ʼಆಪರೇಷನ್ ಕಮಲʼದ ಅಭ್ಯರ್ಥಿಗಳನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ; ಡಿ ಕೆ ಶಿವಕುಮಾರ್

dks kpcc
  • ʼ40% ಕಮಿಷನ್ʼ ಬ್ರಾಂಡ್ ಅನ್ನು ಬಿಜೆಪಿ ವಿಶ್ವಕ್ಕೆ ಮಾಡೆಲ್ ಮಾಡಿದೆ
  • ಡೆಟಾಲ್, ಗಂಜಲ ಹಾಕಿ ವಿಧಾನಸೌಧವನ್ನು ಸ್ವಚ್ಛ ಮಾಡುತ್ತೇವೆ

"ಸದ್ಯಕ್ಕೆ ನಮ್ಮ ಬಸ್ ತುಂಬಿದೆ. ಇಲ್ಲಿರುವವರಿಗೇ ಕ್ಷೇತ್ರ ಕೊಡಲು ನಾವು ಲೆಕ್ಕಾಚಾರ ಹಾಕುತ್ತಿದ್ದೇವೆ. ಹೀಗಿರುವಾಗ ʼಆಪರೇಷನ್ ಕಮಲʼಕ್ಕೆ ಒಳಗಾಗಿ ನಮ್ಮ ಪಕ್ಷ ತ್ಯಜಿಸಿದ್ದ ಅಭ್ಯರ್ಥಿಗಳನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಆಡಳಿತದಲ್ಲಿರುವ ದುಷ್ಟ ಸರ್ಕಾರವನ್ನು ಜನ ಓಡಿಸುತ್ತಾರೆ. ಬಿಜೆಪಿಯವರಿಗೆ ಇರುವುದು ಇನ್ನು 50 ದಿನ. ಅಷ್ಟರಲ್ಲಿ 40% ಭ್ರಷ್ಟಾಚಾರದ ಬಾಕಿ ಹಣವನ್ನು ಸೆಟ್ಲ್  ಮಾಡಿಕೊಂಡು, ಹಾಗೆಯೇ ತುಂಬಿಸಿಕೊಂಡು ಹೋಗಲಿ. ಜನರ ಜೊತೆ ನಮ್ಮ ಪಕ್ಷವೂ ಡೆಟಾಲ್, ಗಂಜಲ, ಹಾಕಿ ವಿಧಾನಸೌಧ ಸ್ವಚ್ಛ ಮಾಡಿ ಬಿಜೆಪಿಯವರನ್ನು ಅಲ್ಲಿಂದ ಕಳುಹಿಸುತ್ತೇವೆ" ಎಂದು ಶಿವಕುಮಾರ್ ಲೇವಡಿ ಮಾಡಿದರು.

"ನಮ್ಮ ಪಕ್ಷದ ಬಗ್ಗೆ ಬಿಜೆಪಿಯವರು ಭ್ರಷ್ಟಾಚಾರದ ಆರೋಪ ಮಾಡುತ್ತಾರೆ; ಅವರ ಪಕ್ಷದ ಸದಸ್ಯರೊಬ್ಬರು ನೇರವಾಗಿಯೇ ಹಣಕೊಟ್ಟು ಚುನಾವಣೆ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ವೋಟಿಗೆ ಆರು ಸಾವಿರ ಕೊಡುತ್ತೇವೆ ಎಂದು ಘೋಷಿಸುತ್ತಾರೆ. ಬೇರೆಯವರ ವಿಚಾರದಲ್ಲಿ ತಕ್ಷಣಕ್ಕೆ ಪ್ರತಿಕ್ರಿಯಿಸುವ ಇಡಿ, ಐಟಿ, ಇನ್‌ಕಂಟ್ಯಾಕ್ಸ್ ಅಧಿಕಾರಿಗಳು ಚುನಾವಣಾ ಆಯೋಗದವರಿಗೆ ಈ ವಿಚಾರಗಳು ಕಾಣಿಸುವುದಿಲ್ಲವೇ. ಈ ಬಗ್ಗೆ ಕ್ರಮ ಕೈಗೊಳ್ಳುವುದಿಲ್ಲವೇ" ಎಂದು ಶಿವಕುಮಾರ್ ಬಿಜೆಪಿಯನ್ನು ಪ್ರಶ್ನಿಸಿದರು.

ಸಿದ್ದರಾಮಯ್ಯ ಕ್ಷೇತ್ರ ವಿಚಾರದಲ್ಲಿ ಮಾತನಾಡಿ, ಅವರು ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದಿದ್ದ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಶಿವಕುಮಾರ್, "ನಮ್ಮ ನಾಯಕರು ಅವರ ಕ್ಷೇತ್ರ ಮತ್ತ ಸ್ಪರ್ಧೆ ಬಗ್ಗೆ ಅವರ ಭಾವನೆ ಹೇಳಿಕೊಳ್ಳುವುದು ತಪ್ಪೇ? ಅದಕ್ಕೂ ಬಿಜೆಪಿಯವರ ಒಪ್ಪಿಗೆ ಪಡೆದುಕೊಳ್ಳಬೇಕೇ?" ಎಂದರು.

"ನಮ್ಮ ನಾಯಕರ ಬಗ್ಗೆ ಮಾತನಾಡುವ ಯಡಿಯೂರಪ್ಪ, ಮೊದಲು ಅವರ ಪುತ್ರರ ಕ್ಷೇತ್ರ ಮತ್ತು ರಾಜಕೀಯ ಭವಿಷ್ಯ ಗಟ್ಟಿ ಮಾಡುವ ಕೆಲಸದತ್ತ ಗಮನ ಕೊಡಲಿ. ಆಮೇಲೆ ನಮ್ಮ ಬಗ್ಗೆ ಮಾತನಾಡಲಿ" ಎಂದರು.

dks

"ರಾಜ್ಯಕ್ಕೆ ಕಳಂಕ ತಂದಿರುವ ಸರ್ಕಾರ ಇದು. ಬೂಟಾಟಿಕೆಗೆ ಬಜೆಟ್ ಮಾಡಲು ಈ ಸರ್ಕಾರ ಹೊರಟಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಘೋಷಿಸಿದ ಯೋಜನೆಗಳಿಗೇ ಹಣ ನೀಡದ ಇವರು ಈಗ ಹೊಸ ಬಜೆಟ್‌ನಲ್ಲಿ ಅದೇನು ಮಾಡುತ್ತಾರೆ" ಎಂದು ಶಿವಕುಮಾರ್ ಪ್ರಶ್ನಿಸಿದರು.

"ಯತ್ನಾಳ್, ಯೋಗೇಶ್ವರ್, ರೇಣುಕಾಚಾರ್ಯ, ಯಡಿಯೂರಪ್ಪ ಮತ್ತು ಬೊಮ್ಮಾಯಿ, ಅಶ್ವತ್ಥನಾರಾಯಣ, ಅಶೋಕ್ ಹೀಗೆ ಲೆಕ್ಕ ಕೊಡುತ್ತಾ ಹೋದರೆ ಬಿಜೆಪಿಯಲ್ಲಿ 32 ಗುಂಪುಗಳಿವೆ. ಇವನ್ನೇ ನಿಭಾಯಿಸದ ಬಿಜೆಪಿ ತಮ್ಮ ಬೆಡ್ ರೂಂನಲ್ಲಿದ್ದ ಸುಧಾಕರ್ ಅವರನ್ನು ಕರೆದು ಸುಮ್ಮನೊಂದು ಪತ್ರಿಕಾಗೋಷ್ಟಿ ಮಾಡಿಸಿ ನಮ್ಮ ವಿರುದ್ದ ಆರೋಪ ಮಾಡಿಸುತ್ತದೆ" ಎಂದು ಕುಹಕವಾಡಿದರು.

"ನಮ್ಮ ಪಕ್ಷ ಬಿಡುಗಡೆ ಮಾಡಿರುವ ಬಿಜೆಪಿ ಭ್ರಷ್ಟಾಚಾರದ ಪಾಪದ ಲೆಕ್ಕ ಚಾರ್ಜ್‌ಶೀಟ್‌ಗೆ ನಿಮ್ಮ ಪಕ್ಷದ ಒಬ್ಬರೇ ಒಬ್ಬ ಶಾಸಕರು ಉತ್ತರ ಕೊಟ್ಟರೇ? ಆಪರೇಷನ್ ಕಮಲದ ಮೂಲಕ ನಿಮ್ಮ ಪಕ್ಷ ಸೇರಿದ ಶಾಸಕರಿಂದಲೇ ಏಕೆ ಇದಕ್ಕೆ ಉತ್ತರ ಕೊಡಿಸುತ್ತಿದ್ದೀರಾ" ಎಂದು ಶಿವಕುಮಾರ್ ಕೇಳಿದರು.

"ನಮ್ಮ ಪಕ್ಷದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವ ಇವರು ಅದರ ಬಗ್ಗೆ ಇದ್ದ ದಾಖಲಾತಿಗಳನ್ನು ಪಡೆದುಕೊಂಡು, ಅಗತ್ಯ ತನಿಖೆ ಮಾಡಿಸಬೇಕಿತ್ತು. ಅದನ್ನು ಬಿಟ್ಟು ಈಗ ನಮ್ಮ ಬಗ್ಗೆ ಬೆರಳನ್ನು ಏಕೆ ತೋರಿಸುತ್ತಿದ್ದಾರೆ" ಎಂದು ಶಿವಕುಮಾರ್ ಕಿಡಿ ಕಾರಿದರು.

ಈ ಸುದ್ದಿ ಓದಿದ್ದೀರಾ? :ದೇವೇಗೌಡರ ಕುಟುಂಬದವರು ದೋಚಲು ಶುರು ಮಾಡಿದ್ದಾರೆ: ಸಚಿವ ಮಾಧುಸ್ವಾಮಿ ವಾಗ್ದಾಳಿ

"40% ಕಮಿಷನ್ ಬ್ರಾಂಡ್‌ನ ಬಿಜೆಪಿ ವಿಶ್ವಕ್ಕೆ ಮಾಡೆಲ್ ಮಾಡಿದೆ. ಇದನ್ನೇ ಮಾರಿಕೊಂಡು ಮುಂದಿನ ದಾರಿ ಕಂಡುಕೊಳ್ಲುವ ಕೆಲಸ ಮಾಡಲಿ. ಇರುವ ಅಲ್ಪ ದಿನದಲ್ಲಿ ಬಾಕಿ ವಸೂಲಿ ಮಾಡಿಕೊಂಡು ಟೆಂಟ್ ಕಿತ್ತುಕೊಂಡು ಹೋಗಲಿ" ಎಂದು ಶಿವಕುಮಾರ್ ಲೇವಡಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app