
- ಖರ್ಗೆಯನ್ನು ಸಿಎಂ ಮಾಡುವುದಾಗಿ ದಶಕಗಳಿಂದ ಹೇಳಿಕೊಂಡು ಬಂದ ಕಾಂಗ್ರೆಸ್
- ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಸಂವಿಧಾನ ದುರ್ಬಲ ಮಾಡುವ ಕೆಲಸ ನಡೆಯುತ್ತಿದೆ
"ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದಿಂದ ಮಾತ್ರ ದಲಿತ ಮುಖ್ಯಮಂತ್ರಿ ಮಾಡಲು ಸಾಧ್ಯ" ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಹೇಳಿದರು.
ಚಾಮರಾಜನಗರದಲ್ಲಿ ಸಂವಿಧಾನ ಸಂರಕ್ಷಣೆಗಾಗಿ ರಾಜ್ಯವ್ಯಾಪಿ ಜೈಭೀಮ್ ಜನಜಾಗೃತಿ ಜಾಥಾ ಕಾರ್ಯಕ್ರಮದ ಸಮಾರೋಪ ಉದ್ಘಾಟಿಸಿ ಮಾತನಾಡಿದ ಅವರು, “ದಲಿತ ಮತ ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ದಲಿತ ಮುಖ್ಯಮಂತ್ರಿ ಮಾಡಲು ಸಿದ್ಧರಿಲ್ಲ. ಇದೀಗ ರಾಜ್ಯದಲ್ಲಿ ಎಸ್ಸಿ, ಎಸ್ಟಿಗಳು ಒಂದಾಗುತ್ತಿದ್ದು, ಪ್ರಸನ್ನಾನಂದಪುರಿ ಸ್ವಾಮೀಜಿ ಹೋರಾಟದ ಫಲವಾಗಿ ಪರಿಶಿಷ್ಟರ ಮೀಸಲಾತಿ ಹೆಚ್ಚಳವಾಗಿದೆ” ಎಂದರು.
“ಎಸ್ಸಿ, ಎಸ್ಟಿ ಸಮುದಾಯಗಳ ಶ್ರೀಗಳು ಒಂದಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಬಿಟ್ಟು ಯಾವ ಪಕ್ಷದಿಂದಲೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
“ಕಾಂಗ್ರೆಸ್ ಮುಳುಗುತ್ತಿರುವ ಹಡಗು ಆಗಿರುವ ಸಂದರ್ಭದಲ್ಲಿ ಈಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ನನಗೆ ಮೀಸೆ ಬಂದಿರಲಿಲ್ಲ. ಅಂದಿನಿಂದಲೂ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಹೇಳಿಕೊಂಡು ಬಂದಿದೆಯೇ ಹೊರತು ಮಾಡಲಿಲ್ಲ. ದೇಶ, ರಾಜ್ಯದಲ್ಲಿ 50ಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸಂವಿಧಾನದ ಆಶಯದಂತೆ ಅಧಿಕಾರ ನಡೆಸಿಲ್ಲ. ಎಂಟು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ” ಎಂದರು.
“ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೊರದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದರು. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಯಾರ ಖಾತೆಗೂ ನಯಾಪೈಸೆ ಹಾಕಿಲ್ಲ. ಒಬ್ಬರಿಗೂ ಉದ್ಯೋಗ ಕೊಡಿಸಿಲ್ಲ. ಇರುವ ಉದ್ಯೋಗ ಕಿತ್ತುಕೊಂಡು ಎಲ್ಲ ಕ್ಷೇತ್ರವನ್ನು ಖಾಸಗೀಕರಣ ಮಾಡುವ ದೇಶ ಜನತೆ ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡಿದ್ದಾರೆ” ಎಂದು ದೂರಿದರು.
ಬಿಜೆಪಿ, ಕಾಂಗ್ರೆಸ್ನಿಂದ ಸಂವಿಧಾನಕ್ಕೆ ಕುತ್ತು
ಬಿಎಸ್ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಮಾತನಾಡಿ, “ಕಾಂಗ್ರೆಸ್, ಬಿಜೆಪಿಯಿಂದ ಸಂವಿಧಾನಕ್ಕೆ ಅಪತ್ತು ಬಂದಿದೆ. 55 ವರ್ಷ ದೇಶದಲ್ಲಿ ಆಡಳಿತ ನಡೆಸಿ ಕಾಂಗ್ರೆಸ್ ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಬದಲು 110 ತಿದ್ದುಪಡಿಗಳನ್ನು ತಂದು ದುರ್ಬಲಗೊಳಿಸುವ ಕೆಲಸ ಮಾಡಿದೆ. ಇದೇ ಆಧಾರವಾಗಿಟ್ಟುಕೊಂಡು ಬಿಜೆಪಿ ಸಂವಿಧಾನವನ್ನು ನಾಶ ಮಾಡಲು, ಸಮಾಧಿ ಮಾಡಲು ಹೊರಟಿದೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಸವಲಿಂಗಪ್ಪ ಬದುಕಿದ್ದರೆ ಶೇ.10 ಮೀಸಲಾತಿ ವಿರುದ್ಧ ಹೋರಾಟ ನಡೆಸುತ್ತಿದ್ದರು: ದಿನೇಶ್ ಅಮೀನ್ ಮಟ್ಟು
ರಾಜ್ಯ ಬೌದ್ಧ ಸಮಾಜದ ಅಧ್ಯಕ್ಷ ಪ್ರೊ. ಹ ರಾ ಮಹೇಶ್, ಬಿಎಸ್ಪಿ ರಾಜ್ಯ ಸಂಯೋಜಕ ಎನ್ ಗೋಪಿನಾಥ್, ರಾಜ್ಯ ಉಪಾಧ್ಯಕ್ಷ ಕೆ ಪಿ ವಾಸು, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಮುನಿಯಪ್ಪ, ಅರಕಲವಾಡಿ ನಾಗೇಂದ್ರ, ಎಚ್ ಮೋಹನ್ ಕುಮಾರ್, ಕಾರ್ಯದರ್ಶಿರಾದ ಚಿನ್ನಪ್ಪ, ಕಮಲ್ ನಾಗರಾಜು, ಮೈಸೂರು ಜಿಲ್ಲಾಧ್ಯಕ್ಷ ಡಿ ಆರ್ ಪುಟ್ಟಸ್ವಾಮಿ ಹಾಗೂ ಇತರರು ಇದ್ದರು.