ಗಾಂಧೀಜಿ ಹತ್ಯೆ ಮಾಡಿದವರಿಂದಲೇ ರಾಷ್ಟ್ರ ವಿಭಜನೆ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

H D Kumaraswamy
  • ಆಗ ಇದ್ದಿದ್ದು ಅಸಲಿ ಕಾಂಗ್ರೆಸ್, ಈಗಿರುವುದು ನಕಲಿ ಕಾಂಗ್ರೆಸ್
  • ಹಲವರು ತಮ್ಮ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು

ದೇಶಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳೇ ಸ್ವಾತಂತ್ರ್ಯದ ನಂತರ ದೇಶ ವಿಭಜನೆಗೆ ಕಾರಣವಾದವು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಜೆಡಿಸ್ ರಾಜ್ಯ ಕಚೇರಿ ಬೆಂಗಳೂರಿನ ಜೆ ಪಿ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧವೂ ಟೀಕಾ ಪ್ರಹಾರ ನಡೆಸಿದರು. “ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವೇ ಬೇರೆ, ಈಗಿನ ಕಾಂಗ್ರೆಸ್ ನಕಲಿ ಕಾಂಗ್ರೆಸ್” ಎಂದು ಟೀಕಿಸಿದರು.

Eedina App

“ಒಂದು ಕಡೆ ನೆಹರೂ ಭಾವಚಿತ್ರ ಕಣ್ಮರೆ ಮಾಡುತ್ತಾರೆ. ಮತ್ತೊಂದು ಕಡೆ ಜವಾಹರಲಾಲ್ ನೆಹರೂ ರಾಷ್ಟ್ರ ವಿಭಜನೆ ಆಗಲು ಕಾರಣ ಅಂತ ನೆಪ ಹೇಳುತ್ತಾರೆ. ಅಂದು ಗಾಂಧೀಜಿ ಅವರನ್ನು ಕೊಲೆ ಮಾಡಿದವರೇ ದೇಶ ವಿಭಜನೆ ಆಗಲು ಕಾರಣ” ಎಂದು ಕುಮಾರಸ್ವಾಮಿ ದೂರಿದರು.

“ಅಂದು ನಿಮ್ಮ (ಬಿಜೆಪಿಯ) ಸಂಕುಚಿತ ಮನೋಭಾವನೆಯೇ ದೇಶ ವಿಭಜನೆ ಆಗಲು ಕಾರಣ. ಇಂದು ನೋಡಿದರೆ ನೆಹರು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದೀರಾ. 75 ವರ್ಷದ ಸವಿ ನೆನಪಿಗಾಗಿ ಬಿಜೆಪಿ ‘ಹರ್‌ ಘರ್ ತಿರಂಗಾ’ ಎಂಬ ಕಾರ್ಯಕ್ರಮ ಮಾಡಿದೆ. ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಜನರಿಗೆ ಮಂಕಬೂದಿ ಎರಚುತ್ತಿವೆ” ಎಂದು ಅವರು ಟೀಕಿಸಿದರು. 

AV Eye Hospital ad

“ಅಂದು ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಬೇರೆ. ಇಂದು ಕಾಂಗ್ರೆಸ್ ಹೆಸರೇಳಿ ರಾಜಕೀಯ ಮಾಡುವವರು ನಕಲಿ ಕಾಂಗ್ರೆಸ್ಸಿಗರು. ಅಂದು ಹಲವಾರು ಮಂದಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯ ತಂದುಕೊಟ್ಟ ನಂತರದ ದಿನಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ” ಎಂದರು.

“ಜವಾಹರಲಾಲ್ ನೆಹರು ಭಾವಚಿತ್ರ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ನೋಡಿದ್ದೇ‌ನೆ. ಅದಕ್ಕೆ ನಾವೆಲ್ಲರೂ ತಲೆತಗ್ಗಿಸುವ ಕೆಲಸವಾಗಿದೆ ಎಂಬುದು ನನ್ನ ಅಭಿಪ್ರಾಯ. ನೆಹರು ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಭಾಗವಹಿಸಿತ್ತು, ದೇಶಕ್ಕೆ ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ" ಎಂದು ನೆಹರು ಭಾವಚಿತ್ರ ಹಾಕದಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. 

“ಸಾವರ್ಕರ್ ಭಾವಚಿತ್ರ ತೆಗೆದರೆಂದು ಮುಸ್ಲಿಂ ಯುವಕರನ್ನು ಬಂಧನ ಮಾಡಿದ್ದಾರೆ. ಅಲ್ಲಿ ಸಾವರ್ಕರ್ ಭಾವಚಿತ್ರ ತೆಗೆದರೆಂಬ ಕಾರಣಕ್ಕೆ ಇಲ್ಲಿ ಟಿಪ್ಪು ಫ್ಲೆಕ್ಸ್ ಹರಿದು ಹಾಕಿದ್ದಾರೆ. ಇದು ಅಮೃತ ಮಹೋತ್ಸವ ಆಚರಿಸುವ ವಿಧಾನವೇ” ಎಂದು ಅವರು ಪ್ರಶ್ನಿಸಿದರು.

“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಬೇಕೆಂದು ಕರೆಕೊಟ್ಟಿವೆ. ಆದರೆ, ಅವರೇ ಸಂಕುಚಿತ ಮನೋಭಾವದಲ್ಲಿ ಈ ಮಹಾನ್ ದಿನವನ್ನು ಆಚರಿಸುತ್ತಿದ್ದಾರೆ. ನಾಡಿನ ಅನೇಕ ಮಹನೀಯರ ಕೊಡುಗೆ ಸ್ಮರಿಸುವಲ್ಲಿ ಸಂಕುಚಿತ ಮನೋಭಾವ ತೋರಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಊಟ, ವಸತಿ ಕೊಡದೇ ಹರ್ ಘರ್ ತಿರಂಗಾ ಮಾಡಿ ಪ್ರಯೋಜನ ಏನು? ಕೋವಿಡ್ ಅನಾಹುತ ಸಂದರ್ಭದಲ್ಲಿ ಏನೇನಾಯಿತು? ಮನೆ ಮನೆಯ ಮೇಲೆ ಬಾವುಟ ಹಾರಿಸಿ ಎಂದು ಕರೆ ಕೊಟ್ಟಿದ್ದೀರಾ. ಆದರೆ, ಎಷ್ಟೋ ಜನಕ್ಕೆ ವಾಸ ಮಾಡಲು ಮನೆ ಇಲ್ಲ. ಫ್ಲೈ ಓವರ್‍‌ಗಳ ಕೆಳಗೆ, ದೊಡ್ಡ ದೊಡ್ಡ ಪೈಪುಗಳಲ್ಲಿ ಜನ ವಾಸ ಮಾಡುತ್ತಿದ್ದಾರೆ. ಬೃಹತ್ ಜಾಥಾಗಳನ್ನು ಮಾಡಿಕೊಂಡು ಹೊರಟ್ಟಿದ್ದೀರಿ, ನಿಮ್ಮ ಜಾಥಾಗಳಿಂದ ಜನರ ಹೊಟ್ಟೆ ತುಂಬಲ್ಲ" ಎಂದರು.

ಈ ಸುದ್ದಿ ಓದಿದ್ದೀರಾ?: ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಕೈಬಿಟ್ಟಿದ್ದೇವೆ: ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್

"ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ ಹೇಳುತ್ತಾರೆ; ಉಚಿತ ಸೌಲಭ್ಯಗಳನ್ನು ಕೊಡುವುದು ನಿಲ್ಲಿಸಬೇಕು. ಎಷ್ಟೋ ಕುಟುಂಬಗಳು ಎರಡು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆ. ಅಂತಹ ಕುಟುಂಬಗಳ ಗತಿ ಏನು?" ಎಂದು ಅವರು ಬಿಜೆಪಿ ಸರ್ಕಾರಗಳನ್ನು ಪ್ರಶ್ನಿಸಿದರು. 

“ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಈ ಸ್ವಾತಂತ್ರ್ಯ ದಿನ ಪ್ರತಿ ಕನ್ನಡಿಗರಿಗೆ, ಪ್ರತಿ ಭಾರತೀಯರಿಗೆ ಮಹತ್ವದ ದಿನ. ಹಲವಾರು ಕ್ಲಿಷ್ಟಕರವಾದ ದಿನಗಳನ್ನು ಕಂಡಿದ್ದೇವೆ. ಹಂತ ಹಂತವಾಗಿ ಪ್ರಗತಿಯನ್ನು ಕಾಣುತ್ತಿದ್ದೇವೆ. ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳುವಂತಹ ವಾತಾವರಣ ಸೃಷ್ಟಿ ಮಾಡಬೇಕಿದೆ. ಇಂದು ಕನ್ನಡಿಗರಿಗೆ ಅತ್ಯಂತ ಮಹತ್ವವಾದ ದಿನ. ದೇಶಕ್ಕೆ ಬೇಕಾಗಿರೋದು ಶಾಂತಿ ಸಹಬಾಳ್ವೆ. ಪ್ರತಿಯೊಬ್ಬರೂ ತಮ್ಮ ನಡವಳಿಕೆಯಿಂದ ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಬೇಕಿದೆ” ಎಂದು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಟಿ ಎ ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್ ಮುಂತಾದವರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app