ಸಿದ್ದರಾಮಯ್ಯ75| ಶುಭಾಶಯ ಕೋರದೆ ಸೌಜನ್ಯ ಮರೆತರೇ ವಿರೋಧ ಪಕ್ಷಗಳ ಘಟಾನುಘಟಿಗಳು?

ಬೇರೆಯವರ ವಿಚಾರ ಹಾಗಿರಲಿ ಖುದ್ದು ಯಡಿಯೂರಪ್ಪನವರೇ ಈ ವಿಚಾರದಲ್ಲಿ ಹೀಗೇಕೆ ನಡೆದುಕೊಂಡರೆನ್ನುವುದು ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದೆ.

ದೃಶ್ಯ -1
ಅದು ಬೆಂಗಳೂರು ವಿಮಾನ ನಿಲ್ದಾಣದ ಲಾಂಜ್ ಏರಿಯಾ, ಕಾರ್ಯಕ್ರಮವೊಂದರ ಸಲುವಾಗಿ ಬೆಂಗಳೂರಿನಿಂದ ಹೊರ ಹೊರಟಿದ್ದ ಸಿದ್ದರಾಮಯ್ಯ, ಮತ್ತೊಂದು ಕಡೆ ಮತ್ಯಾವುದೋ ಪ್ರವಾಸ ಮುಗಿಸಿ ಅಲ್ಲಿಗೆ ಬಂದಿಳಿದ ಯಡಿಯೂರಪ್ಪ. ಆಡಳಿತ ಪಕ್ಷದ ನಾಯಕರೊಬ್ಬರು, ವಿಪಕ್ಷದ ಮುಖಂಡರು ಮತ್ತೊಬ್ಬರು.

ನೇರಾನೇರ ಮುಖಾಮುಖಿ ಸಂದರ್ಭ, ಇನ್ನೇನು ಒಬ್ಬರನ್ನೊಬ್ಬರು ಮುಖ ನೋಡದೆ ತಮಗೆ ಸಂಬಂಧವಿಲ್ಲದಂತೆ ಹೊರಟು ಬಿಡುತ್ತಾರೆ ಎಂದುಕೊಂಡಿದ್ದ ಜೊತೆಗಿದ್ದವರು, ಬಿಸಿಬಿಸಿ ಸುದ್ದಿಗಾಗಿ ಕಾದು ನಿಂತಿದ್ದ ಮಾಧ್ಯಮದ ವರದಿಗಾರರೇ ದಂಗಾಗುವಂತೆ ಅಂದು ನಡೆದುಕೊಂಡಿದ್ದರು ಆ ಇಬ್ಬರು ರಾಜಕೀಯ ಧುರೀಣರು.

Image

ರಾಜಕೀಯ ವೈರುಧ್ಯಗಳ ಹೊರತಾಗಿಯೂ ಆತ್ಮೀಯತೆ ಪ್ರದರ್ಶಿಸಿದ ಇಬ್ಬರೂ ನಾಯಕರು, ವಿಶ್ರಾಂತಿ ಕೊಠಡಿಯಲ್ಲಿ ಕೆಲ ಕಾಲ ಕುಳಿತು ಇಬ್ಬರೂ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಅಲ್ಲಿಂದ ತಮ್ಮ ತಮ್ಮ ಗಮ್ಯಗಳತ್ತ ಪ್ರಯಾಣ ಬೆಳೆಸಿದ್ದರು.

ದೃಶ್ಯ -2 
ಬಿಜೆಪಿ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಂಭ್ರಮದ ಅದ್ಧೂರಿ ಜನ್ಮದಿನೋತ್ಸವ ಬೆಂಗಳೂರಿನ ಅರಮನೆ ಆವರಣದಲ್ಲಿ ಆಯೋಜನೆಗೊಂಡಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂತಹ ಸಮಾರಂಭಕ್ಕೆ ವೈಯುಕ್ತಿಕ ಆಹ್ವಾನದ ಮೇರೆಗೆ ತೆರಳಿದ ಸಿದ್ದರಾಮಯ್ಯ ಯಡಿಯೂರಪ್ಪನವರಿಗೆ ಶುಭ ಹಾರೈಸಿ ಬಂದಿದ್ದರು. ಸ್ನೇಹ ಸೌಜನ್ಯಕ್ಕಾಗಿ ಪಕ್ಷದ ಗಡಿ ಮೀರಿ ಸಿದ್ದರಾಮಯ್ಯ ಅಂದು ರಾಜನಾಥ್ ಸಿಂಗ್ ಇದ್ದ ವೇದಿಕೆಯಲ್ಲಿ ಯಡಿಯೂರಪ್ಪ ಜೊತೆ ಫೊಟೋಗೆ ಪೋಸ್ ನೀಡಿದ್ದರು.

Image

ದೃಶ್ಯ– 3 
ಮಾರ್ಚ್ 23, 2022 ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದ ಸಮಯ. ಅಂದಿನ ದಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಬಿ ಎಸ್ ಯಡಿಯೂರಪ್ಪ ಸಣ್ಣದೊಂದು ಔತಣಕೂಟವನ್ನೇರ್ಪಡಿಸಿದ್ದರು.

ಬೋಜನ ವಿರಾಮಕ್ಕೂ ಮೊದಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕರಿಗೆ ರಾಜ್ಯಾಭಿವೃದ್ಧಿ ವಿಚಾರದಲ್ಲಿ ಕಾವೇರಿದ ಮಾತಿನ ಚಕಮಕಿ ನಡೆದಿತ್ತು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ನಾಯಕರ ನಡುವೆ ಬಿಸಿಯೇರಿದ ಚರ್ಚೆ, ವಾಗ್ವಾದದ ಬೆನ್ನಲ್ಲೇ ಕೊಂಚ ಸಮಯದಲ್ಲೇ ಬೋಜನ ವಿರಾಮ ಘೋಷಣೆಯಾಯಿತು.

ಅಲ್ಲಿವರೆಗೂ ಹಾವು ಮುಂಗುಸಿಗಳಂತಿದ್ದ ಇಬ್ಬರೂ ನಾಯಕರು ಭೋಜನಶಾಲೆಯಲ್ಲಿ ಮುಖಾಮುಖಿಯಾದರು. ಸಿದ್ದರಾಮಯ್ಯ ಬಳಿಗೆ ಬಂದ ಯಡಿಯೂರಪ್ಪ ಅವರ ಕೈ ಹಿಡಿದು ಊಟಕ್ಕೆ ಆಹ್ವಾನಿಸಿದರು. ನಗುತ್ತಲೇ ಅದಕ್ಕೆ ಒಪ್ಪಿಗೆ ಸೂಚಿಸಿದ ಸಿದ್ದರಾಮಯ್ಯ ಯಡಿಯೂರಪ್ಪ ಜೊತೆ ಊಟದ ಹಾಲ್ ಗೆ ತೆರೆಳಿದರು.

Image

ಇವಿಷ್ಟೂ ವಿಚಾರಗಳನ್ನು ಇಂದು(ಆಗಸ್ಟ್ 3ರಂದು) ನಿಮ್ಮ ಮುಂದಿಡಲು ಏಕೈಕ ಕಾರಣ; ಪಕ್ಷಕ್ಕಿಂತ ಮಾನವೀಯ ಸಂಬಂಧ ಮುಖ್ಯ, ರಾಜಕೀಯ ಮೀರಿದ ವೈಯಕ್ತಿಕ ಸ್ನೇಹ ಮತ್ತು ಸೌಜನ್ಯ ದೊಡ್ಡದು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದ ಬಿ ಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ಸ್ನೇಹದ ವಿಚಾರ ಸಿದ್ದರಾಮಯ್ಯ ಜನ್ಮದಿನದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಗೆ ಬಂದಿರುವುದು.

ವಾರಿಗೆಯಲ್ಲಿ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರಿಗಿಂತ ನಾಲ್ಕು ವರ್ಷ ಹಿರಿಯರು. ರಾಜಕಾರಣದ ಅನುಭವದ ಮೂಸೆಯಲ್ಲಿ ಇಬ್ಬರೂ ಒಂದಷ್ಟು ವಿಚಾರಗಳನ್ನು ಹೊರತುಪಡಿಸಿ ಹೆಚ್ಚು ಕಡಿಮೆ ಸಮಾನ ಅನುಭವಿಗಳೇ… ಹೀಗಿರುವ ಇಬ್ಬರೂ ಜನ ಮಾನಸದಲ್ಲಿ ಮಾಸ್ ಲೀಡರುಗಳೇ.

ಆದರೆ, ಇಂದಿನ ಸಿದ್ದರಾಮಯ್ಯ ಜನ್ಮದಿನದ ಆಚರಣೆಯ ವಿಷಯದಲ್ಲಿ ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಿಜೆಪಿ, ಜೆಡಿಎಸ್‌ ಸೇರಿದಂತೆ ಪ್ರತಿಪಕ್ಷಗಳ ಪ್ರಮುಖ ನಾಯಕರು ನಡೆದುಕೊಂಡ ರೀತಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಸಣ್ಣ ಪುಟ್ಟ ವಿಚಾರಗಳಿಗೂ ಕಣ್ಣೀರು ಹಾಕಿ ಅಪಾರ ಹೃದಯವಂತಿಕೆ ಪ್ರದರ್ಶಿಸುವ ರಾಜಕಾರಣಿಗಳು ಕೂಡ ಈ ವಿಚಾರದಲ್ಲಿ ಕೇವಲ ರಾಜಕೀಯದ ಕನ್ನಡಕ ಹಾಕಿಕೊಂಡು ಕಾಲಕಳೆದು ಸೌಜನ್ಯಹೀನರಾದರೆ ಎನ್ನುವ ಮಾತು ಕೇಳಿಬರುತ್ತಿದೆ.

Image

ಬೇರೆಯವರ ವಿಚಾರ ಹಾಗಿರಲಿ ಖುದ್ದು ಯಡಿಯೂರಪ್ಪನವರೇ ಈ ವಿಚಾರದಲ್ಲಿ ಹೀಗೇಕೆ ನಡೆದುಕೊಂಡರೆನ್ನುವುದು ಖುದ್ದು ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದೆ.

ರಾಜಕೀಯ ನಾಯಕರೊಬ್ಬರು ಅಮೃತ ಮಹೋತ್ಸವ ಆಚರಿಸಿಕೊಳ್ಳುವುದು ಸಾಧನೆಯ ವಿಚಾರ ಎನ್ನುವುದು ಎಚ್ ಡಿ ದೇವೇಗೌಡ, ಎಸ್ ಎಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪರಾದಿಯಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ. ಕೆಲವರಿಗೆ ಈ ಘಟ್ಟ ಕಳೆದದ್ದೇ ಗೊತ್ತಿಲ್ಲ. ಮತ್ತೆ ಕೆಲವರಿಗೆ ಅದೇ ರಾಜಕೀಯ ನಿವೃತ್ತಿಯ ಕೊನೆ ಘಟ್ಟ, ಮತ್ತೆ ಕೆಲವರಿಗೆ ಸಂಭ್ರಮಿಸಲು ಸಂಖ್ಯಾಬಲವನ್ನೇ ಹೊಂದದ ಪರಿಸ್ಥಿತಿ. ಹೀಗಿರುವಾಗ ಅಪರೂಪವೆನ್ನುವಂತೆ ಸಿದ್ದರಾಮಯ್ಯ ಅಭಿಮಾನಿಗಳು ದೊಡ್ಡದೊಂದು ಅವಿಸ್ಮರಣೀಯ ಕಾರ್ಯಕ್ರಮ ಆಯೋಜಿಸಿ ರಾಜಕೀಯ ಇತಿಹಾಸದಲ್ಲೊಂದು ದಾಖಲೆ ಬರೆದಿದ್ದಾರೆ.

ಆದರೆ, ಇಂತಹ ಸಂಭ್ರಮದ ಹೊತ್ತಲ್ಲಿ ಸಿದ್ದರಾಮಯ್ಯನವರಿಗೆ ಒಂದು ಶುಭಹಾರೈಕೆ, ಒಂದು ಅಭಿನಂದನೆ ಹೇಳಲೂ ಪ್ರತಿಪಕ್ಷಗಳ ಘಟಾನುಘಟಿ ನಾಯಕರಿಗೆ ಸೌಜನ್ಯವಿಲ್ಲದಾಯಿತೆ? ರಾಜ್ಯದ ರಾಜಕಾರಣ ಅಂತಹ ಕನಿಷ್ಟ ಮಾನವೀಯತೆಯನ್ನೂ ಕಳೆದುಕೊಂಡು ಕೆಟ್ಟ ರಾಜಕೀಯ ಪರಂಪರೆಗೆ ನಾಂದಿ ಹಾಡಿಬಿಟ್ಟಿತೆ? ಎಂಬ ಮಾತುಗಳು ಆರಂಭವಾಗಿವೆ.

ಈ ಸುದ್ದಿ ಓದಿದ್ದೀರಾ?

ಸಿದ್ದು-ಡಿಕೆಶಿ: ಕಾರ್ಯಕರ್ತರ ಹರ್ಷೋದ್ಗಾರದ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವರೇ ನಾಯಕರು?

ಪ್ರತಿ ವರ್ಷ ಆಗಸ್ಟ್ 12ರಂದು(ದಾಖಲೆಗಳ ಪ್ರಕಾರ) ಸಿದ್ದರಾಮಯ್ಯ ಜನ್ಮದಿನಕ್ಕೆ ಮರೆಯದೆ ಶುಭಹಾರೈಸುತ್ತಿದ್ದ ಯಡಿಯೂರಪ್ಪ ಈ ವಿಚಾರದಲ್ಲೇಕೆ ಮೌನಕ್ಕೆ ಶರಣಾಗಿದ್ದಾರೆ? ಅವರ ಆ ಮೌನ ನಿರ್ಲಕ್ಷ್ಯವೇ ಅಥವಾ ಸೌಜನ್ಯದ ಶಿಷ್ಟಾಚಾರವನ್ನೂ ಮೀರಿದ ರಾಜಕೀಯ ಅಸಹನೆಯೇ? ಸಣ್ಣ-ಪುಟ್ಟ ವಿಚಾರಗಳಿಗೂ ಭಾವುಕರಾಗಿ ಕಣ್ಣೀರಿಡುವ, ಕುಮಾರಸ್ವಾಮಿ, ಜನತಾ ಪರಿವಾರದಲ್ಲಿ ಸಿದ್ದರಾಮಯ್ಯ ಜೊತೆಗಿದ್ದು ಈಗ ಕವಲೊಡೆದು ಕಮಲ ಪಾಳೆಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ,.. ಹೀಗೆ ಸಾಲು-ಸಾಲು ಹಿರಿಯ ರಾಜಕಾರಣಿಗಳು ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನದ ವಿಷಯದಲ್ಲಿ ಕನಿಷ್ಟ ಸೌಜನ್ಯದ ಶುಭಾಶಯ ಕೋರುವ ವಿಚಾರದಲ್ಲೇಕೆ ಅಚ್ಚರಿಯ ಮೌನ ತಾಳಿದ್ದಾರೆ?

ಸಿದ್ದರಾಮಯ್ಯ ಜನ್ಮ ದಿನದ ಅಮೃತ ಮಹೋತ್ಸವ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದ್ದಿದ್ದರೆ ಆ ವಿಚಾರ ಬೇರೆ. ಇದು ಪಕ್ಷದ ಹೊರತಾಗಿ ಅಭಿಮಾನಿ ಸಮಿತಿ ಮಾಡಿದ ಸಮಾರಂಭ. ಹೀಗಿರುವಾಗ ಪ್ರತಿಪಕ್ಷಗಳ ನಾಯಕರು ಯಾಕೆ ಹೀಗೆ ನಡೆದುಕೊಂಡರೆನ್ನುವುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ನಿಮಗೆ ಏನು ಅನ್ನಿಸ್ತು?
1 ವೋಟ್