ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯ ಸರ್ಕಾರದಿಂದ ‘ನಾಗರಿಕ ಸತ್ಕಾರ’

murumu
  • ‘ಮುರ್ಮು ಗೆಲುವು ಪ್ರಜಾಪ್ರಭುತ್ವದ ಗೆಲುವು’ ಎಂದ ಸಿಎಂ ಬೊಮ್ಮಾಯಿ
  • ಕಂಬಾರ, ಪ್ರಕಾಶ್ ಪಡುಕೋಣೆ ಮತ್ತು ಮಂಜಮ್ಮ ಜೋಗತಿಯಿಂದ ಮುರ್ಮುಗೆ ಅಭಿನಂದನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯ ಸರ್ಕಾರದಿಂದ ‘ನಾಗರಿಕ ಸತ್ಕಾರ’ ನೀಡುವ ಮೂಲಕ ಗೌರವಿಸಲಾಯಿತು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುರ್ಮು ಅವರಿಗೆ ಸನ್ಮಾನಿಸಿದರು.

ಆರಂಭಿಕ ಮಾತುಗಳನ್ನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ನಾನು ಚುನಾವಣೆಯಲ್ಲಿ ಆಯ್ಕೆಯಾದ ನಂತರ ಬೆಂಗಳೂರಿಗೆ ಮೊದಲ ಭೇಟಿ ನೀಡುತ್ತೇನೆ ಎಂದು ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆ ಪೂರ್ವವಾಗಿ ಬೆಂಗಳೂರಿಗೆ ಬಂದಾಗ ಹೇಳಿದ್ದರು. ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದ ನಂತರ ಕೆಲಸದ ಒತ್ತಡದಲ್ಲಿ ಅವರು ಬರುವುದಿಲ್ಲವೇನೋ ಎಂದುಕೊಂಡಿದ್ದೆ. ಆದರೆ, ಅವರು ತಮ್ಮ ಮಾತಿನಂತೆ ರಾಜ್ಯಕ್ಕೆ ಬಂದಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ದಸರಾ ಉದ್ಘಾಟನೆಗೆ ಬರುವಂತೆ ಅವರನ್ನು ಬೆಳಿಗ್ಗೆ ಕೇಳಿದ್ದೆ, ಬರುತ್ತೇನೆ ಎಂದು ಸಂಜೆ ವೇಳೆಗೆ ಅನುಮತಿ ನೀಡಿದರು. ಅವರಿಗೆ ರಾಜ್ಯದ ಬಗ್ಗೆ ಪ್ರೀತಿ ಎಷ್ಟಿದೆ ಎಂಬುದನ್ನು ಈ ಘಟನೆ ತೋರುತ್ತದೆ ಎಂದು ಹೇಳಲು ಬಯಸುತ್ತೇನೆ” ಎಂದರು.

“ರಾಷ್ಟ್ರಪತಿಗಳಿಗೆ ಸಮಾಜದ ಎಲ್ಲ ವಿಚಾರಗಳ ಬಗ್ಗೆ ಗೊತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಅನುಭವಿಸುವ ಎಲ್ಲ ಕಷ್ಟಗಳನ್ನು ಅನುಭವಿಸಿದ್ದಾರೆ. ಶಾಲೆ ಶಿಕ್ಷಕರಾಗಿ, ಮುನ್ಸಿಪಲ್ ಕೌನ್ಸಿಲರ್ ಆಗಿ, ಶಾಸಕರಾಗಿ ಮತ್ತು ಒಡಿಶಾದಲ್ಲಿ ಮಂತ್ರಿಯಾಗಿ, ಜಾರ್ಖಂಡ್‌ನಲ್ಲಿ ಐದು ವರ್ಷ ರಾಜ್ಯಪಾಲರಾಗಿ ಅಲ್ಲಿನ ಬುಡಕಟ್ಟು ಜನರಿಗೆ, ಮಹಿಳೆಯರಿಗೆ ಹತ್ತು ಹಲವು ಕಾರ್ಯಗಳನ್ನು ಮಾಡಿದ್ದಾರೆ. ಆ ಐದು ವರ್ಷದ ಅನುಭವ ಏನೇ ಇದ್ದರೂ, ತಮ್ಮ ಸರಳತೆಯನ್ನು ಎಂದೂ ಕೂಡ ಬಿಟ್ಟುಕೊಟ್ಟಿಲ್ಲ. ರಾಜ್ಯಪಾಲರ ಅವಧಿ ಮುಗಿದ ಕೂಡಲೇ ತಮ್ಮ ಹಳೆಯ ಬೋಧನೆ ಕೆಲಸಕ್ಕೆ ತೆರಳಿದರು. ಎಷ್ಟು ಜನ ಈ ರೀತಿ ಮಾಡಲು ಸಾಧ್ಯ ಎಂದು” ಮುರ್ಮು ಅವರ ಬಗ್ಗೆ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

“ಪ್ರಧಾನಿ ನರೇಂದ್ರ ಮೋದಿ ಅವರು ನೀವು ರಾಷ್ಟ್ರಪತಿ ಅಭ್ಯರ್ಥಿ ಎಂದು ಕರೆ ಮಾಡಿ ಹೇಳಿದಾಗ, ಮುರ್ಮು ಅವರು ದೇವಸ್ಥಾನ ಸ್ವಚ್ಛಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಬುಡಕಟ್ಟು ಮಹಿಳೆ ರಾಷ್ಟ್ರಪತಿಯಾಗಿರುವುದು ನಮ್ಮ ಪ್ರಜಾಪ್ರಭುತ್ವದ ಗೆಲುವು ಎಂದು ನಾನು ಭಾವಿಸುತ್ತೇನೆ. ಅವರು ಆ ಹುದ್ದೆಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ” ಎಂದು ಹೇಳಿದರು.

“ರಾಷ್ಟ್ರಪತಿಯಾಗಿ ಆಯ್ಕೆಯಾಗುವುದಕ್ಕಿಂತ ಮೊದಲಿನಿಂದಲೂ ಅವರನ್ನು ನೋಡುತ್ತಿದ್ದೇನೆ. ಅವರ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ರಾಷ್ಟ್ರಪತಿಯಾದ ನಂತರವೂ ಮೊದಲಿನಂತೆಯೇ ಇದ್ದಾರೆ. ಇಂಥ ರಾಷ್ಟ್ರಪತಿ ನಮಗೆ ಸಿಕ್ಕಿರುವುದು ನಮ್ಮ ದೇಶದ ನಾಗರಿಕರ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತದೆ” ಎಂದು ಬೊಮ್ಮಾಯಿ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಎಚ್‌ಎಎಲ್ | ‘ಕ್ರಯೋಜನಿಕ್ ಇಂಜಿನ್ʼ ಉತ್ಪಾದನಾ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

“ಭಾರತ ಸರ್ವ ಶ್ರೇಷ್ಠ ಮತ್ತು ವೈವಿಧ್ಯತೆಯಿಂದ ಕೂಡಿದ ದೇಶ. ನಿರಂತರವಾಗಿ ಆವಿಷ್ಕಾರಗಳು ನಡೆಯುವ ದೇಶ. ಒಂದು ಕಾಲದಲ್ಲಿ ಪವಾಡಗಳು ಈ ದೇಶದಲ್ಲಿ ನಡೆಯುತ್ತಿತ್ತು. ಪ್ರಸ್ತುತ ದೇಶದಲ್ಲಿ ವಿಜ್ಞಾನದ ಮೂಲಕ ಹತ್ತು ಹಲವು ಆವಿಷ್ಕಾರಗಳ ಮೂಲಕ ಹೊಸ ಪವಾಡ ಮಾಡುತ್ತಿದ್ದೇವೆ. ಸ್ವಂತ ‘ಕ್ರಯೋಜನಿಕ್ ಇಂಜಿನ್’ ಕಾರ್ಖಾನೆಯನ್ನು ಇಂದು ರಾಷ್ಟ್ರಪತಿಗಳು ಉದ್ಘಾಟಿಸಿದ್ದಾರೆ. ಎಷ್ಟೇ ಆವಿಷ್ಕಾರವಿದ್ದರೂ ಮಾನವೀಯತೆ ಇರಬೇಕು. ಅಂಥ ರಾಷ್ಟ್ರಪತಿಗಳು ನಮಗೆ ಸಿಕ್ಕಿರುವುದು ನಮ್ಮ ಭಾಗ್ಯ” ಎಂದರು.

ರಾಜ್ಯದ ಸಾಧಕರಿಂದ ಸನ್ಮಾನ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ, ಹಿರಿಯ ಕ್ರೀಡಾಪಟು ಪ್ರಕಾಶ್ ಪಡುಕೋಣೆ, ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಮತ್ತು ಉದ್ಯಮಿ ಕಿರಣ್ ಮಜುಂದರ್ ಶಾ ರಾಷ್ಟ್ರಪತಿಗಳನ್ನು ಇದೇ ವೇಳೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್