
- ಅರಸೀಕೆರೆ ರಸ್ತೆ ಅಪಘಾತ ರಾಜ್ಯವನ್ನು ತಲ್ಲಣಗೊಳಿಸಿದೆ
- ವಸೂಲಿ ಮಾಡುವುದೇ ಸರ್ಕಾರದ ಕೆಲಸ; ಜನರ ಕಾಳಜಿ ಮುಖ್ಯವಲ್ಲ
ಗುಂಡಿ ಬಿದ್ದ ರಸ್ತೆಗಳಿಂದ ರಾಜ್ಯದ ಗೌರವ ಮೂರಾಬಟ್ಟೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಸುಜಾತ ಚಿತ್ರಮಂದಿರದ ಬಳಿ ಸೋಮವಾರ ರಸ್ತೆ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇಡೀ ರಾಜ್ಯದಲ್ಲಿನ ಎಲ್ಲ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವ ಸ್ಥಿತಿ ಇದೆ” ಎಂದರು.
“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಇಂತಹ ಕಾನ್ಫರೆನ್ಸ್ಗಳು ಎಷ್ಟೋ ಆಗಿವೆ. ಆದರೆ, ಗುಂಡಿಗಳು ಮಾತ್ರ ಮುಚ್ಚಿಲ್ಲ, ಎಲ್ಲವೂ ಹಾಗೆಯೇ ಇವೆ. ಜನರ ಜೀವಗಳನ್ನು ಕಾಪಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ” ಎಂದವರು ವಾಗ್ದಾಳಿ ನಡೆಸಿದರು.
“ಮಳೆ ಬಂದಿರುವುದು ನಿಜ; ಕರ್ನಾಟಕದಲ್ಲಿ ಮಾತ್ರ ಮಳೆ ಆಗಿಲ್ಲ. ಮಳೆಗೆ ಅಗತ್ಯವಾದ ತಯಾರಿ ಈ ಸರ್ಕಾರ ಮಾಡಿಕೊಂಡಿಲ್ಲ. ಒಡಿಶಾ ಸೇರಿದಂತೆ ಅನೇಕ ಕಡೆ ಪ್ರತಿ ವರ್ಷ ಮಳೆ ಬಂದರೂ ಅಲ್ಲೆಲ್ಲ ಏನೂ ಅಪಾಯ ಆಗಿಲ್ಲ. ತಕ್ಷಣವೇ ಎಲ್ಲವನ್ನೂ ಅಲ್ಲಿನ ಸರ್ಕಾರದವರು ಸರಿ ಮಾಡುತ್ತಾರೆ. ಆದರೆ, ನಮ್ಮಲ್ಲಿ ಅಂತಹ ಕೆಲಸ ಆಗುತ್ತಿಲ್ಲ. ಗುಂಡಿ ಮುಚ್ಚುವ ಕೆಲಸ ಮಾತ್ರ ಆಗ್ತಿಲ್ಲ, ಬದಲಿಗೆ ಗುಂಡಿಗಳ ಹೆಸರಲ್ಲಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ” ಎಂದು ಟೀಕಿಸಿದರು.
ವಸೂಲಿ ಮಾಡುವುದೇ ಸರ್ಕಾರದ ಕೆಲಸ
“ಅರಸೀಕೆರೆ ಸಮೀಪ ರಸ್ತೆ ಅಪಘಾತ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಅಗತ್ಯವಾದರೆ ಸರ್ಕಾರ ಇಡೀ ರಾಜ್ಯದಲ್ಲಿ ಒಂದು ಸಮೀಕ್ಷೆ ಮಾಡಿಸಲಿ. ಅದನ್ನು ಮಾಡುವ ಬದಲು ಈ ಸರ್ಕಾರ ವಸೂಲಿ ಮಾಡುವುದಕ್ಕೆ ನಿಂತಿದೆ” ಆಕ್ರೋಶ ವ್ಯಕ್ತಪಡಿಸಿದರು.
“ರಸ್ತೆಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಎಎಸ್ಐ ಸೇರಿ 3-4 ಜನ ಪೊಲೀಸರು ಜನರ ವಾಹನಗಳನ್ನು ನಿಲ್ಲಿಸಿ ವಸೂಲಿ ಮಾಡುತ್ತಾರೆ. ಬೆಳಗ್ಗೆ ವಸೂಲಿ ಮಾಡಿ ರಾತ್ರಿ ಎಲ್ಲರೂ ಹಂಚಿಕೊಳ್ಳುತ್ತಾರೆ. ವಸೂಲಿ ಮಾಡುವುದಕ್ಕೆ ಈ ಸರ್ಕಾರ ನಿಂತಿದೆ” ಎಂದು ಗಂಭೀರ ಆರೋಪ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯವರ ಮೆದುಳು-ನಾಲಿಗೆ ಸಂಪರ್ಕ ಕಡಿದು ಹೋಗಿದೆ: ಸಿದ್ದರಾಮಯ್ಯ
“ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಪ್ರಾರಂಭವಾಗಿ ಸೋಮವಾರ ಬೆಳಗ್ಗೆವರೆಗೆ ವ್ಯಾಪಾರ, ವಹಿವಾಟು, ಬಾರ್ ಪಬ್ಬಿಗೆ ಎಲ್ಲದ್ದಕ್ಕೂ ಸರ್ಕಾರವೇ ಅವಕಾಶ ಕೊಟ್ಟಿದೆ. ರಾತ್ರಿ ವೇಳೆ ಕುಡಿಯೋದಕ್ಕೆ ಅವಕಾಶ ಕೊಡೋದು ಸರ್ಕಾರವೇ. ಹೋಟೆಲ್ಗೆ ರಾತ್ರಿ ವೇಳೆ ಅನುಮತಿ ಕೋಡೋದು ಕೂಡ ಸರ್ಕಾರವೇ. ಕುಡಿದ ಮೇಲೆ ಮತ್ತೆ ಹಣ ವಸೂಲಿ ಮಾಡುವುದು ಕೂಡ ಸರ್ಕಾರವೇ” ಎಂದು ಅವರು ಕಿಡಿಕಾರಿದರು.
ಮೈಸೂರಿನಲ್ಲಿ ಅಭ್ಯರ್ಥಿಗಳಿಗೆ ಕಾರ್ಯಾಗಾರ
“ಮೈಸೂರಿನಲ್ಲಿ ಇದೇ ಅ. 19-20 ರಂದು ನಮ್ಮ ಪಕ್ಷದ 126 ಅಭ್ಯರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಈ ಕಾರ್ಯಾಗಾರ ಬಿಡದಿಯಲ್ಲಿ ನಡೆದ ಜನತಾ ಪರ್ವ ಕಾರ್ಯಾಗಾರದಲ್ಲಿ ಕೊಟ್ಟ ಟಾಸ್ಕ್ಗಳನ್ನು ಪೂರ್ಣ ಮಾಡಿದ್ದಾರಾ? ಇಲ್ಲವಾ? ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಚುನಾವಣೆಗೆ ಹೇಗೆ ಕೆಲಸ ಮಾಡಬೇಕು ಎಂದು ಸೂಚನೆ ಕೊಡುತ್ತೇವೆ. ಬಿಜೆಪಿ-ಕಾಂಗ್ರೆಸ್ ಭರಾಟೆ ಏನೇ ಇದ್ದರೂ ಜೆಡಿಎಸ್ ಪರ ಜನರ ಭಾವನೆ ಇದೆ. ಈ ಬಾರಿ ಕುಮಾರಸ್ವಾಮಿಗೆ ಅವಕಾಶ ಕೊಡಬೇಕು ಅಂತ ಜನರ ಮನಸ್ಸಿನಲ್ಲಿ ಇದೆ. ಹೀಗಾಗಿ ಈ ಕಾರ್ಯಾಗಾರ ಮಹತ್ವದ್ದಾಗಿದೆ” ಎಂದವರು ಹೇಳಿದರು.
ಮನೆ, ಮನೆಗೆ ಕನ್ನಡ ಬಾವುಟ
“ನವೆಂಬರ್ 1ರಂದು ನಮ್ಮ ಪಕ್ಷದಿಂದ ಮನೆಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇವೆ. ರಾಜ್ಯದ ಜನರು ಇದರಲ್ಲಿ ಭಾಗವಹಿಸಬೇಕು. ಬುಧವಾರ ಈ ಸಂಬಂಧ ಶಾಸಕರ ಸಭೆ ಕರೆಯಲಾಗಿದೆ. ಅದರಲ್ಲಿ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮದ ರೂಪುರೇಷೆ ಸಿದ್ಧ ಮಾಡುತ್ತೇವೆ” ಎಂದರು.