'ನ್ಯಾಷನಲ್ ಹೆರಾಲ್ಡ್' ಪ್ರಕರಣ ಅಘೋಷಿತ ತುರ್ತುಪರಿಸ್ಥಿತಿಗೆ ಸಾಕ್ಷಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

D K shivakumar
  • ನಾವೆಲ್ಲರೂ ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಅನುಯಾಯಿಗಳು
  • ತ್ರಿವರ್ಣ ಧ್ವಜವನ್ನು ಬಿಜೆಪಿಯವರು ಅಪಶಕುನ ಎಂದು ಕರೆದಿದ್ದರು

"ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅದರ ಮುಖ್ಯಸ್ಥರಿಗೆ ಕಿರುಕುಳ ನೀಡುತ್ತಿರುವುದು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾಗಿರುವುದಕ್ಕೆ ಸಾಕ್ಷಿ" ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ (ಆ.09) ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಮಾತನಾಡಿದ ಅವರು, “80 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂಬ ಸಂದೇಶದೊಂದಿಗೆ ಈ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದರು. ಇಂದು ನಾವೆಲ್ಲರೂ ಗಾಂಧೀಜಿ ಅವರ ಅನುಯಾಯಿಗಳಾಗಿ, ಬಿಜೆಪಿಯವರಿಗೆ 'ಅಧಿಕಾರ ಬಿಟ್ಟು ತೊಲಗಿ' ಎಂಬ ಸಂದೇಶ ನೀಡಬೇಕಿದೆ” ಎಂದು ಹೇಳಿದರು.

“ದೇಶದಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ. ಆದರೆ, ಇಂದು ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ರೀತಿ ಅದರ ಮುಖ್ಯಸ್ಥರಿಗೆ ಕಿರುಕುಳ ನೀಡುತ್ತಿದೆ ಎಂದು ನಾವೆಲ್ಲರೂ ನೋಡುತ್ತಿದ್ದೇವೆ. ಇದು ಅಘೋಷಿತ ತುರ್ತುಪರಿಸ್ಥಿತಿಗೆ ಸಾಕ್ಷಿ” ಎಂದು ಅವರು ಆರೋಪಿಸಿದರು.

“ನಮ್ಮ ನಾಯಕರು ನಮಗೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ, ಸಂವಿಧಾನ ತಂದುಕೊಟ್ಟಿದ್ದು, ಇದನ್ನು ಬದಲಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ, ನೆಹರೂ, ಸರ್ದಾರ್ ಪಟೇಲ್, ಅಜಾದ್ ಸೇರಿದಂತೆ ಹಲವು ನಾಯಕರ ಅಹಿಂಸಾ ಚಳವಳಿಯನ್ನು ವಿಶ್ವದ ಎಲ್ಲ ನಾಯಕರು ಮೆಚ್ಚಿದ್ದಾರೆ. ಇದು ನಮ್ಮ ಪಕ್ಷದ ಸಂಸ್ಕೃತಿ” ಎಂದರು.

“ನಾವೆಲ್ಲರೂ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಅನುಯಾಯಿಗಳು. ಲಕ್ಷಾಂತರ ಕಾಂಗ್ರೆಸ್ಸಿಗರು ಸೆರೆವಾಸ, ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇದನ್ನು ಯುವ ಪೀಳಿಗೆಗೆ ತಿಳಿಸಬೇಕು. ಆದರೆ, ಈ ತ್ರಿವರ್ಣ ಧ್ವಜವನ್ನು ಬಿಜೆಪಿಯವರು ಅಪಶಕುನ ಎಂದು ಕರೆದಿದ್ದರು” ಎಂದು ಶಿವಕುಮಾರ್ ಹೇಳಿದರು.

“ಉದಯಪುರದಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ. ಅದರ ಭಾಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲು ತೀರ್ಮಾನಿಸಿದೆವು. ಅನೇಕ ಜಿಲ್ಲೆಗಳಲ್ಲಿ 200 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಈ ಕಾಲಾವಧಿಯನ್ನು ಆಗಸ್ಟ್ 30ರವರೆಗೆ ವಿಸ್ತರಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ಆ.15 ರಂದು ರಾಜ್ಯ ರಾಜಧಾನಿಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆ ಮಾಡಲು ಸೂಚಿಸಲಾಗಿದೆ. ಅದರ ಭಾಗವಾಗಿ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದೇವೆ. ಅಂದು ಮಧ್ಯಾಹ್ನ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಈ ಪಾದಯಾತ್ರೆ ನಡೆಯಲಿದೆ. ಸಂಚಾರಕ್ಕೆ ಅನುಕೂಲವಾಗುವಂತೆ ಈ ಮಾರ್ಗ ಆಯ್ಕೆ ಮಾಡಲಾಗಿದೆ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ಕೇವಲ ನೇತೃತ್ವ ವಹಿಸಿದೆ” ಎಂದರು.

ಈ ಸುದ್ದಿ ಓದಿದ್ದೀರಾ?: ಸರ್ವೋಚ್ಛ ನ್ಯಾಯಾಲಯದ ನಿಯಮ ಮೀರಿ ‘ಬದಲಿ ನಿವೇಶನ’ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

“ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಬದುಕಿಲ್ಲ. ಮುಂದಿನ ಬಾರಿ ಸರ್ಕಾರ ಬದಲಾಗಲಿದೆ ಎಂದು ಅವರದೇ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಈ ಅವಕಾಶವನ್ನು ನಾವು ಬಳಸಿಕೊಂಡು ನಮ್ಮ ನಾಯಕರ ಮಾರ್ಗದರ್ಶನದಲ್ಲಿ ನಡೆದು ಶ್ರಮಿಸಬೇಕು. ಮನೆ ಮನೆಗೂ ತಲುಪಿ ಕಾಂಗ್ರೆಸ್ ಆಚಾರ, ವಿಚಾರ ಪ್ರಚಾರ ಮಾಡಬೇಕು. ನಮ್ಮ ಸರ್ಕಾರದ ಕೊಡುಗೆ ತಿಳಿಸಬೇಕು” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

“ಕಾಂಗ್ರೆಸ್ ಸರ್ಕಾರ ಹಲವು ತಲೆಮಾರುಗಳಿಗೆ ಅನುಕೂಲವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನೆ ಭೂಮಿಯ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ, ದೊಡ್ಡ ಉದ್ದಿಮೆಗಳು, ಕೈಗಾರಿಕೆಗಳು, ಪಿಎಸ್‌ಯುಗಳ (Public sector undertakings) ಮೂಲಕ ಉದ್ಯೋಗ ಸೃಷ್ಟಿ ಮಾಡಿ ಕಾಂಗ್ರೆಸ್ ಹಲವು ತಲೆಮಾರುಗಳಿಗೆ ನೆರವಾಗಿದೆ. ಇದಕ್ಕೆ ನಾವೆಲ್ಲರೂ ಋಣ ತೀರಿಸಬೇಕು” ಎಂದರು.

“ಬಿಜೆಪಿಯವರು ರಾಷ್ಟ್ರಧ್ವಜವನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ನಾವು 1.5 ಲಕ್ಷ ರಾಷ್ಟ್ರಧ್ವಜ, ಟೋಪಿ, ಟಿ ಶರ್ಟ್ ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಮುಖ್ಯಮಂತ್ರಿಗಳು ಉಚಿತವಾಗಿ ನೀಡಬೇಕು. ಈ ರಾಷ್ಟ್ರಧ್ವಜ ವ್ಯಾಪಾರದ ವಸ್ತುವಲ್ಲ. ಇದು ದೇಶದ ಸ್ವಾಭಿಮಾನ, ಐಕ್ಯತೆ ಸಂಕೇತ. ಇದನ್ನು ಮಾರಾಟ ಮಾಡಿ ರಾಷ್ಟ್ರಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುತ್ತಿದ್ದಾರೆ” ಎಂದು ಡಿ ಕೆ ಶಿವಕುಮಾರ್ ಆರೋಪಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್