ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆಗೆ ಮೋದಿ ಆಗಮನ; ಸಿದ್ಧತೆ ಪರಿಶೀಲಿಸಿದ ಸಿಎಂ ಬೊಮ್ಮಾಯಿ

Basavaraj Bommai
  • ಪ್ರಧಾನಿಗಳಿಂದ ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ
  • ಕೆಎಸ್ಆರ್ ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಮ್ದಾಣದಲ್ಲಿ ರಾಜ್ಯ ಸರ್ಕಾರದ ವತಿಯಿಂದ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ಕೊನೇ ಹಂತದ ಸಿದ್ಧತೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಪರಿಶೀಲಿಸಿದರು.

ಗುರುವಾರ ಕೆಂಪೇಗೌಡ ಥೀಮ್ ಪಾರ್ಕ್ ಮತ್ತು ಬಹಿರಂಗ ಸಭೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, “ನಮ್ಮ ಹೆಮ್ಮೆಯ ನಾಡಪ್ರಭುಗಳ ಹೆಸರಿನಲ್ಲಿರುವ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಅಭಿವೃದ್ಧಿಗೆ ಪ್ರೇರಣೆಯಾಗುವ ದೃಷ್ಟಿಯಿಂದ ನಿರ್ಮಿಸಲಾಗಿದೆ” ಎಂದರು.

Eedina App

“ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ನಿರ್ಮಿಸಿದವರು ರಾಮ್ ಸುತಾರಾ. ಇಡೀ ಭಾರತದಲ್ಲಿ ಅತ್ಯಂತ ಶ್ರೇಷ್ಠ ಶಿಲ್ಪಿ. ಅಹಮದಾಬಾದ್‌ನಲ್ಲಿರುವ ವಲ್ಲಭಭಾಯಿ ಪಟೇಲ್ ಅವರ ಐಕ್ಯತಾ ಮೂರ್ತಿಯನ್ನೂ ಹಾಗೂ ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನು ನಿರ್ಮಿಸಿದ ಖ್ಯಾತಿ ಅವರದ್ದು. ನಾಳೆ (ನ.11) ಪ್ರಧಾನಿಮಂತ್ರಿಗಳು ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಅವರ ಕೈಚಳಕದಿಂದ ಇಷ್ಟು ಬೃಹತ್ ಮೂರ್ತಿ ಮೈದಳೆದಿದೆ. ಸಮಸ್ತ ಕನ್ನಡ ನಾಡಿನ ಜನತೆಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ” ಎಂದು ಹೇಳಿದರು.

ಪ್ರಧಾನಿಯಿಂದ ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ

AV Eye Hospital ad

“ಪ್ರಧಾನಮಂತ್ರಿಗಳು ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಮಾಡಲಿದ್ದಾರೆ. ಕನಕ ಜಯಂತಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಆಗಮಿಸಿರುವುದು ಯೋಗಾಯೋಗಾ. ಒಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಮಂತ್ರಿಗಳು ಸಮಸ್ತ ಮಾನವಕುಲಕ್ಕೆ ದಾರಿದೀಪವಾಗಿರುವ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಪಕ್ಕದಲ್ಲಿಯೇ ಇರುವ ವಾಲ್ಮೀಕಿ ಮೂರ್ತಿಗೂ ಪುಷ್ಪಾರ್ಚನೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ | ಅನಾವರಣಕ್ಕೆ ಸಿದ್ಧವಾಯ್ತು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’; ನಾಳೆ ಪ್ರಧಾನಿಯಿಂದ ಉದ್ಘಾಟನೆ

ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ

“ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ವಂದೇ ಭಾರತ್- ಹೈಸ್ಪೀಡ್ ರೈಲಿನ ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಂಗಳೂರು- ಮೈಸೂರು, ಚನ್ನೈ ಕಡೆ ಪ್ರಯಾಣ ಮಾಡುವುದು, ಬೆಂಗಳೂರು- ಮೈಸೂರು ಪ್ರಯಾಣದ ಅವಧಿಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಲುಪಬಹುದು. ಇದಕ್ಕಾಗಿ ಪ್ರಯಾಣಿಕರ ಬಹಳ ದಿನಗಳ ಬೇಡಿಕೆ ಇತ್ತು. ಅದನ್ನು ಪ್ರಧಾನಿಗಳು ವಂದೇ ಭಾರತ್ ಯೋಜನೆಯಲ್ಲಿ ಸೇರಿಸಿದ್ದು, ಭಾರತದಲ್ಲಿ ಐದನೇ ರೈಲು ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಹೈಸ್ಪೀಡ್ ರೈಲನ್ನು ಉದ್ಘಾಟನೆ ಮಾಡುತ್ತಿರುವುದು ಆ ಭಾಗದ ಪ್ರಯಾಣಿಕರಿಗೆ ಹಾಗೂ ಆರ್ಥಿಕ ಬೆಳವಣಿಗೆಗೂ ಕೂಡ ಅನುಕೂಲವಾಗಲಿದೆ” ಅಭಿಪ್ರಾಯ ವ್ಯಕ್ತಪಡಿಸಿದರು.

“ನಂತರ, ವಿಮಾನ ನಿಲ್ದಾಣಕ್ಕೆ ಆಗಮಿಸಿ 2ನೇ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಟರ್ಮಿನಲ್ -2 ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸುಮಾರು 25 ಲಕ್ಷ ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಈಗಿರುವುದು 35 ಲಕ್ಷ ಸಾಮರ್ಥ್ಯವುಳ್ಳದ್ದು, ದೆಹಲಿಯ ನಂತರ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ. ಅದರ ಉದ್ಘಾಟನೆಯ ನಂತರ ಪ್ರಗತಿ ಪ್ರತಿಮೆ ಅನಾವರಣ ಮಾಡಿ ಸಾರ್ವಜನಿಕ ಸಭೆಗೆ ತೆರಳುತ್ತಾರೆ. ಅಲ್ಲಿ ಭಾಷಣ ಮುಗಿಸಿ ಮುಂದಿನ ಪ್ರಯಾಣ ಮಾಡಲಿದ್ದಾರೆ” ಎಂದು ಪ್ರಧಾನಮಂತ್ರಿಗಳ ಪ್ರವಾಸದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ‌. ಸಿ ಎನ್ ಅಶ್ವತ್ಥ್ ನಾರಾಯಣ, ಆರ್ ಅಶೋಕ್, ಸಿ‌ ಸಿ ಪಾಟೀಲ್ ಹಾಗೂ ಮತ್ತಿತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app