ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ನೇಮಕಾತಿಯೂ ಪ್ರಾಮಾಣಿಕವಾಗಿ ನಡೆದಿಲ್ಲ: ಕಾಂಗ್ರೆಸ್ ಆರೋಪ

  • ಬೆಳೆ ವಿಮೆಯಲ್ಲಿ ಕಂಪೆನಿಗಳು ಲಾಭ ಮಾಡಿಕೊಂಡಿದ್ದೇ ಹೆಚ್ಚು
  • ಬಿಜೆಪಿ ಸರ್ಕಾರ ರೈತರಿಗೆ ಮೇಲಿಂದ ಮೇಲೆ ಅನ್ಯಾಯವೆಸಗುತ್ತಿದೆ

ರಾಜ್ಯ ಭಾರತೀಯ ಜನತಾ ಪಕ್ಷದ ಸರ್ಕಾರದ ವಿರುದ್ಧ ಟ್ವೀಟ್ ದಾಳಿ ಮುಂದುವರೆಸಿರುವ ಕಾಂಗ್ರೆಸ್ ಪಕ್ಷ, ‘ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ನೇಮಕಾತಿಯೂ ಪ್ರಾಮಾಣಿಕವಾಗಿ ನಡೆದಿಲ್ಲ’ ಎಂದು ಆರೋಪ ಮಾಡಿದೆ.

'ಬಿಜೆಪಿ ಭ್ರಷ್ಟೋತ್ಸವ' ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ನೇಮಕಾತಿಯೂ ಪ್ರಾಮಾಣಿಕವಾಗಿ ನಡೆದಿಲ್ಲ. ಪಿಎಸ್ಐ ಹಗರಣದ ನಂತರ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಪರೀಕ್ಷಾ ಅಕ್ರಮಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ, ಈ ಸರ್ಕಾರದ ಒಂದೇ ಒಂದು ಯಶಸ್ವಿ ಯೋಜನೆ ಎಂದರೆ "ಸರ್ಕಾರಿ ಹುದ್ದೆ ಮಾರಾಟ ಯೋಜನೆ" ಮಾತ್ರ! ನಿಮ್ಮ ಬಿಜೆಪಿ ಭ್ರಷ್ಟೋತ್ಸವದಲ್ಲಿ ಈ ಸಾಧನೆಗಳನ್ನು ಹೇಳಿಕೊಳ್ಳುತ್ತೀರಾ” ಎಂದು ಪ್ರಶ್ನಿಸಿದೆ. 

“ಫಸಲ್ ಬಿಮಾ ಎಂದರೆ ರೈತರ ಬೆವರಿನಲ್ಲಿ ವಿಮಾ ಕಂಪೆನಿಗಳ ಭರ್ಜರಿ ಫಸಲು ಬೆಳೆಯುವುದು ಎಂದರ್ಥ! ಬೆಳೆ ವಿಮೆ ಪರಿಹಾರ ನೀಡಿರುವುದಕ್ಕಿಂತ ಕಂಪೆನಿಗಳು ಲಾಭ ಮಾಡಿಕೊಂಡಿದ್ದೇ ಹೆಚ್ಚು. ರೈತ ವಿರೋಧಿ ಬಿಜೆಪಿ ರೈತರ ಹಿತಕ್ಕೆ ಕೆಲಸ ಮಾಡುತ್ತೇವೆ ಎನ್ನುವುದು, ತೋಳ ಗೋವಿನ ಮುಖವಾಡ ಹಾಕಿಕೊಳ್ಳುವುದು ಎರಡೂ ಒಂದೇ!” ಎಂದು ಲೇವಡಿ ಮಾಡಿದೆ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು| ಬಿಜೆಪಿ ಭ್ರಷ್ಟೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ: ಕಾಂಗ್ರೆಸ್ ಟೀಕೆ

“ನಿರುದ್ಯೋಗ ಹೋಗಲಾಡಿಸಲು, ಗ್ರಾಮೀಣ ಆರ್ಥಿಕತೆಯನ್ನು ಸಶಕ್ತಗೊಳಿಸಲು ಕಾಂಗ್ರೆಸ್ ಉದ್ಯೋಗ ಖಾತ್ರಿ ಎಂಬ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಿತ್ತು. ಕೋವಿಡ್ ಸಂದರ್ಭದಲ್ಲಿ ಜನರ ಸಂಪಾದನೆಯ ಆಸರೆಯಾಗಿದ್ದ ನರೇಗಾವನ್ನು ಬಿಜೆಪಿ ಭ್ರಷ್ಟೋತ್ಸವದಲ್ಲಿ ಲೂಟಿ ಯೋಜನೆಯಾಗಿಸಿದ ಬಿಜೆಪಿ ಸರ್ಕಾರ ಬಡವರ ಉದ್ಯೋಗದ ಆಸರೆಯನ್ನು ಕಿತ್ತುಕೊಂಡಿದೆ” ಎಂದು ಅರೋಪಿಸಿದೆ.

“ರೈತ ವಿರೋಧಿ ಬಿಜೆಪಿ ಸರ್ಕಾರ ರೈತರಿಗೆ ಮೇಲಿಂದ ಮೇಲೆ ಅನ್ಯಾಯವೆಸಗುತ್ತಿದೆ. ನೆರೆ ಪರಿಹಾರವಿಲ್ಲ, ಗೊಬ್ಬರವೂ ಸಿಗ್ತಿಲ್ಲ, ಬೆಳೆ ಸಾಲಕ್ಕೂ ಪರದಾಟ, ಸಾಲದ ಮೇಲಿನ ಬಡ್ಡಿಯೂ ದುಬಾರಿ. ಬಿಜೆಪಿಗೆ ರೈತರ ಮೇಲಿರುವುದು ದ್ವೇಷವೇ, ತಾತ್ಸಾರವೇ? ಹೆಣ ಕಂಡರೆ ಓಡೋಡಿ ಬರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್