ಒಂದು ನಿಮಿಷದ ಓದು| ತಲೆಬಾಗಬೇಕಿರುವುದು ಸಂವಿಧಾನಕ್ಕೆ ಹೊರತು ಆರ್‌ಎಸ್‌ಎಸ್‌ಗೆ ಅಲ್ಲ; ಬಿ ಕೆ ಹರಿಪ್ರಸಾದ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 'ಆರ್‌ಎಸ್‌ಎಸ್‌ ವಿಚಾರ, ಆದರ್ಶಕ್ಕೆ ತಲೆಬಾಗುತ್ತೇನೆ' ಎಂಬ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಟೀಕಿಸಿದೆ. 

"ಮುಖ್ಯಮಂತ್ರಿಗಳೇ, ತಲೆಬಾಗಬೇಕಿರುವುದು ಸಂವಿಧಾನಕ್ಕೆ ಹೊರತು, ಸಂವಿಧಾನ ವಿರೋಧಿ ಆರೆಸ್ಸೆಸ್‌ಗೆ ಅಲ್ಲ! ದೇಶ ವಿರೋಧಿ ಕೃತ್ಯಗಳನ್ನ ನಡೆಸುವ ಸಂಘಟನೆಗೆ ಬೆಂಬಲಿಸುವುದು, ನಿಮ್ಮ ಸ್ಥಾನಕ್ಕೆ, ಘನತೆಗೆ ತಕ್ಕುದಲ್ಲ. ಗುಲಾಮಗಿರಿ ಮಾಡುವುದೇ ಆದರೆ ಮುಖ್ಯಮಂತ್ರಿ ಕುರ್ಚಿ ಖಾಲಿ ಮಾಡಿ ಮೊದಲು" ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ ಟೀಕೆ

ಕಾಂಗ್ರೆಸ್ ಪಕ್ಷವೂ ಕೂಡ ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದೆ. 

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ತಾವು ಸಂವಿಧಾನದ ಆಶಯಗಳ ಮೇಲೆ ಆಡಳಿತ ನಡೆಸಬೇಕಿತ್ತು. ಅಂಬೇಡ್ಕರ್ ತತ್ವಗಳಲ್ಲಿ ಕೆಲಸ ಮಾಡಬೇಕಿತ್ತು. ಪ್ರಜಾಪ್ರಭುತ್ವದ ಆದರ್ಶದಲ್ಲಿ ನಡೆಯಬೇಕಿತ್ತು. ಆದರೆ, ಪ್ರಜಾಪ್ರಭುತ್ವ ವಿರೋಧಿಗಳೇ ನಿಮಗೆ ಆದರ್ಶ ಎನ್ನುವುದು ರಾಜ್ಯದ ದೌರ್ಭಾಗ್ಯ" ಎಂದು ಕಾಂಗ್ರೆಸ್ ಟೀಕಿಸಿದೆ.

ಹಿನ್ನೆಲೆ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಅಮೃತ ಭಾರತಿ-ಕರುನಾಡ ಜಾತ್ರೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ,” ನಾನು ಆರೆಸ್ಸೆಸ್ ಅಡಿಯಾಳಾಗಿದ್ದಾನೆ ಎಂದು ಕೆಲವರು ಹೇಳುತ್ತಾರೆ. ಒಂದು ತತ್ವ, ಆದರ್ಶಕ್ಕೆ ದೇಶ ಕಟ್ಟಲು ನಾನು ಬದ್ಧನಾಗಿದ್ದೇನೆ. ಹಾಗಾಗಿ ಈ ವಿಚಾರಕ್ಕೆ ನಾನು ತಲೆಬಾಗಿದ್ದೇನೆ" ಎಂದಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್