ಅಧಿಕಾರಕ್ಕಾಗಿ ಎಲ್ಲಿಗೆ ಬೇಕಾದರೂ ‘ಜಂಪ್’ ಮಾಡುವ ‘ಜಂಪಿಂಗ್ ಸ್ಟಾರ್' ಎಂದು ಸಚಿವ ಸುಧಾಕರ್ ಕಾಲೆಳೆದ ಕಾಂಗ್ರೆಸ್

  • ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಏಟಿಗೆ ಕಾಂಗ್ರೆಸ್ ಪ್ರತಿ ಟ್ವೀಟ್
  •  ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ವಿರುದ್ಧ ಸರಣಿ ಟ್ವೀಟ್

ಅಧಿಕಾರಕ್ಕಾಗಿ ಎಲ್ಲಿಗೆ ಬೇಕಾದರೂ ‘ಜಂಪ್’ ಮಾಡುವ ಸಿದ್ಧಾಂತವಿಲ್ಲದ ‘ಜಂಪಿಂಗ್ ಸ್ಟಾರ್' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಅವರನ್ನು ಕರ್ನಾಟಕ ಕಾಂಗ್ರೆಸ್ ಲೇವಡಿ ಮಾಡಿದೆ.

“ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ! ಶೇ.40 ಕಮಿಷನ್ ಸರ್ಕಾರದಲ್ಲಿ '3ನೇ ಮುಖ್ಯಮಂತ್ರಿ' ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ! ‘ಪಪ್ಪೆಟ್ ಮುಖ್ಯಮಂತ್ರಿ’ ಬಸವರಾಜ ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. 

ಕಾಂಗ್ರೆಸ್ ಟ್ವೀಟ್‌ಗೆ ಪ್ರತಿಯಾಗಿ ಮತ್ತೊಂದು ಟ್ವೀಟ್ ಮಾಡಿದ್ದ ಸುಧಾಕರ್, “ಗಾಜಿನ ಮನೆಯಲ್ಲಿ ನಿಂತು ಅನ್ಯರತ್ತ ಕಲ್ಲು ತೂರುತ್ತಿರುವ ಕಾಂಗ್ರೆಸ್ಸಿಗರ ಮನಸ್ಥಿತಿಯ ಬಗ್ಗೆ ಅಯ್ಯೋ ಎನ್ನಿಸುತ್ತಿದೆ. ದಿಲ್ಲಿ ಮಾಲೀಕರು ಕಳುಹಿಸಿದ ಚೀಟಿ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಘನ ಉದಾಹರಣೆ ನಿಮ್ಮ ಪಕ್ಷಕ್ಕೆ ಮಾತ್ರ ಇದೆ” ಎಂದಿದ್ದರು.

ಸುಧಾಕರ್ ಟ್ವೀಟ್ ನಂತರ ಕಾಂಗ್ರೆಸ್, “ಅವಕಾಶವಾದಿ ಸುಧಾಕರ್ ಅವರೇ, ಇತ್ತೀಚಿನವರೆಗೂ ಗಾಂಧಿ ಪರಿವಾರವನ್ನು ಹೊಗಳುತ್ತಿದ್ದಿರಿ, ಈಗ 'ನಾಗಪುರದ ನೌಕರರ ಸೇನೆ'ಗೆ ಸೇರಿದ ಮಾತ್ರಕ್ಕೆ ತಮ್ಮನ್ನು ನಡುಮನೆಗೆ ಬಿಟ್ಟುಕೊಳ್ಳುವುದಿಲ್ಲ ಕೇಶವಕೃಪ! ಸಮಾಧಾನವಿರಲಿ! ಕೋವಿಡ್ ಹೆಸರಲ್ಲಿ ಲೂಟಿ ನಡೆಸಿ ಪಿಎಸಿಗೆ (Pradeshik Armed Constabulary) ಲೆಕ್ಕ ನೀಡದೆ ತಲೆತಪ್ಪಿಸಿಕೊಂಡ ಮಾತ್ರಕ್ಕೆ ತಾವು 'ಸಾಚಾ' ಆಗಲಾರಿರಿ” ಎಂದು ಲೇವಡಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: 'ನ್ಯಾಷನಲ್ ಹೆರಾಲ್ಡ್' ಪ್ರಕರಣ ಅಘೋಷಿತ ತುರ್ತುಪರಿಸ್ಥಿತಿಗೆ ಸಾಕ್ಷಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

“ಅಧಿಕಾರಕ್ಕಾಗಿ ಎಲ್ಲಿಗೆ ಬೇಕಾದರೂ ಜಂಪ್ ಮಾಡುವ ಸಿದ್ಧಾಂತವಿಲ್ಲದ 'ಜಂಪಿಂಗ್ ಸ್ಟಾರ್' ಸುಧಾಕರ್ ಅವರೇ, ಈ ಸರ್ಕಾರದ ಭ್ರಷ್ಟಾಚಾರ ಪರ್ವದಲ್ಲಿ ನಿಮ್ಮದೇ ಸಿಂಹಪಾಲು, ಈ ಸರ್ಕಾರಕ್ಕೆ ಸೋಂಕಿತ ಸರ್ಕಾರ ಎಂಬ ಬಿರುದು ಬಂದಿದ್ದು ನಿಮ್ಮಿಂದಲೇ ಅಲ್ಲವೇ? ಕೋವಿಡ್ ಸಂದರ್ಭದಲ್ಲಿ ಹೆಣದ ಮೇಲೆ ಹಣ ಮಾಡಿದ ತಮಗೆ ಪಾಪಪ್ರಜ್ಞೆ ಕಾಡದಿರುವುದು ದುರಂತ!” ಎಂದು ಟೀಕೆ ಮಾಡಿದೆ.

“ಜನ ಸಾಯುವಾಗ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೋಜಿಗೆ ಇಳಿದಿದ್ದ 'ಸ್ವಿಮ್ಮಿಂಗ್ ಸ್ಟಾರ್' ಸುಧಾಕರ್ ಅವರೇ, ಬೆಲ್ಲ ಇರುವಲ್ಲಿ ಇರುವೆ ಎಂಬಂತೆ ಯಾರೇ ಮುಖ್ಯಮಂತ್ರಿ ಆದರೂ ಅವರ ಹಿಂದೆ ಸುತ್ತುವುದು ನಿಮ್ಮ ಹಳೆ ಚಾಳಿ! ತಾವೆಷ್ಟೇ ನವರಂಗಿ ನಾಟಕವಾಡಿದರೂ ಬಿಜೆಪಿಯಲ್ಲಿ ತಾವು ಸದಾ 'ವಲಸಿಗ'ನೇ! ಅಂದಹಾಗೆ ಮುಂದೆ ಅಧಿಕಾರಕ್ಕಾಗಿ ಯಾವ ಕಡೆ ನಿಮ್ಮ ಜಂಪ್” ಎಂದು ಪ್ರಶ್ನಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್