ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ ಎನ್ನುವುದಕ್ಕೆ ಕಾನೂನು ಸಚಿವರ 'ಆಡಿಯೋ' ಸಾಕ್ಷಿ: ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್

  • ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲ
  • ಸಚಿವ ಜೆ ಸಿ ಮಾಧುಸ್ವಾಮಿ ಅವರ ಹೇಳಿಕೆ ಸತ್ಯ ಎಂದ ಕಾಂಗ್ರೆಸ್ ವಕ್ತಾರ

“ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಸಚಿವರು ಹಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕಮಿಷನ್ ಪಡೆಯುವ ಉದ್ದೇಶದಿಂದಲೇ ಸರ್ಕಾರವನ್ನು ತಳ್ಳುತ್ತಿದ್ದಾರಷ್ಟೆ. ಇದಕ್ಕೆ ‘ಸರ್ಕಾರ ನಡೀತಾ ಇಲ್ಲ, ಮ್ಯಾನೇಜ್ ಮಾಡ್ತಾ ಇದ್ದೀವಷ್ಟೇ’ ಎಂಬ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿಕೆಯು ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ ಎನ್ನುವುದಕ್ಕೆ ಸಾಕ್ಷಿ” ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸಲಿಲ್ಲ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ” ಎಂದು ಆರೋಪಿಸಿದರು.

“ಸಮಾಜದಲ್ಲಿ ಹಿಂದೂ-ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟಿ ಬಿಜೆಪಿಯವರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೋಮು ಗಲಭೆ ನಡೆಯುವಂತೆ ಹುನ್ನಾರ ನಡೆಸಿ ಲಾಭ ಮಾಡಿಕೊಳ್ಳಲು ಯತ್ನಿಸಲಾಗುತ್ತಿದೆ. ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ. ಹಾಗಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.

“ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಜನತೆಗೆ ಯಾವ ಯೋಜನೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದ ಅವರು, “ಸಾವರ್ಕರ್ ಮೀರ್ ಸಾದಿಕ್ ಕೆಲಸ ಮಾಡಿದ್ದರಿಂದ ಅವರಿಗೆ ಬ್ರಿಟೀಷರು ಪಿಂಚಣಿ ಕೊಡುತ್ತಿದ್ದರು” ಎಂದು ಹೇಳಿದರು.

“ಲೋಕಾಯುಕ್ತಕ್ಕೆ ವರದಿ ಸಲ್ಲಿಸುವ ಅಧಿಕಾರ ಅಷ್ಟೆ ಇತ್ತು. ಆದ್ದರಿಂದ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಎಸಿಬಿ ಸ್ಥಾಪಿಸಿದರು. ಆದರೆ, ಲೋಕಾಯುಕ್ತವನ್ನು ಮುಚ್ಚಲಿಲ್ಲ. ಬಿಜೆಪಿ ಸರ್ಕಾರವು ಎಸಿಬಿಯನ್ನು ಬಲಪಡಿಸದೆ ಭ್ರಷ್ಟಾಚಾರ, ವಸೂಲಾತಿ ಕೇಂದ್ರವನ್ನಾಗಿ ಮಾಡಿಕೊಂಡಿತು” ಎಂದು ಲಕ್ಷ್ಮಣ್ ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ‘ಸರ್ಕಾರ ನಡೀತಾ ಇಲ್ಲ..’ ಎಂಬ ಹೇಳಿಕೆ ಹಿಂದಿನ ಮರ್ಮವೇನು? ಮಾಧುಸ್ವಾಮಿ ಮೇಲೆ ಯಡಿಯೂರಪ್ಪ ಬಣ ಮುಗಿಬಿದ್ದಿದ್ಯಾಕೆ?

“ಹಿರೇಮಠ್ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಏಕೆ ಮಾತನಾಡುವುದಿಲ್ಲ? ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ಮಾಡಿರುವ ಬಗ್ಗೆ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಹೋಗಲಿ, ತಪ್ಪಿತಸ್ಥರೆಂದು ಸಾಬೀತುಪಡಿಸಲಿ” ಎಂದರು.

“ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮೊದಲಾದ ನಾಯಕರ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಹಿರೇಮಠ್ ಏಕವಚನ ಬಳಸುವುದು ಸರಿಯಲ್ಲ. ಪ್ರಚಾರದ ಗೀಳಿಗಾಗಿ ಮನಬಂದಂತೆ ಮಾತನಾಡಬಾರದು. ನಾಲಿಗೆಯ ಮೇಲೆ ಹಿಡಿತವಿಟ್ಟುಕೊಳ್ಳಬೇಕು. ಸಮಾಜಕ್ಕೆ ಏನೂ ಕೊಡುಗೆ ನೀಡದೆ ಆರೋಪಿಸುವುದು ಸರಿಯಲ್ಲ. ಏಕವಚನದಲ್ಲಿಯೇ ಮಾತು ಮುಂದುವರಿಸಿದರೆ ಸಹಿಸಿಕೊಳ್ಳಲಾಗುವುದಿಲ್ಲ. ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಏನು ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ” ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸವಾಲು ಹಾಕಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್