ಖಾಸಗಿ ವ್ಯಕ್ತಿಗಾಗಿ ಪರಿಶಿಷ್ಟರ ನಿಧಿ ದುರ್ಬಳಕೆ | ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಗೆ ಒತ್ತಾಯ

  • ಉದ್ಯಮಿಯ ಜಲ್ಲಿ ಕ್ರಷರ್‌ಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣ
  • ಕ್ರಷರ್‌ ಮಾಲೀಕನೇ ರಸ್ತೆ ಕಾಮಗಾರಿಯ ಗುತ್ತಿಗೆದಾರ

ಖಾಸಗಿ ಉದ್ಯಮಿಯೊಬ್ಬರಿಗಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಎರಡು ಕೋಟಿ ರೂಪಾಯಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿಧಿ ದುರ್ಬಳಕೆ ಮಾಡಿದ್ದಾರೆ ಎಂದು ಉಡುಪಿಯ ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

"ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ವಿಶೇಷ ಗಮನಹರಿಸಲು ಕೇಂದ್ರ ಸರ್ಕಾರದಿಂದ ಟ್ರೈಬಲ್ ಸಬ್ ಪ್ಲಾನ್ (ಎಸ್‌ಸಿಎಸ್‌ಪಿ/ಟಿ.ಎಸ್.ಪಿ) ಯೋಜನೆಯನ್ನು 1975ರಲ್ಲಿ ರೂಪಿಸಿಲಾಗಿತ್ತು. ಈ ಯೋಜನೆಯ ಹೆಸರಿನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ ಕರ್ಜೆಯಲ್ಲಿ ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆಯೊಂದನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಅಲ್ಲದೇ, ಇದು ಸರ್ವೇ ನಂಬರ್ 147ರ ಮೀಸಲು ಅರಣ್ಯ ಭೂಮಿಯಲ್ಲೇ ರಸ್ತೆ ನಿರ್ಮಾಣ ಮಾಡಲಾಗಿದೆ" ಎಂದು ಆರೋಪಿಸಿರುವ ಸಾಮಾಜಿಕ ಹೋರಾಟ ಸಮಿತಿ-ಕರ್ನಾಟಕ, ದಲಿತ ಸಂಘರ್ಷ ಸಮಿತಿ (ಭೀಮವಾದ), ಆರ್‌ಪಿಐಕೆ ಉಡುಪಿ ಜಿಲ್ಲಾ ಸಮಿತಿಯವರು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

Image

ಈ ಸಂಬಂಧ ಈ ದಿನ. ಕಾಮ್ ಜೊತೆಗೆ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ, "ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಪರಿಶಿಷ್ಟರ ನಿಧಿಯಲ್ಲಿ ಎರಡು ಕೋಟಿ ರೂಪಾಯಿಯನ್ನು ರಸ್ತೆಗಾಗಿ ಮಂಜೂರಾತಿ ಪಡೆದಿದ್ದಾರೆ. ಹೊಸೂರು ಗ್ರಾಮದ ಪರಿಶಿಷ್ಟ ಪಂಗಡದ ಸುಮತಿ ಬಾಯಿ ಎಂಬವರ ಮನೆಗೆ ಸಂಪರ್ಕ ರಸ್ತೆ ಎಂದು ಯೋಜನೆ ರೂಪಿಸಿ, ಸುಮಾರು ಇಪ್ಪತ್ತೈದು ಅಡಿಗಳಷ್ಟು ಅಗಲದ ಎರಡು ಕಿಲೋ ಮೀಟರ್ ಉದ್ದದ ಡಾಂಬರು ರಸ್ತೆ ನಿರ್ಮಿಸಲಾಗಿದೆ. ಸದರಿ ರಸ್ತೆ ಸುಮತಿ ಬಾಯಿ ಮನೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮಾಡಿದ ರಸ್ತೆ ಅಲ್ಲವೇ ಅಲ್ಲ. ಈ ರಸ್ತೆ ಪ್ರಭಾವಿ ಖಾಸಗಿ ವ್ಯಕ್ತಿಯ ದುರ್ಗಾ ಪರಮೇಶ್ವರಿ ಜೆಲ್ಲಿ ಕ್ರಷರ್‌ಗೆ ಹೋಗುವ ರಸ್ತೆ. ಈ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರ ಕೂಡ ಇದೇ ಜಲ್ಲಿ ಕ್ರಷರ್ ಮಾಲೀಕ ತಡಾಲು ಸುರೇಶ್ ಶೆಟ್ಟಿ. ಮಹಿಳೆಯ ಜೋಪಡಿ ಮನೆಗೆ ಹೋಗಲು 2 ಕೋಟಿಯ ರಸ್ತೆ ಬೇಕಾ?" ಎಂದಿದ್ದಾರೆ.

"ಪರಿಶಿಷ್ಟ ಪಂಗಡದ ನಿಧಿಯನ್ನು ದುರ್ಬಳಕೆ ಮಾಡಿ ಮೀಸಲು ಅರಣ್ಯದಲ್ಲಿ ರಸ್ತೆ ಮಾಡಲಾಗಿದೆ. ಅಕ್ರಮವಾಗಿ ಸರ್ವೇ ನಂಬರ್ 147ರ ಮೀಸಲು ಅರಣ್ಯ ಭೂಮಿಯಲ್ಲೇ  ರಸ್ತೆ ನಿರ್ಮಾಣವಾಗುತ್ತಿದೆ. ಈ  ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರ ಕೂಡ ತಡಾಲು ಸುರೇಶ್ ಶೆಟ್ಟಿ ಎಂಬ ಪ್ರಭಾವಿ ವ್ಯಕ್ತಿಯಾಗಿದ್ದು, ಈಗಾಗಲೇ 35 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. ಅಲ್ಲದೇ, ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ್ದಾರೆ. ಮಾತ್ರವಲ್ಲದೆ ಅರಣ್ಯ ಇಲಾಖೆಯ ಭೂಮಿಗೆ ಅಕ್ರಮವಾಗಿ ಬೇಲಿ ನಿರ್ಮಿಸಿದ್ದಾರೆ" ಎಂದು ಸಾಮಾಜಿಕ ಕಾರ್ಯಕರ್ತ ಜಯಕರ ನಾಯ್ಕ್  ಈ ದಿನ.ಕಾಮ್‌ಗೆ ಮಾಹಿತಿ ನೀಡಿದರು.

Image
ಸುರೇಶ್ ಶೆಟ್ಟಿ ಮಾಲಕತ್ವದ ಜಲ್ಲಿ ಕ್ರಷರ್

"ಮೀಸಲು ಅರಣ್ಯ ಭೂಮಿಯಲ್ಲಿ ಯಾವುದೇ ರಸ್ತೆ ಎನ್ನುವುದಕ್ಕೆ ದಾಖಲೆ ಪತ್ರಗಳೇ ಇಲ್ಲದೆ ಜನಪ್ರತಿನಿಧಿಗಳಿಗೆ, ಉನ್ನತ ಮಟ್ಟದ ಅಧಿಕಾರಿಗಳಿಗೆ ಸುಳ್ಳು ಹಾಗೂ ತಪ್ಪು ಮಾಹಿತಿ, ದಾಖಲೆ ಗಳನ್ನು ನೀಡಲಾಗಿದೆ. ತನ್ನ ಸ್ವಂತ ಜೆಲ್ಲಿ ಕ್ರಷರ್ ಗೆ ಪರಿಶಿಷ್ಟರ ನಿಧಿಯಿಂದ ಡಾಂಬಾರು ರಸ್ತೆ ನಿರ್ಮಾಣ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಮಾತ್ರವಲ್ಲ ದಲಿತರ ನಿಧಿಯನ್ನು ದುರ್ಬಳಕೆ ಮಾಡಿಕೊಂಡು ಸಚಿವ ಕೋಟ ದಲಿತ ಸಮುದಾಯಕ್ಕೆ ದೌರ್ಜನ್ಯ ಎಸಗಿದ್ದಾರೆ.ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ ಮೀಸಲು ಅರಣ್ಯ ಭೂಮಿ ಎನ್ನುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ  ಕ್ಯಾರೇ ಇಲ್ಲದಂತೆ ವರ್ತಿಸುತ್ತಿದ್ದಾರೆ" ಎಂದು ಜಯಕರ ನಾಯ್ಕ್ ಹೇಳಿದರು. 

ಕಾಮಗಾರಿ ಬಗ್ಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಖುದ್ದಾಗಿ ನಾನು ದೂರು ನೀಡಿದ್ದೆ. ಅದಕ್ಕೆ ಈ ಕೂಡಲೇ ಕಾಮಗಾರಿ ನಿಲ್ಲಿಸಿ ಅದನ್ನು ಬೇರೆ ಪರಿಶಿಷ್ಟ ಪಂಗಡದ ಕಾಲೊನಿಗೆ ಬಳಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತದನಂತರ ಮತ್ತೆ ಫೋನ್ ಮುಖಾಂತರ ತಿಳಿಸಿದಾಗ "ಇದು ನಾನು ಬೇಡ ಬೇಡ ಎಂದರೂ ನಿಮ್ಮ ಕ್ಷೇತ್ರದ ಶಾಸಕ ರಘುಪತಿ ಭಟ್ ರವರ ಒತ್ತಡದ ಮುಂದೆ ನನಗೇನು ಮಾಡಬೇಕು ಎಂದು ಗೊತ್ತಾಗುವುದಿಲ್ಲ" ಎಂದು ಅಸಹಾಯಕರಾಗಿ ನುಡಿದಿದ್ದಾರೆ ಎಂದು ಜಯಕರ್ ತಿಳಿಸಿದ್ದಾರೆ.

Image
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ

"ಪರಿಶಿಷ್ಟ ಪಂಗಡದ ಸುಮತಿ ಬಾಯಿ ಎಂಬವರ ಮನೆಗೆ ಹೋಗಲು ಬೇರೆನೇ ರಸ್ತೆ ಇದೆ.  ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ದಲಿತರ ನಿಧಿ ದುರ್ಬಳಕೆ ಮಾಡಿದ್ದಾರೆ. ಒಟ್ಟಾಗಿ ದಲಿತರಿಗೆ ದೌರ್ಜನ್ಯ ಎಸಗಲೇ ಬೇಕು ಎಂಬ ಉದ್ದೇಶದಿಂದಲೇ ಈ ಕೆಲಸ ಮಾಡಲಾಗಿದೆ" ಎಂದವರು ಆರೋಪಿಸಿದರು.

"ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಜನಪ್ರತಿನಿಧಿಗಳು, ಸಂಬಂಧಪಟ್ಟ ಎಲ್ಲ ಇಲಾಖಾಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಹಾಗೂ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅರಣ್ಯ ಭೂಮಿಯನ್ನು ವಿರೂಪಗೊಳಿಸಿರುವ ಕ್ರಷರ್ ಮಾಲೀಕ ಹಾಗೂ ತಡಾಲು ಸುರೇಶ್ ಶೆಟ್ಟಿ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿ, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹ" ಎಂದು ಶೇಖರ್ ಹಾವಂಜೆ ಈ ದಿನ.ಕಾಮ್‌ಗೆ ತಿಳಿಸಿದರು.

ಹೋರಾಟಗಾರರ ಆರೋಪದ ಬಗ್ಗೆ ಈ ದಿನ.ಕಾಮ್ ಗುತ್ತಿಗೆದಾರ ಹಾಗೂ ಜೆಲ್ಲಿ ಕ್ರಷರ್ ಮಾಲೀಕ ಸುರೇಶ್ ಶೆಟ್ಟಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಅಧಿಕಾರಿಗಳು ಕಂಗಾಲು.!
ಹೋರಾಟಗಾರರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಬ್ರಹ್ಮಾವರ ತಹಶೀಲ್ದಾರ್, ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಹೆಬ್ರಿ ವಲಯ ಅರಣ್ಯಾಧಿಕಾರಿ, ಬ್ರಹ್ಮಾವರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು.

Image

ಈ ವೇಳೆ ಅರಣ್ಯ ಇಲಾಖೆ ಹಾಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೋರಾಟಗಾರರು, "ನಿಮ್ಮ ತಪ್ಪು ಇಲ್ಲ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಜನರು ಪ್ರಜ್ಞಾವಂತರಿದ್ದಾರೆ. ಆದ್ದರಿಂದ ಸುಳ್ಳು ಮಾಹಿತಿಯನ್ನು ನಮಗೆ ನೀಡಬೇಡಿ. ಮಾಧ್ಯಮಗಳ ಮುಂದೆ ದಾಖಲೆ ಸಹಿತ ನೀಡಿ" ಎಂದು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಲ್ಲಿ ಯಾವುದೇ ದಾಖಲೆಗಳಿರಲಿಲ್ಲ. 

ಆರ್‌ಟಿಐ ಹೋರಾಟಗಾರರಾದ ಸತೀಶ್ ಪೂಜಾರಿ, ಸದಾಶಿವ ಶೆಟ್ಟಿ, ಗೋಪಾಲ್ ಇಸರ್ ಮಾರ್, ರಮೇಶ್ ಹರಿಖಂಡಿಗೆ ಸೇರಿದಂತೆ ದಲಿತ ಸಂಘರ್ಷ ಸಮಿತಿ (ಭೀಮವಾದ) ಹಾಗೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

ನಿಮಗೆ ಏನು ಅನ್ನಿಸ್ತು?
3 ವೋಟ್