ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂ ಮೀನು ಮಾರಾಟ ಕೇಂದ್ರ: ಮುಖ್ಯಮಂತ್ರಿ ಬೊಮ್ಮಾಯಿ

Basavaraj Bommai
  • ‘ಕೆಲ ದೇಶಗಳಲ್ಲಿ ಮೀನು ತಿನ್ನುವುದನ್ನು ಸಸ್ಯಾಹಾರ ಎನ್ನುತ್ತಾರೆ: ಬೊಮ್ಮಾಯಿ
  • ‘ಮೀನುಗಾರರಿಗೆ ಜನವರಿ ಅಂತ್ಯದೊಳಗೆ 5 ಸಾವಿರ ಮನೆ ನಿರ್ಮಾಣ

"ಮೀನು ಮೊದಲಿನಿಂದಲೂ ಮನುಷ್ಯರ ಪ್ರಮುಖ ಆಹಾರವಾಗಿದ್ದು, ಅದು ಸಸ್ಯಾಹಾರಿಯಾಗಿದೆ. ಆದರೆ, ಮೀನು ತಿನ್ನುವವರನ್ನು ಮಾಂಸಾಹಾರಿಗಳು ಎನ್ನಲಾಗುತ್ತಿದೆ. ಕೆಲ ದೇಶಗಳಲ್ಲಿ ಮೀನು ತಿನ್ನುವುದನ್ನು ಸಸ್ಯಾಹಾರ ಎಂದು ಹೇಳುತ್ತಾರೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಒಳನಾಡು ಮೀನು ಉತ್ಪಾದಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, “ಮೀನುಗಾರಿಕೆಯಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತಿದೆ. ಒಳನಾಡು ಮೀನುಗಾರಿಕೆಯಲ್ಲಿ ಹೊಸ ಸಂಶೋಧನೆ ನಡೆಸಿ, ಹೊಸ ತಳಿಗಳ ಪ್ರಯೋಗ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ” ಎಂದು ಮೀನುಗಾರರಿಗೆ ಸಲಹೆ ನೀಡಿದರು.

Eedina App

"ಮೀನುಗಾರಿಕೆ ಉತ್ತೇಜಿಸುವುದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂ ಮೀನು ಮಾರಾಟ ಕೇಂದ್ರಗಳನ್ನು ಆರಂಭಿಸಲಾಗುವುದು. ನಗರದಲ್ಲಿ ಮೀನಿಗೆ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ ಮೀನು ಮಾರಾಟ 'ಔಟ್‌ಲೆಟ್' ಆರಂಭಿಸಲು ನಿರ್ಧರಿಸಲಾಗಿದೆ. ಖಾಸಗಿಯಾಗಿ ಮೀನು ಮಾರಾಟ ಕೇಂದ್ರಗಳನ್ನು ಆರಂಭಿಸಲು ಮುಂದಾಗುವವರಿಗೆ ಜಾಗದ ವ್ಯವಸ್ಥೆ ಮಾಡಲಾಗುವುದು” ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

“ಒಳನಾಡು ಮೀನುಗಾರಿಕೆ ಜತೆಗೆ ಸಮುದ್ರ ಮೀನುಗಾರಿಕೆಗೂ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಆಳ ಮೀನುಗಾರಿಕೆಯಲ್ಲಿ ಉತ್ಕೃಷ್ಟ ಮೀನುಗಳು ದೊರಕುತ್ತವೆ. ಹಾಗಾಗಿ, ಪ್ರಧಾನ ಮಂತ್ರಿಗಳ ಮೀನುಗಾರರ ಯೋಜನೆಯಡಿ ಆಳಸಮುದ್ರ ಮೀನುಗಾರಿಕೆಯ 100 ಹಡಗುಗಳನ್ನು ರಾಜ್ಯದಲ್ಲಿ ಒದಗಿಸಲು ನಿರ್ಧರಿಸಿದ್ದೇವೆ. ಶೇ.40ರಷ್ಟು ಸಹಾಯಧನ ನೀಡಲಾಗುವುದು. ಮೀನುಗಾರರಿಗೆ ಅಗತ್ಯವಾದ ಡೀಸೆಲ್ ಜತೆಗೆ ಸೀಮೆಎಣ್ಣೆ ಒದಗಿಸಲು ನಿರ್ಧರಿಸಲಾಗಿದೆ” ಎಂದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ; ಅವರ ಹೇಳಿಕೆ ಪಕ್ಷದ ಹೇಳಿಕೆಯಲ್ಲ: ಅರುಣ್ ಸಿಂಗ್

“ಮೀನುಗಾರರ ಕಲ್ಯಾಣಕ್ಕೂ ಸರ್ಕಾರ ಒತ್ತು ನೀಡಿದೆ. ಮೀನುಗಾರರಿಗೆ 5 ಸಾವಿರ ಮನೆಗಳನ್ನು ಜನವರಿ ಅಂತ್ಯದೊಳಗೆ ನಿರ್ಮಿಸಿ ಕೊಡಲಾಗುತ್ತದೆ. 1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲಾಗುವುದು. ಇದಕ್ಕೆ ₹40 ಕೋಟಿ ವೆಚ್ಚವಾಗಲಿದೆ. ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು” ಎಂದು ಅವರು ವಿವರಿಸಿದರು.

“ಒಂದು ಸಾವಿರ ಮೀನುಗಾರರ ಸಂಘಗಳಿಗೆ ₹3 ರಿಂದ ₹5 ಲಕ್ಷಗಳವರೆಗೂ ಸರ್ಕಾರ ಸಹಾಯಧನ ನೀಡುತ್ತಿದೆ. ಈ ಮೀನುಗಾರಿಕೆ ವಲಯ ಅಭಿವೃದ್ಧಿಯಾದರೆ ದೇಶದ ಆರ್ಥಿಕತೆಯೂ ಮುಂದುವರೆಯುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಸಚಿವರುಗಳಾದ ಎಸ್ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಡಾ. ಸಿ ಎನ್ ಅಶ್ವತ್ಥ್‌ನಾರಾಯಣ, ಬೈರತಿ ಬಸವರಾಜು, ಬಿ ಸಿ ನಾಗೇಶ್, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ ಫಹೀಂ ಮತ್ತಿತರರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app