ಮಳೆಗಾಲ ಅಧಿವೇಶನ | ವಿಧಾನ ಪರಿಷತ್ತಿನಲ್ಲಿ ಗದ್ದಲ ಸೃಷ್ಟಿಸಿದ ‘ಪೇ ಸಿಎಂ’ ಪೋಸ್ಟರ್ ವಿವಾದ: ಸದನ ಮುಂದೂಡಿಕೆ

PayCM
  • ಸದನದಲ್ಲಿ ಕೋಲಾಹಲ ಸೃಷ್ಟಿಸಿರುವ ‘ಪೇ ಸಿಎಂ’ ಪೋಸ್ಟರ್
  • ಗದ್ದಲದ ನಡೆಯುತ್ತಿದ್ದಾಗಲೂ ಮೌನ ವಹಿಸಿದ ಬೊಮ್ಮಾಯಿ 

ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ‘ಪೇ ಸಿಎಂ’ ಪೋಸ್ಟರ್ ವಿವಾದ ವಿಧಾನ ಪರಿಷತ್ತಿನಲ್ಲಿಯೂ ಗದ್ದಲಕ್ಕೆ ಕಾರಣವಾಗಿದೆ. ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಖಂಡಿಸಿ ಕಾಂಗ್ರೆಸ್ ಸದಸ್ಯರು ‘ಪೇ ಸಿಎಂ’ ಪೋಸ್ಟರ್ ಹಿಡಿದು ಸದನದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ತಮ್ಮ ಕಾರ್ಯಕರ್ತರ ಬಂಧನದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಕಾಂಗ್ರೆಸ್‌ನ ಉಳಿದ ಸದಸ್ಯರು ‘ಪೇ ಸಿಎಂ’ ಭಿತ್ತಿಪತ್ರವನ್ನು ವಿಧಾನ ಪರಿಷತ್ ಕಲಾಪದಲ್ಲೂ ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದರು.

ಸದನದಲ್ಲಿ ಗದ್ದಲ ಉಂಟಾಗುತ್ತಿದ್ದಂತೆ ಪೋಸ್ಟರ್ ಹಿಡಿದು ಸಭಾಪತಿ ಪೀಠಕ್ಕೆ ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸಭಾಪತಿ ವಿರುದ್ಧ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಘೋಷಣೆ ಕೂಗಿದರು. "ಮಧ್ಯರಾತ್ರಿ ನಮ್ಮ ಕಾರ್ಯಕರ್ತರನ್ನ ಬಂಧಿಸಿದ್ದಾರೆ, ಕಾರ್ಯಕರ್ತರು ಟೆರೆರಿಸ್ಟ್‌ಗಳಾ..? 40%, 100% ಎಲ್ಲ ವಿಚಾರಗಳು ಚರ್ಚೆಯಾಗಲಿ” ಎಂದು ಹರಿಪ್ರಸಾದ್ ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ಭ್ರೂಣ ಹತ್ಯೆ ನಡೆಸಿ ಆನೆಗಳ ಸಂಖ್ಯೆ ಕಡಿಮೆ ಮಾಡಿ; ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ

ಗದ್ದಲ ನಡೆಯುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪರಿಷತ್ತಿನಲ್ಲಿದ್ದರು. ಬೊಮ್ಮಾಯಿ ಮನವಿಗೂ ಸ್ಪಂದಿಸದೆ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ಇತ್ತ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರೂ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದು ಗದ್ದಲ ಉಂಟಾಯಿತು. ಹೀಗಾಗಿ ಕಲಾಪವನ್ನ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.

ಬೆಳಿಗ್ಗೆ ಪರಿಷತ್ತಿನ ಸದನದ ಕಾರ್ಯವಿಧಾನದಂತೆ ಮೊದಲಿಗೆ ಪ್ರಶ್ನೋತ್ತರ ನಡೆಯಲಿ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು. ಆದರೆ, ಕಾಂಗ್ರೆಸ್ ಸದಸ್ಯರು ಪಟ್ಟು ಬಿಡಲಿಲ್ಲ. ನೋಟಿಸ್ ಕೊಡಿ ಎಂಬ ಸಭಾಪತಿ ಸಲಹೆಯನ್ನೂ ಕೇಳಲಿಲ್ಲ. ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮತ್ತು ಆಡಳಿತ ಪಕ್ಷದ ಸದಸ್ಯರ ಮಧ್ಯೆ ಹೇಡಿಗಳು, ರಣಹೇಡಿಗಳು ಎಂಬ ಪರಸ್ಪರ ಮಾತಿನ ವಿನಿಮಯ ನಡೆಯಿತು. ಗದ್ದಲ ಹೆಚ್ಚಾಗಿದ್ದರಿಂದ ಸದನವನ್ನು 3 ಗಂಟೆಗೆ ಮುಂದೂಡಲಾಯಿತು. 

ನಿಮಗೆ ಏನು ಅನ್ನಿಸ್ತು?
0 ವೋಟ್