ಒಕ್ಕಲಿಗರ ಮೀಸಲಾತಿ ಪ್ರಮಾಣ ಏರಿಕೆಗೆ ಒತ್ತಾಯ; ನ. 27ಕ್ಕೆ ಸಭೆ ಕರೆದ ಒಕ್ಕಲಿಗರ ಸಂಘ

OKKALIGARA SANGHADA SABHE
  • ಒಕ್ಕಲಿಗ ಸಮುದಾಯಕ್ಕೆ ಇಡಬ್ಲ್ಯುಎಸ್ ಮೀಸಲಾತಿ ಕೊಡಿ
  • ಹಿಂದುಳಿದ ವರ್ಗಗಳ ಆಯೋಗದ ಜಾತಿ ಸಮೀಕ್ಷೆ ರದ್ದು ಮಾಡಿ

ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣದ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲು ನ.27ರಂದು ಸಭೆ ಸೇರಲು ಒಕ್ಕಲಿಗರ ಸಂಘ ನಿರ್ಧರಿಸಿದೆ.

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ ಎನ್ ಬಾಲಕೃಷ್ಣ, ಒಕ್ಕಲಿಗರ ಮೀಸಲಾತಿಯನ್ನು ಶೇ 4ರಿಂದ ಶೇ 12ಕ್ಕೆ ಹೆಚ್ಚಿಸಲು ಆಗ್ರಹಿಸಿ ದೊಡ್ಡಮಟ್ಟದ ಹೋರಾಟಕ್ಕೆ ಒಕ್ಕಲಿಗರ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿ ಸಜ್ಜಾಗಿದೆ. ಇದರಲ್ಲಿ ಸಮುದಾಯದ ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಮುಖಂಡರು ಭಾಗವಹಿಸಲಿದ್ದಾರೆ. ಇವರೆಲ್ಲರನ್ನೊಳಗೊಂಡ ಸಭೆ ನ.27ರಂದು ನಡೆಯಲಿದ್ದು, ಇಲ್ಲಿ ಹೋರಾಟ ರೂಪುರೇಷೆ ಸಿದ್ಧವಾಗಲಿದೆ ಎಂದರು.

ನ. 27ರ ಸಭೆಯಲ್ಲಿ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಭೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ. ಆದಿಚುಂಚನಗಿರಿ ಶ್ರೀಗಳ ಸಲಹೆ ಮತ್ತು ಸೂಚನೆ ಮೇರೆಗೆ ಸಭೆ ಕರೆಯಲಾಗಿದೆ’ಎಂದು ಬಾಲಕೃಷ್ಣ ತಿಳಿಸಿದರು.

''ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ ಸರ್ಕಾರ ನಿರ್ಧಾರ ಸ್ವಾಗತಾರ್ಹ. ಅದೇ ರೀತಿ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3ಎ ಮೀಸಲಾತಿಯನ್ನು ನಮ್ಮ ಸಮುದಾಯ ಪಡೆದುಕೊಳ್ಳುತ್ತಿದೆ. ಆದರೆ ಶೇ. 16ಕ್ಕೂ ಹೆಚ್ಚಿರುವ ನಮ್ಮ ಸಮುದಾಯ ಶೇ 4ರಷ್ಟು ಮಾತ್ರ ಮೀಸಲಾತಿ ಪಡೆದುಕೊಳ್ಳುತ್ತಿದೆ. ಆದ್ದರಿಂದ ಮೀಸಲಾತಿ ಹೆಚ್ಚಿಸುವ ಅನಿವಾರ್ಯ ಇದೆ. ಈ ಸಂಬಂಧ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮಹತ್ವದ ನಿರ್ಣಯಗಳನ್ನು ಭಾನುವಾರದ ಸಭೆ ಕೈಗೊಳ್ಳಲಿದೆ" ಎಂದು ಬಾಲಕೃಷ್ಣ ಹೇಳಿದರು.

ಅಂದಿನ ಸಭೆಯಲ್ಲಿ, ರಾಜ್ಯಸಭಾ ಸದಸ್ಯ ಎಚ್ ಡಿ ದೇವೇಗೌಡ, ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ, ಸಂಸದ ಡಿ ವಿ ಸದಾನಂದಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವರಾದ ಆರ್ ಅಶೋಕ, ಸಿ ಎನ್ ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಎಸ್ ಟಿ ಸೋಮಶೇಖರ್, ಕೆ ಸುಧಾಕರ್, ಕೆ ಗೋಪಾಲಯ್ಯ, ಕೆ ಸಿ ನಾರಾಯಣಗೌಡ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಇವರಲ್ಲದೆ ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರು, ಸಾಹಿತಿಗಳು, ಹೋರಾಟಗಾರರು, ಚಿತ್ರರಂಗ ಪ್ರಮುಖರು, ಸಂಘ–ಸಂಸ್ಥೆಗಳ ಮುಖಂಡರುಗಳೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಾಲಕೃಷ್ಣ ವಿವರಿಸಿದರು.

ಇಡಬ್ಲ್ಯುಎಸ್ ಮೀಸಲಾತಿಯನ್ನೂ ಕೊಡಿ
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಶೇ 10ರಷ್ಟು ಇಡಬ್ಲ್ಯುಎಸ್(ಆರ್ಥಿಕವಾಗಿ ಹಿಂದುಳಿದವರಿಗೆ) ಮೀಸಲಾತಿಯನ್ನು ನಗರ ಪ್ರದೇಶದ ಒಕ್ಕಲಿಗೂ ಪಡೆಯುವಂತಾಗಬೇಕು ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಕೋನಪ್ಪರೆಡ್ಡಿ ಒತ್ತಾಯಿಸಿದರು.

"ನಗರ ಪ್ರದೇಶದ ಒಕ್ಕಲಿಗರನ್ನು ಕೇಂದ್ರ ಮೀಸಲಾತಿ ಪಟ್ಟಿಯಿಂದ ಹೊರಗಿಡಲಾಗಿದೆ. ಗ್ರಾಮೀಣ ಪ್ರದೇಶದಿಂದ ವಲಸೆ ಬಂದು ನಗರಗಳಲ್ಲಿ ಕೂಲಿ ಮಾಡುತ್ತಿರುವ ಕುಟುಂಬಳಲ್ಲಿನ ಮಕ್ಕಳು ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಇಡಬ್ಲ್ಯುಎಸ್ ಮೀಸಲಾತಿ ಪ್ರಮಾಣ ಶೇ 10ರಷ್ಟು ಇರುವುದರಿಂದ ಸಾಮಾನ್ಯ ವರ್ಗದ ಮೀಸಲಾತಿ ಪ್ರಮಾಣವೂ ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಂದ ನಗರ ಪ್ರದೇಶದ ಬಡ ಒಕ್ಕಲಿಗರಿಗೂ ಇಡಬ್ಲ್ಯುಎಸ್ ಮೀಸಲಾತಿ ಸಿಗಬೇಕು" ಎಂದು ಅವರು ಪ್ರತಿಪಾದಿಸಿದರು.

ಈ ಸುದ್ದಿ ಓದಿದ್ದೀರಾ? : EWS ಮೀಸಲಾತಿ: ಒಕ್ಕಲಿಗ ಲಿಂಗಾಯತ ಸೇರಿದಂತೆ ಒಬಿಸಿಗಳಿಗೆ ಆಗಿರುವ ಅನ್ಯಾಯ ಗೊತ್ತೆ?

ಹಿಂದುಳಿದ ವರ್ಗಗಳ ಆಯೋಗದ ಜಾತಿ ಸಮೀಕ್ಷೆ ರದ್ದುಮಾಡಿ
'ಕಾಂತರಾಜ್ ಅಧ್ಯಕ್ಷತೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಜಾತಿ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಒಕ್ಕಲಿಗರ ಉಪಜಾತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಒಕ್ಕಲಿಗರ ಜನಸಂಖ್ಯೆಯನ್ನು ಕಡಿಮೆ ನಮೂದಿಸಲಾಗಿದೆ. ಆದ್ದರಿಂದ ಆಯೋಗದ ಸಮೀಕ್ಷಾ ವರದಿ ರದ್ದುಪಡಿಸಬೇಕು’ ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಗಾನಂ ಶ್ರೀಕಂಠಯ್ಯ ಆಗ್ರಹಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180