿ ಮೇಲೆ ಮುಗಿಬಿದ್ದಿದ್ದಾರೆ ಎನ್ನಲಾಗುತ್ತಿದೆ.      

ನಿಮಗೆ ಏನು ಅನ್ನಿಸ್ತು?
2 ವೋಟ್
eedina app