'ಪೇ ಸಿಎಂ' ಅಭಿಯಾನ | ನಾಳೆ ಸರ್ಕಾರಿ ಕಚೇರಿಗಳ ಮೇಲೆ ಪೋಸ್ಟರ್ ಅಂಟಿಸುತ್ತೇವೆ: ಡಿ ಕೆ ಶಿವಕುಮಾರ್ ಘೋಷಣೆ

  • ಸದನದೊಳಗೂ 40% ಕಮಿಷನ್ ಹೋರಾಟ ಮಾಡುತ್ತೇವೆ
  • ನಮ್ಮ ವಿರುದ್ಧವೂ ಪ್ರಕರಣ ದಾಖಲಿಸಲು ಪೊಲೀಸರಿಗೆ ತಿಳಿಸಿದ್ದೇವೆ

'ಪೇ ಸಿಎಂ' ಅಭಿಯಾನದ ಭಾಗವಾಗಿ ಶುಕ್ರವಾರ ಸರ್ಕಾರಿ ಕಚೇರಿಗಳ ಮೇಲೆ ಪೋಸ್ಟರ್ ಅಂಟಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.

'ಪೇ ಸಿಎಂ' ಅಭಿಯಾನದ ಹಿನ್ನೆಲೆಯಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಇಟ್ಟಿರುವ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿದ ಡಿ ಕೆ ಶಿವಕುಮಾರ್, ಬಂಧಿತ ಪಕ್ಷದ ಸದಸ್ಯರ ಜೊತೆ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳು ಪೋಸ್ಟರ್ ವಿಚಾರಕ್ಕೆ ಇಷ್ಟು ತಲೆ ಕೆಡಿಸಿಕೊಂಡು ಗಾಬರಿಯಾಗಿರುವುದು ಏಕೆ? ಈ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಏಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ, ಪ್ರತಿಭಟನೆಗಳು ಸರ್ವೆ ಸಾಮಾನ್ಯ ಹೀಗಿರುವಾಗ ಸರ್ಕಾರ ಈ ಕ್ರಮವನ್ನೇಕೆ ತೆಗೆದುಕೊಂಡಿದೆ" ಎಂದು ಶಿವಕುಮಾರ್ ಕೇಳಿದರು.

"ಸರ್ಕಾರದ ಈ ಕ್ರಮ ಖಂಡಿಸಲು ನಾಳೆ ಅಧಿಕೃತವಾಗಿ ನಮ್ಮ ಶಾಸಕರೊಂದಿಗೆ ನಾವುಗಳೇ ಪೋಸ್ಟರ್ ಪ್ರತಿಭಟನೆ ಮಾಡುತ್ತೇವೆ. ಸರ್ಕಾರಿ ಕಚೇರಿಗಳ ಗೋಡೆಗಳಿಗೆ 'ಪೇ ಗೌರ್ನಮೆಂಟ್' ಪೋಸ್ಟರ್ ಅಂಟಿಸಲಿದ್ದೇವೆ" ಎಂದು ಶಿವಕುಮಾರ್ ಹೇಳಿದರು.

ಇದೇ ವೇಳೆ ತಮ್ಮ ವಿರುದ್ಧ ಬಿಜೆಪಿ ನಡೆಸಿರುವ ಪೋಸ್ಟರ್ ವಿಚಾರದ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, "ಬಿಜೆಪಿಯವರು ನಮ್ಮ ಬಗ್ಗೆಯೂ ಕ್ಯೂಆರ್ ಕೋಡ್ ಹಾಕಿದ್ದಾರೆ. ನಾನು ವಿಚಾರಣೆಗೆ ಹೋದ ಸಮಯದಲ್ಲಿ ನಾನು ಕಂಬಿ ಹಿಂದೆ ಇರುವಂತೆ ಮಾಧ್ಯಮಗಳಲ್ಲಿ ಫೋಟೋ ಹಾಕಿದ್ದರು. ಹಾಗೆಂದು ನಾನು ಅವರ ವಿರುದ್ಧ ದೂರು ನೀಡಲು ಸಾಧ್ಯವೇ? ರಾಜಕೀಯದಲ್ಲಿ ಇರುವವರನ್ನು  ಜನ ಪ್ರಶ್ನಿಸುವುದು, ಟೀಕಿಸುವುದು ಸಹಜ. ಅಧಿಕಾರದಲ್ಲಿ ಇರುವವರು ಇದನ್ನು ಜೀರ್ಣಿಸಿಕೊಳ್ಳಬೇಕು" ಎಂದರು.

ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಅಭಿಯಾನ: 'ಪೇ ಸಿಎಂ’ ಎಂದು ಪೋಸ್ಟರ್ ಅಂಟಿಸಿ ಅಣಕ

"ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ನಮ್ಮ ಅಭಿಯಾನದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ನಾವು ಭ್ರಷ್ಟಾಚಾರಕ್ಕೆ ಬಲಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಪಕ್ಷದ ವತಿಯಿಂದ ನಾವೇ ಟೋಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಲು ಹೇಳಿದ್ದೆವು. ಇದು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡುವುದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.

"ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಇದು ಭಯ, ದ್ವೇಷದ ರಾಜಕಾರಣವಾಗಿದೆ. 40% ಕಮಿಷನ್ ಆರೋಪವನ್ನು ನಾವು ಮಾಡಿದ್ದೇವಾ? ಸಿಎಂ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ನಾವು ಹೇಳಿದ್ದೇವಾ? ನಿಮ್ಮ ಶಾಸಕ ಯತ್ನಾಳ್ ಅವರೇ ಇದನ್ನು ಹೇಳಿದ್ದಾರೆ. ಹಗರಣದ ಬಗ್ಗೆ ಮಾತನಾಡಿದ ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಮನ್ಸ್ ನೀಡುವ ಸರ್ಕಾರ ಯತ್ನಾಳ್, ವಿಶ್ವನಾಥ್, ಮಠದ ಸ್ವಾಮೀಜಿಗಳಿಗೆ ಯಾಕೆ ಸಮನ್ಸ್ ನೀಡಲಿಲ್ಲ? ವಿಧಾನಸೌಧದ ಮುಂದೆ ಗುತ್ತಿಗೆದಾರರ ಸಂಘದವರು ಆರೋಪ ಮಾಡಿದಾಗ ಯಾಕೆ ಕೇಸ್ ಹಾಕಲಿಲ್ಲ? ಈ ವಿಚಾರ ಜನರ ಬಾಯಲ್ಲಿ ಹರಿದಾಡುತ್ತಿದೆ. ನೀವು ನಮ್ಮ ಮೇಲೂ ಆರೋಪ ಮಾಡಿದ್ದೀರಿ. ಇವೆಲ್ಲವನ್ನೂ ತನಿಖೆ ಮಾಡಿಸಿ. ಆಗ ನಾವು ಅದನ್ನು ಸ್ವಾಗತಿಸುತ್ತೇವೆ" ಎಂದು ಶಿವಕುಮಾರ್ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ನಮ್ಮ ವಿರುದ್ಧ ಟ್ವೀಟ್ ಮಾಡಿದವರನ್ನೂ ಬಂಧಿಸಿ; ಇಲ್ಲದಿದ್ರೆ ಮತ್ತೆ ಪೋಸ್ಟರ್ ಅಂಟಿಸುತ್ತೇವೆ, ಹುಷಾರ್:‌ ಸಿದ್ದರಾಮಯ್ಯ ಎಚ್ಚರಿಕೆ

ಸದನದೊಳಗೂ 40% ಕಮಿಷನ್ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದ ಶಿವಕುಮಾರ್, "ಸದ್ಯ ಬಂಧಿಸಿರುವ ನಮ್ಮ ಕಾರ್ಯಕರ್ತರನ್ನು ನೋಡಿ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ. ನಮ್ಮ ವಿರುದ್ಧವೂ ಪ್ರಕರಣ ದಾಖಲಿಸಲು ಹೇಳಿದ್ದೇವೆ. ಸಂಬಂಧ ಇಲ್ಲದವರನ್ನು ಬಂಧಿಸಿ ಕರೆತಂದು ಅವರನ್ನು ನಾಯಕರನ್ನಾಗಿ ಮಾಡುತ್ತಿದ್ದಾರೆ. ಅದನ್ನವರು ಮಾಡಲಿʼ ಎಂದು ವ್ಯಂಗ್ಯವಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್