ಮಳೆಗಾಲ ಅಧಿವೇಶನ | ‘ಪೇ ಸಿಎಂ’ ಪೋಸ್ಟರ್ ವಿಚಾರ ಪ್ರಸ್ತಾಪಿಸಿದ ಪಿ ರಾಜೀವ್; ತಿರುಗಿಬಿದ್ದ ಕಾಂಗ್ರೆಸ್

PayCM
  • ರಾಜಕೀಯವಾಗಿ ಕರ್ನಾಟಕ ಅಧಃಪತನಕ್ಕೆ ತಲುಪುತ್ತಿದೆ 
  • ಯಾವ ಆಧಾರದಲ್ಲಿ ಮುಖ್ಯಮಂತ್ರಿಗಳ ಫೋಟೋ ಬಳಸಿದ್ದಾರೆ?

ವಿಧಾನ ಪರಿಷತ್ತಿನಲ್ಲಿ ಸದನ ಮುಂದೂಡಲು ಕಾರಣವಾದ ‘ಪೇ ಸಿಎಂ’ ವಿವಾದ ಕೆಳ ಮನೆಯಲ್ಲೂ ಗುರುವಾರ ವಾಗ್ವಾದಕ್ಕೆ ಕಾರಣವಾಯಿತು.

ಸದನದ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಪಿ ರಾಜೀವ್ ವಿಚಾರ ಪ್ರಸ್ತಾಪ ಮಾಡಿದರು. “ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವವಣಿಗೆಗಳನ್ನು ಗಮನಿಸಿದರೆ ರಾಜಕೀಯವಾಗಿ ಕರ್ನಾಟಕ ಅಧಃಪತನಕ್ಕೆ ತಲುಪುತ್ತಿರುವ ಸೂಚನೆ ಕಾಣಿಸುತ್ತಿದೆ” ಎಂದರು.

“ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಬಿ ಎಸ್ ಯಡಿಯೂರಪ್ಪ ಖಂಡಿಸಿದ್ದರು. ಇಂಥ ಘಟನೆಯನ್ನು ಯಾವುದೇ ಪಕ್ಷದ ಕಾರ್ಯಕರ್ತರು ಮಾಡಿದರೂ ಅದು ಖಂಡನೀಯ. ತಮಗೆ ಆಗದ ಸಾಹಿತಿಗಳ ಮೇಲೆ ಮಸಿ ಎರಚುವುದೂ ಸರಿಯಲ್ಲ. ‘ಪೇ ಸಿಎಂ’ ಪೋಸ್ಟರ್ ಹಾಕಿ ಮುಖ್ಯಮಂತ್ರಿಗಳ ಫೋಟೋ ಬಳಸಲು ಇವರಿಗೆ ಯಾವ ಆಧಾರ ಇದೆ? ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಇದ್ದರೆ ದೂರು ದಾಖಲಿಸಬಹುದು. ಯಾವ ಆಧಾರದಲ್ಲಿ ಫೋಟೊ ಬಳಸಿದರು” ಎಂದು ಪ್ರಶ್ನಿಸಿದರು.

“ಯಾರು ಫೋಟೋ ಬಳಸಿದ್ದು” ಎಂದು ಸ್ಪೀಕರ್ ಕಾಗೇರಿ ರಾಜೀವ್ ಅವರನ್ನು ಪ್ರಶ್ನಿಸಿದರು. “ಕಾಂಗ್ರೆಸ್ ಸದಸ್ಯರು” ಎಂದು ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಹೇಳಿದರು.

ತಮ್ಮ ಮಾತು ಮುಂದುವರೆಸಿದ ರಾಜೀವ್, “ಒಂದು ಪಕ್ಷದ ವಕ್ತಾರರಾದ ಪ್ರಿಯಾಂಕ್ ಖರ್ಗೆ ಇದೊಂದು ಆಂದೋಲನ ಎಂದು ಹೇಳಿದ್ದಾರೆ” ಎಂದರು. ಕೂಡಲೇ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಆಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

“ನೀವು ಏನನ್ನು ಹೇಳಬೇಕೆಂದು ಬಯಸಿದ್ದೀರೋ ಅದನ್ನು ನೇರವಾಗಿ ಹೇಳಿ, ಬೇರೆ ವಿಚಾರ ಪ್ರಸ್ತಾಪ ಮಾಡಿದರೆ ಹೀಗೇ ಗದ್ದಲ ಉಂಟಾಗುತ್ತದೆ. ಸರ್ಕಾರಕ್ಕೆ ಏನು ಹೇಳಬೇಕೆಂಬುದನ್ನು ಸ್ಪಷ್ಟವಾಗಿ ಹೇಳಿ; ಇಲ್ಲದಿದ್ದರೆ ಗೊಂದಲ ಉಂಟಾಗುತ್ತದೆ. ಕಾಂಗ್ರೆಸ್ ವಿಚಾರ ಇದ್ದರೆ ಆಚೆ ಮಾತನಾಡಿ, ಸರ್ಕಾರಕ್ಕೆ ಏನು ಹೇಳಬೇಕೋ ಅದನ್ನು ಮಾತ್ರ ಇಲ್ಲಿ ಹೇಳಿ. ಬಿಜೆಪಿ ಸದಸ್ಯರು ಸುಮ್ಮನೆ ಕುಳಿತುಕೊಳ್ಳಬೇಕು” ಎಂದು ಸ್ಪೀಕರ್ ತಾಕೀತು ಮಾಡಿದರು.

“ಮುಖ್ಯಮಂತ್ರಿ ಹುದ್ದೆ ಘನತೆಯುಳ್ಳದ್ದು, ಕ್ಯೂ ಆರ್ ಕೋಡ್‌ಗೆ ಮುಖ್ಯಮಂತ್ರಿ ಫೋಟೋವನ್ನು ಕಾಂಗ್ರೆಸ್‌ನವರು ಬಳಸಿದ್ದಾರೆ” ಎಂದು ರಾಜೀವ್ ಆರೋಪಿಸಿದರು. 

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ವಿಧಾನ ಪರಿಷತ್ತಿನಲ್ಲಿ ಗದ್ದಲ ಸೃಷ್ಟಿಸಿದ ‘ಪೇ ಸಿಎಂ’ ಪೋಸ್ಟರ್ ವಿವಾದ: ಸದನ ಮುಂದೂಡಿಕೆ

ರಾಜೀವ್ ಮಾತಿಗೆ ಕೆರಳಿದ ಕಾಂಗ್ರೆಸ್ ಸದಸ್ಯ ಕೃಷ್ಣ ಭೈರೇಗೌಡ, “ಹತ್ತು ಪರ್ಸೆಂಟ್ ಸರ್ಕಾರ ಎಂದು ಹೇಳುವಾಗ ನಿಮ್ಮ ಬಳಿ ಆಧಾರ ಏನಿತ್ತು? ಬೇಕಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಿ, ಇಲ್ಲಿ ಯಾಕೆ ನಮ್ಮ ಮೇಲೆ ಆರೋಪ ಮಾಡ್ತೀರಾ? ರಾಜಕೀಯ ಭಾಷಣ ಮಾಡಲು ಇದು ಜಾಗ ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ವಿಪ್ ಆಗಿರುವ ನೀವು ಹೀಗೆ ಪದೇಪದೆ ಎದ್ದು ಮಾತನಾಡುವುದು ಸರಿಯಲ್ಲ; ನಿಮ್ಮ ಜವಾಬ್ದಾರಿ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಉಳಿದದ್ದನ್ನು ಸರ್ಕಾರದ ಮಂತ್ರಿಗಳು ಮಾಡುತ್ತಾರೆ” ಎಂದು ಸದನದಲ್ಲಿ ಕೂಗಾಡುತ್ತಿದ್ದ ಸರ್ಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿಗೆ ಸಭಾಧ್ಯಕ್ಷ ಕಾಗೇರಿ ಗದರಿದರು.

“ನಮ್ಮ ಎಂಟು ಜನ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಕಾನುನು ಪ್ರಕಾರ ಅವರ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ, ಅದು ಬಿಟ್ಟು ಇಲ್ಲಿ ರಾಜಕೀಯ ಮಾತನಾಡಬಾರದು” ಎಂದು ಕೃಷ್ಣ ಭೈರೇಗೌಡ ಹೇಳಿದರು.

ಗದ್ದಲ ನಡೆಯುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸದನದಲ್ಲೇ ಇದ್ದರು. ಎರಡೂ ಪಕ್ಷಗಳ ನಡುವೆ ವಾಗ್ವಾದ ತಾರಕಕ್ಕೇರಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮಧ್ಯಪ್ರವೇಶಿಸಿ ವಿವಾದವನ್ನು ತಿಳಿಗೊಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್