
- 'ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಶಾಸಕ ರಾಜುಗೌಡ ಸಂತಸ'
- 'ಶನಿವಾರ ಶ್ರೀಗಳು ಧರಣಿ ಕೈಬಿಡುತ್ತಾರೆ ಎಂದ ಬಿಜೆಪಿ ಶಾಸಕ'
‘ನಮ್ಮ ಪಾಲಿಗೆ ಪ್ರಸನ್ನಾನಂದ ಶ್ರೀ ಸ್ವಾಮೀಜಿಗಳು ಮಹರ್ಷಿ ವಾಲ್ಮೀಕಿ ರೀತಿ; ರಾಮನ ರೂಪದಲ್ಲಿ ಬಸವರಾಜ ಬೊಮ್ಮಾಯಿ ಅಣ್ಣನವರು ಕಾಣಿಸುತ್ತಿದ್ದಾರೆ’ ಎಂದು ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ಶೇ.6ರಷ್ಟು ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡ ನಂತರ ಫ್ರೀಡಂ ಪಾರ್ಕಿನ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, “ರತ್ನಾಕರ ಹೋಗಿ ಮಹರ್ಷಿ ವಾಲ್ಮೀಕಿಯಾದರು, ನಮ್ಮ ಪಾಲಿಗೆ ಇಂದು ಶ್ರೀಗಳು ವಾಲ್ಮೀಕಿ ಅವತಾರದಲ್ಲಿ ಬಂದು ಧರಣಿ ಕೂತು ನ್ಯಾಯ ಕೊಡಿಸಿದ್ದಾರೆ. ನಾನು ಅಥವಾ ಶ್ರೀರಾಮುಲು ಅಣ್ಣ ಮುಖ್ಯಮಂತ್ರಿಯಾಗಿದ್ದರೂ ಈ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಸವರಾಜ ಬೊಮ್ಮಾಯಿ ಅಣ್ಣನಿಂದ ಮಾತ್ರ ಈ ಕೆಲಸ ಸಾಧ್ಯವಾಗಿದೆ. ನಮ್ಮ ಪಾಲಿಗೆ ಸ್ವಾಮೀಜಿ ಮಹರ್ಷಿ ವಾಲ್ಮೀಕಿ ರೀತಿ; ರಾಮನ ರೂಪದಲ್ಲಿ ಬಸವರಾಜ ಬೊಮ್ಮಾಯಿ ಅಣ್ಣನವರು ಕಾಣುತ್ತಿದ್ದಾರೆ” ಎಂದು ಹೊಗಳಿದರು.
“ನಾವು ಇಷ್ಟು ದಿನಗಳ ಕಾಲ ವಾಲ್ಮೀಕಿ ಶ್ರೀಗಳನ್ನು ಕೂರಿಸಬಾರದಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಗುರುಗಳು ಧರಣಿ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ. ನಾಳೆ ಬೆಳಿಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಹೆಚ್ಚಳದ ನಿರ್ಧಾರವಾಗಲಿದೆ. ಬೇರೆ ಯಾವ ಜಾತಿಯ ಮೀಸಲಾತಿಯನ್ನೂ ನಾವು ಕಸಿದುಕೊಂಡಿಲ್ಲ. ನಮಗೆ ಸಿಗಬೇಕಾಗಿರುವುದು ಸಿಕ್ಕಿದೆ” ಎಂದು ವಿವರಿಸಿದರು.
“ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಹೆಚ್ಚಳದ ಆದೇಶವಾದ ನಂತರ ನಾವು ಅಪ್ಪಾವ್ರನ್ನು (ಪ್ರಸನ್ನಾನಂದ ಶ್ರೀ) ಬಂದು ಎಬ್ಬಿಸುತ್ತೇವೆ. ಸಂಪುಟದಲ್ಲಿ ಆದೇಶವಾದ ನಂತರ ಜಾರಿಯಾದಂತೆಯೇ” ಎಂದರು.
“ಮೀಸಲಾತಿ ಜಾರಿ ಮಾಡಬೇಕೆಂಬ ಹಿತಾಸಕ್ತಿ ನಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಬಸವರಾಜ ಬೊಮ್ಮಾಯಿ ಅಣ್ಣನವರಿಗಿದೆ. ವಾಲ್ಮೀಕಿ ಸಮುದಾಯದ ಶಾಸಕರು ಮತ್ತು ಸಚಿವರಿಗಿಂತಲೂ ಹೆಚ್ಚಿನ ಕಾಳಜಿ ಬೊಮ್ಮಾಯಿ ಅವರಿಗಿದೆ. ಏಕೆಂದರೆ, ಅವರು ಕಾಟಾಚಾರಕ್ಕೆ ಮೀಸಲಾತಿ ಕೊಡುತ್ತಿಲ್ಲ; ಶೆಡ್ಯೂಲ್ 9ರ ಮುಖಾಂತರ ಜಾರಿ ಮಾಡುವಂತೆ ಉಗ್ರಪ್ಪ ಮತ್ತು ಸಿದ್ದರಾಮಯ್ಯ ಇಂದಿನ ಸಭೆಯಲ್ಲಿ ಒತ್ತಾಯಿಸಿದ್ದಾರೆ. ನಾಳೆಯೇ ಸಂಪುಟ ಸಭೆಯಲ್ಲಿ ಮಂಡಿಸಿ, ಮುಂದಿನ ಅಧಿವೇಶನದಲ್ಲೂ ಕೂಡ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದ್ದಾರೆ” ಎಂದು ರಾಜುಗೌಡ ಹೇಳಿದರು.
ಈ ಸುದ್ದಿ ಓದಿದ್ದೀರಾ? ಎಸ್ಸಿ/ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ | ಆದೇಶದ ಪ್ರತಿ ಬಂದ ಕೂಡಲೇ ನಿರಶನ ಕೈಬಿಡುವೆ: ವಾಲ್ಮೀಕಿ ಸ್ವಾಮೀಜಿ
“ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳು ಮೀಸಲಾತಿ ಹೆಚ್ಚಳ ಮಾಡಿವೆ. ಸುಪ್ರೀಂ ಕೋರ್ಟ್ ಸೇರಿದಂತೆ ಪರಿಶಿಷ್ಟರ ಮೀಸಲಾತಿಗೆ ಎಲ್ಲಿಯೂ ಹಿನ್ನಡೆ ಆಗಿಲ್ಲ. ಇವತ್ತು ಗುರುಗಳ ಮೇಲೆ ಇರುವ ಪ್ರೀತಿಗೆ, ಅವರು ಪಟ್ಟಂತಹ ಕಷ್ಟ ನೋಡಿ ಬಸವರಾಜ ಬೊಮ್ಮಾಯಿ ಅಣ್ಣನವರು ಮೀಸಲಾತಿ ನೀಡುತ್ತಿದ್ದಾರೆ. ನಾಳೆ ಗುರುಗಳು ಹೋರಾಟ ಕೈಬಿಡುವ ವಿಶ್ವಾಸ ಇದೆ” ಎಂದರು.
“ಈಗಾಗಲೇ ಕೇಂದ್ರ ಸರ್ಕಾರ ನಮಗೆ ಶೇ.7.5 ರಾಜಕೀಯ ಮೀಸಲಾತಿ ನೀಡಿದೆ. ಉಳಿದ ಮೀಸಲಾತಿ ಮಾತ್ರ ರಾಜ್ಯದಲ್ಲಿ ಜಾರಿ ಆಗಬೇಕಿತ್ತು; ಈಗ ಆಗಿದೆ. ಕೆಲವರು ಗೊಂದಲ ಮೂಡಿಸುವ ಹೇಳಿಕೆ ಕೊಡುತ್ತಿದ್ದಾರೆ. ಆದರೆ, ಇದರಲ್ಲಿ ಯಾವುದೇ ಗೊಂದಲ ಇಲ್ಲ” ಎಂದು ಸ್ಪಷ್ಟಪಡಿಸಿದರು.