ವಿಧಾನಸೌಧದಲ್ಲೇ 40% ಕಮಿಷನ್ ಲೆಕ್ಕ ಕೇಳಿದ ಎಂ ಪಿ ರೇಣುಕಾಚಾರ್ಯ

  • ʼಒಂದು ಕೋಟಿ ರೂ ಟೆಂಡರ್‌ನಲ್ಲಿ ಕಮಿಷನ್ ಹಂಚುವುದು ಹೇಗೆ?ʼ 
  • ಗುತ್ತಿಗೆದಾರರ ಸಂಘ ಕಾಂಗ್ರೆಸ್ ಏಜೆಂಟ್ ಆಗಿದೆ ಎಂದು ಆರೋಪ

ವಿಧಾನಸಭೆ ಕಲಾಪದಲ್ಲಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪದ ವಿಚಾರ ಚರ್ಚೆಗೆತ್ತಿಕೊಳ್ಳಲು ವಿಪಕ್ಷ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡನೆ ಮಾಡಿ ಸರ್ಕಾರದ ಭ್ರಷ್ಟಾಚಾರದ ಬಣ್ಣ ಬಯಲು ಮಾಡಲು ಸಜ್ಜಾಗಿದೆ.

ಇತ್ತ ಬಿಜೆಪಿ ಶಾಸಕ, ರೇಣುಕಾಚಾರ್ಯ ಅದೇ ಭ್ರಷ್ಟಾಚಾರದ ವಿಚಾರದಲ್ಲಿ ಕಮಿಷನ್ ಲೆಕ್ಕ ಕೇಳಿ ಸುದ್ದಿಯಾಗಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ ಪಿ ರೇಣುಕಾಚಾರ್ಯ, "ನಮ್ಮ ಸರ್ಕಾರದ ವಿರುದ್ಧ ಅನಾವಶ್ಯಕ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಗುತ್ತಿಗೆದಾರರ ಸಂಘ ಕಾಂಗ್ರೆಸ್ ಏಜೆಂಟರ ರೀತಿ ವರ್ತಿಸುತ್ತಿದ್ದಾರೆ. ಅವರ ಮಾತು ಕೇಳಿಕೊಂಡು ಕಾಂಗ್ರೆಸ್ ನಾಯಕರು 40% ಕಮಿಷನ್ ಬಗ್ಗೆ ಮಾತನಾಡುತ್ತಾರೆ. ಕೆಂಪಣ್ಣ ಕಾಂಗ್ರೆಸ್ ಪಕ್ಷದ ಏಜೆಂಟ್ ಇದ್ದಂತೆ, ಅವರ ಪಕ್ಷದ ಅಧ್ಯಕ್ಷರೇ ಅಕ್ರಮದ ಲೆಕ್ಕಕ್ಕಾಗಿ ಇಡಿ ತನಿಖೆ ಒಳಗಾಗುತ್ತಿದ್ದಾರೆ. ಹೀಗಿರುವ ಇವರಿಂದ ನಾವೇನು ಪಾಠ ಕಲಿಯಬೇಕು" ಎಂದು ಕಿಡಿಕಾರಿದರು.

ಎಲ್ಲ ವಿಚಾರಕ್ಕೂ ಕಮಿಷನ್ ಲೆಕ್ಕವನ್ನು ಥಳುಕು ಹಾಕಿಕೊಂಡು ಬರುವ ಇವರಿಗೆ ಕಮಿಷನ್ ಲೆಕ್ಕ ಗೊತ್ತೇ ಎಂದ ರೇಣುಕಾಚಾರ್ಯ, "ನಾನು ಇವರಿಗೆ ಸವಾಲು ಹಾಕುವೆ, ನಿಮಗೆ ತಾಕತ್ ಇದ್ರೆ ಒಂದು ಕೋಟಿ ರೂ. ಟೆಂಡರ್‌ನಲ್ಲಿ 40 ಲಕ್ಷ ಕಮಿಷನ್, ಜಿಎಸ್‌ಟಿ, ರಾಯಲ್ಟಿ ಎಲ್ಲವನ್ನು ಹೇಗೆ ಕೊಡೋಕೆ ಆಗುತ್ತೆ ಅನ್ನೋದನ್ನು ಬಿಡಿಸಿ ಹೇಳಿ" ಎಂದರು.

ಈ ಸುದ್ದಿ ಓದಿದ್ದೀರಾ? :ಮಳೆಗಾಲ ಅಧಿವೇಶನ | ಕೋಲಾಹಲ ಸೃಷ್ಟಿಸಲಿದೆಯೇ ʼ40% ಕಮಿಷನ್‌ ಮತ್ತು ಕಾಂಗ್ರೆಸ್‌ ಸರ್ಕಾರದ ನೇಮಕಾತಿ ವಿವಾದ? 

ಇದೇ ವೇಳೆ ಶಾಸಕ ಬಸವರಾಜ ದಡೇಸೂಗೂರ್ ಆಡಿಯೋ ಪ್ರಕರಣದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, "ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದರ ಬಗ್ಗೆ ತನಿಖೆ ನಡೆಸುವುದಾಗಿ ಸರ್ಕಾರ ಹೇಳಿದೆ. ದಡೇಸೂಗೂರ್ ತಪ್ಪು ಮಾಡಿದ್ದರೆ ಕ್ರಮ ಜರುಗಿಸಲಾಗುತ್ತದೆ. ನಮ್ಮ ಸರ್ಕಾರ ಪಾರದರ್ಶಕವಾಗಿ ತನಿಖೆ ಮಾಡುತ್ತದೆ. ಸರ್ಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್