ಅವರು ಯಾರೇ ಆದರೂ, ಈ ಬಾರಿ ಒಬ್ಬರಿಗೆ ಒಂದೇ ಟಿಕೆಟ್ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ಪಷ್ಟನೆ

DK SHIVAKUMAR
  • ಟಿಕೆಟ್ ವಿಚಾರವಾಗಿ ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಿದ ಡಿಕೆಶಿ
  • ಮುಂದಿನ ಚುನಾವಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು

ಈ ಬಾರಿ ಚುನಾವಣೆಯಲ್ಲಿ ʼಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್ ' ಎಂದು ಕೆಪಿಸಿಸಿ ಅಧ್ಯಕ್ಷ ಡಿ‌ ಕೆ ಶಿವಕುಮಾರ್ ಅವರು ಹೇಳಿದರು.

ಶುಕ್ರವಾರ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, 2023ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕಿದೆ. ಹೀಗಾಗಿ ಒಬ್ಬರಿಗೆ ಒಂದೇ ಟಿಕೆಟ್ ನೀತಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

Eedina App

ಈ ಸ್ಪಷ್ಟೀಕರಣದ ಮೂಲಕ, 'ನಾವು ಕೇಳಿದ್ರೆ ನಮ್ಮ ಕುಟುಂಬಕ್ಕೆ ನಾಲ್ಕು ಟಿಕೆಟ್ ಸಿಗುತ್ತೆ' ಎಂದು ಹೇಳಿಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷರು ಪರೋಕ್ಷ ತಿರುಗೇಟು ನೀಡಿದರು.

ಅರ್ಜಿ ಸಲ್ಲಿಕೆಯಾದ ನಂತರ ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ನಿಮ್ಮ ಮನೆಗೆ ಭೇಟಿ ನೀಡುತ್ತಿರುವುದರಿಂದ ತೊಂದರೆ ಆಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, "ಮುಂದಿನ ಚುನಾವಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು. ಅಧಿಕಾರಕ್ಕೆ ಬಂದಾಗ ಎಲ್ಲರಿಗೂ ಅಧಿಕಾರ ಸಿಗುತ್ತದೆ. ಎಲ್ಲರಿಗೂ ಅವರದೇ ಆದ ಶಕ್ತಿ ಇರುತ್ತದೆ. ಯಾರ ಶಕ್ತಿ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬರಿಗೆ 100 ಬೂತ್ ನಿಭಾಯಿಸುವ ಶಕ್ತಿ ಇದ್ದರೆ, ಮತ್ತೆ ಕೆಲವರಿಗೆ 50, ಇನ್ನೂ ಕೆಲವರಿಗೆ 10 ಬೂತ್ ನಿಭಾಯಿಸುವ ಶಕ್ತಿ ಇರುತ್ತದೆ" ಎಂದು ಹೇಳಿದರು.

AV Eye Hospital ad

ಅರ್ಜಿ ಸಲ್ಲಿಸುವಾಗ ಆಕಾಂಕ್ಷಿಗಳಿಂದ ದೇಣಿಗೆ ಸಂಗ್ರಹ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಶಿವಕುಮಾರ್, "ನಮ್ಮ ಪಕ್ಷದಲ್ಲಿ ಇದು ಹೊಸತೇನಲ್ಲ. ಈ ಹಿಂದೆಯೂ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. ಆಗ ಹೆಚ್ಚು ಸುದ್ದಿ ಆಗಿರಲಿಲ್ಲ. ಆದರೆ ಈ ಬಾರಿ ಆಗಿದೆ. ಚುನಾವಣಾ ತಯಾರಿ, ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಚಾರವಾಗಿ ಹಣಕಾಸಿನ ಅಗತ್ಯವಿದೆ. ಕಚೇರಿ ನಿರ್ಮಾಣಕ್ಕೆ ಕಾರ್ಯಕರ್ತರು ಆರ್ಥಿಕ ನೆರವು ಕೇಳಿದಾಗ, ನಾವು ಹಣ ಸಹಾಯ ಮಾಡುತ್ತೇವೆ. ಕಾರ್ಯಕರ್ತರಿಗೆ ತೊಂದರೆ ಆದಾಗ ಅವರಿಗೆ ಸಹಾಯ ಮಾಡಲು ಹಣದ ಅಗತ್ಯವಿದೆ. ಹೀಗಾಗಿ ದೇಣಿಗೆಯನ್ನು ಸಂಗ್ರಹಿಸಲಾಗಿದೆ" ಎಂದರು.

ಈ ಸುದ್ದಿ ಓದಿದ್ದೀರಾ? : ಕೊನೆಗೂ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿ, ಕ್ಷೇತ್ರದ ಹೆಸರನ್ನು ರಹಸ್ಯವಾಗಿಯೇ ಉಳಿಸಿದ ಸಿದ್ದರಾಮಯ್ಯ

'ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆ ನಡೆಯಲಿದೆ. ಈ ವೇಳೆ ನಮ್ಮ ಕೆಲ ನಾಯಕರುಗಳಿಗೆ ಮಾರ್ಗದರ್ಶನದ ಹೊರತು ಬೇರೆ ಚರ್ಚೆಗಳು ನಡೆಯುವುದಿಲ್ಲ' ಎಂದು ಡಿ ಕೆ ಶಿವಕುಮಾರ್ ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app