ಮಾಧುಸ್ವಾಮಿ ಆಡಿಯೋ ಬಗ್ಗೆ ತಪ್ಪು ಅರ್ಥದ ಅಗತ್ಯವಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Basavaraj Bommai
  • ಮಾಧುಸ್ವಾಮಿ ಬೇರೆ ಉದ್ದೇಶದಿಂದ ಮಾತನಾಡಿದ್ದಾರೆ: ಸಿಎಂ
  • ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ಕೊಡುತ್ತೇನೆ: ಮಾಧುಸ್ವಾಮಿ

‘ಸರ್ಕಾರ ನಡೆಯುತ್ತಿಲ್ಲ, ಎಂಟು ತಿಂಗಳು ಇದೆ ಎಂದು ಹೇಗೋ ತಳ್ಳಿಕೊಂಡು ಹೋಗುತ್ತಿದ್ದೇವೆ’ ಎಂಬ ಸಚಿವ ಜೆ ಸಿ ಮಾಧುಸ್ವಾಮಿ ಆಡಿಯೋ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. 

ವಿಧಾನಸೌಧದಲ್ಲಿ ಮಂಗಳವಾರ ಪತ್ರಕರ್ತರ ಜತೆ ಮಾತನಾಡಿದ ಅವರು, “ಮಾಧುಸ್ವಾಮಿ ಬೇರೆ ಉದ್ದೇಶದಿಂದ ಮಾತನಾಡಿದ್ದಾರೆ. ನಾನು ಕೂಡ ಅವರ ಜತೆಗೆ ಮಾತನಾಡಿದ್ದೇನೆ. ಬೇರೆ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ” ಎಂದು ಮಾಧುಸ್ವಾಮಿ ಅವರನ್ನು ಸಮರ್ಥಿಸಿಕೊಂಡರು.

“ಆಡಿಯೋ ಬಗ್ಗೆ ಯಾವುದೇ ರೀತಿಯ ತಪ್ಪು ಅರ್ಥ ಮಾಡುವ ಅಗತ್ಯವಿಲ್ಲ. ಅವರು ಸಹಕಾರ ಇಲಾಖೆ ವಿಚಾರವಾಗಿ ಮಾತ್ರ ಮಾತನಾಡಿದ್ದಾರೆ. ಈಗ ಎಲ್ಲವೂ ಸರಿಯಾಗಿದೆ” ಎಂದು ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ಕೊಡುತ್ತೇನೆ: ಮಾಧುಸ್ವಾಮಿ

ವಿವಾದ ಸೃಷ್ಟಿಸಿರುವ ತಮ್ಮ ಅಡಿಯೋ ಬಗ್ಗೆ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, “ಮುಖ್ಯಮಂತ್ರಿಗಳು ಕೇಳಿದರೆ ರಾಜೀನಾಮೆ ಕೊಡಲು ಸಿದ್ಧ” ಎಂದು ಹೇಳಿದ್ದಾರೆ.

ಚಿಕ್ಕನಾಯಕನಹಳ್ಳಿಯ ಜೆ ಸಿ ಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನನಗೆ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಮೇಲೆ ಗೌರವವಿದೆ. ಒಂದು ವೇಳೆ ಮುಖ್ಯಮಂತ್ರಿಗಳು ನನ್ನ ರಾಜೀನಾಮೆ ಕೇಳಿದರೆ, ನಾನು ಸಿದ್ಧ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ‘ಸರ್ಕಾರ ನಡೀತಾ ಇಲ್ಲ..’ ಎಂಬ ಹೇಳಿಕೆ ಹಿಂದಿನ ಮರ್ಮವೇನು? ಮಾಧುಸ್ವಾಮಿ ಮೇಲೆ ಯಡಿಯೂರಪ್ಪ ಬಣ ಮುಗಿಬಿದ್ದಿದ್ಯಾಕೆ?

“ವೈರಲ್ ಆಗಿರುವ ಆಡಿಯೋ ಯಾವಾಗಿನದು ಎಂಬ ನೆನಪಿಲ್ಲ. ಆ ಆಡಿಯೋ ತುಂಬಾ ಹಳೆಯದು. ಅನಾಮಿಕ ವ್ಯಕ್ತಿ ಕರೆ ಮಾಡಿದಾಗ ನಾನು ಮ್ಯಾನೇಜ್ ಮಾಡೋದಕ್ಕೆ ಮಾತನಾಡಿದ್ದೆ. ಆತ ಕಾಲ್ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾನೆ ಎಂಬುದು ಗೊತ್ತಾಗಲಿಲ್ಲ. ಹೀಗೆ ಮಾಡೋದು ಅಪರಾಧ. ಆ ಆಡಿಯೋ ಬಿಡುಗಡೆ, ಪ್ರಸಾರ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಯೋಚನೆ ಇತ್ತು. ವಕೀಲರ ಜತೆಗೆ ಮಾತನಾಡಿದ ನಂತರ ದೂರು ನೀಡುವುದು ಬೇಡ ಎಂದು ನಿರ್ಧಾರ ಮಾಡಿದ್ದೇನೆ” ಎಂದು ಮಾಧುಸ್ವಾಮಿ ಹೇಳಿದರು.

ನಿಮ್ಮ ಮೇಲೆ ಷಡ್ಯಂತ್ರ ನಡೆದಿದೆಯಾ ಎಂಬ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ವಿರುದ್ಧ ಯಾರೂ ಷಡ್ಯಂತ್ರ ಮಾಡಿಲ್ಲ. ಹೀಗಾಗಿ ನಾನು ಯಾರ ಮೇಲೂ ದೂಷಣೆ ಮಾಡಲ್ಲ. ಈಗಾಗಲೇ ಮುಖ್ಯಮಂತ್ರಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಒಂದು ವೇಳೆ ಅವರು ರಾಜೀನಾಮೆ ಕೇಳಿದರೆ ನಾನು ಕೊಡೋದಕ್ಕೂ ಸಿದ್ಧನಿದ್ದೇನೆ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್