'ಪೇ ಸಿಎಂ' ಅಭಿಯಾನ | ಕೆಳಮಟ್ಟದ ಯೋಚನೆ ಎಂದು ಬಿಜೆಪಿ ಮುಖಂಡರ ಖಂಡನೆ; ಜನಪ್ರೇರಿತ ಅಭಿಯಾನ ಎಂದು ಕಾಂಗ್ರೆಸ್ ಸಮರ್ಥನೆ

  • ಬಿಜೆಪಿ ಆಡಳಿತ ಸಹಿಸಲಾಗದೆ ಕಾಂಗ್ರೆಸ್ ಈ ಅಭಿಯಾನ ಮಾಡುತ್ತಿದೆ: ಬಿಜೆಪಿ
  • 'ಪೇ ಸಿಎಂ' ಜನಸಾಮಾನ್ಯರ ಅಭಿಯಾನ; ಕಾಂಗ್ರೆಸ್ ಜನರೊಂದಿಗಿರಲಿದೆ: ಕಾಂಗ್ರೆಸ್

ಬೆಂಗಳೂರಿನಲ್ಲಿ ಆರಂಭವಾಗಿರುವ 'ಪೇ ಸಿಎಂ' ಅಭಿಯಾನದ ವಿರುದ್ಧ ಬಿಜೆಪಿ ಶಾಸಕರು ಹರಿಹಾಯ್ದಿದ್ದಾರೆ. "ನಮ್ಮ ಪಕ್ಷದ ಅಭಿವೃದ್ಧಿ ಸಹಿಸದಿರುವ ಕಾಂಗ್ರೆಸ್ಸಿಗರು, ಈ ರೀತಿ ಕೆಳಮಟ್ಟದ ಅಭಿಯಾನ ಮಾಡುತ್ತಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, "ಸಿಎಂ ಭಾವಚಿತ್ರ ಹಾಕಿ 'ಪೇ ಸಿಎಂ' ಎಂದು ಕಾಂಗ್ರೆಸ್‌ನವರು ಅಭಿಯಾನ ಮಾಡ್ತಾ ಇದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಮಾಡ್ತಾ ಇದ್ದಾರೆ. ಮೊದಲು ಅವರಿಗೆ ಪೇ ಮಾಡಲಿ; ಕಾರು, ವಾಚ್ ಬೇಕು ಎನ್ನುವವರಿಗೆ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿದವರಿಗೆ ಮೊದಲು ಪೇ ಮಾಡಲಿ" ಎಂದು ಅವರು ಕಿಡಿ ಕಾರಿದರು.

"ಭ್ರಷ್ಟಾಚಾರ ಹುಟ್ಟಿರುವುದೇ ಕಾಂಗ್ರೆಸ್‌ನಿಂದ. ಕಾಂಗ್ರೆಸ್ ಇರುವವರೆಗೆ ಭ್ರಷ್ಟಾಚಾರ ನಿಲ್ಲಲ್ಲ. ಕಳೆದ ಎಂಟು ವರ್ಷಗಳಲ್ಲಿ ಏನೂ ಸಿಗದೆ ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಹಗರಣದ ಇತಿಹಾಸ ಇರುವುದು ಕಾಂಗ್ರೆಸ್‌ಗೆ. ಹಗರಣ ಮಾಡೊಕೆ ಜನ ಬಿಟ್ಟಿಲ್ಲ. ಈ ರೀತಿಯ ಕೆಳಮಟ್ಟದ ಯೋಚನೆ ಕಾಂಗ್ರೆಸ್‌ಗೆ ಒಳ್ಳೆಯದಲ್ಲ. ಬಿಜೆಪಿಯವರ ಬಟ್ಟೆ ಬಿಚ್ಚಿಸಿ ನಿಲ್ಲಿಸೋಣ ಎಂದು ಅಂದುಕೊಂಡಿರಬಹುದು. ಆದರೆ, ಅದು ಆಗಲ್ಲ" ಎಂದು ಶಿಕ್ಷಣ ಸಚಿವ ನಾಗೇಶ್ ಕೂಡ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನೊಂದೆಡೆ ಬಿಜೆಪಿ ಆರೋಪ ಅಲ್ಲಗೆಳೆದಿರುವ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, "ಪೇ ಸಿಎಂ ಎನ್ನುವುದು ಜನಪ್ರೇರಿತ ಅಭಿಯಾನ. ಇದು 40% ಕಮಿಷನ್ ಸರ್ಕಾರ ಅನ್ನುವುದು ತಿಳಿದಿದೆ. ರಾಷ್ಟ್ರದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಇದು. ಬೇರೆ ರಾಜ್ಯಗಳಿಗೆ ತೆರಳಿದಾಗಲೂ 40% ಸರ್ಕಾರ ಅಂತ ಸ್ವಾಗತಿಸುತ್ತಿದ್ದಾರೆ. ಇವರು ಭ್ರಷ್ಟಾಚಾರ ಬಿಟ್ಟು ಜನಪರ ಆಡಳಿತ ನೀಡುವ ಬದಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದು ಸರಿಯಲ್ಲ" ಎಂದು ಕಿಡಿ ಕಾರಿದರು.

ಈ ಸುದ್ದಿ ಓದಿದ್ದೀರಾ? : ನಮ್ಮ ಅವಧಿಯಲ್ಲಿ ಭ್ರಷ್ಟಾಚಾರವಾಗಿದ್ದರೆ ಸರ್ಕಾರ ನ್ಯಾಯಾಂಗ ತನಿಖೆ ಮಾಡಿಸಲಿ; ಸಿದ್ದರಾಮಯ್ಯ

"ಇದು ಸಾಮಾನ್ಯ ಜನ ಮಾಡುತ್ತಿರುವ ಅಭಿಯಾನ. ಕಾಂಗ್ರೆಸ್ ಜನರ ಪರವಾಗಿ ಇರಲಿದೆ. ಉತ್ತಮ ಆಡಳಿತ ನೀಡಲು ಬಿಜೆಪಿಯವರು ಮುಂದಾಗಲಿ. ಭಾವನಾತ್ಮಕ ವಿಚಾರ ಮುಂದಿಟ್ಟು, ಜನರನ್ನು ಮರುಳು ಮಾಡುವುದು ಬೇಡ" ಎಂದು ರಿಜ್ವಾನ್ ಅರ್ಷದ್ ಬಿಜೆಪಿಯನ್ನು ಕುಟುಕಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್