ಮುಂದಿನ ಐದು ವರ್ಷಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ದರ ಕಡಿಮೆಯಾಗಲಿದೆ : ಸಿಎಂ ಬೊಮ್ಮಾಯಿ

CM Basavaraj Bommai
  • ಏಟ್ರಿಯಾ ವಿಶ್ವವಿದ್ಯಾಲಯ ಮತ್ತು ಗ್ರೀನ್ ಫ್ಯೂಚರ್ ಸಮ್ಮಿಟ್ ಉದ್ಘಾಟನೆ 
  • ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2 ಲಕ್ಷ ಕೋಟಿ ಬಂಡವಾಳ ಹೂಡಿಕೆ

“ಮುಂದಿನ ಐದು ವರ್ಷಗಳಲ್ಲಿ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗಲಿದ್ದು, ದರವೂ ಕಡಿಮೆಯಾಗಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಏಟ್ರಿಯಾ ವಿಶ್ವವಿದ್ಯಾಲಯ ಮತ್ತು ಗ್ರೀನ್ ಫ್ಯೂಚರ್ ಸಮ್ಮಿಟ್ ಕಾರ್ಯಕ್ರಮ ಉದ್ಘಾಟಿಸಿ ಉದ್ಯಮಿಗಳೊಂದಿಗೆ ಅವರು ಸಂವಾದ ನಡೆಸಿದರು.

“ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ₹2 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಪರ್ಯಾಯವಾಗಿ ನವೀಕರಣ ಇಂಧನ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿದೆ. ಪ್ರಮುಖವಾಗಿ ಹೈಡ್ರೋಜನ್ ಉದ್ಯಮದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಲಿದ್ದು, ಕಡಿಮೆ ದರದಲ್ಲಿ ಇಂಧನ ದೊರೆಯುವಂತೆ ಮಾಡಲು ಸಾಕಷ್ಟು ಸಂಶೋಧನೆ ನಡೆಯುತ್ತಿದೆ” ಎಂದರು.

“ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಖಾಸಗಿಯವರ ಪಾತ್ರವೂ ದೊಡ್ಡದಿದೆ. ಶಿಕ್ಷಣ ಸಂಸ್ಥೆಗಳು ಸರ್ಕಾರದೊಂದಿಗೆ ಸಹಯೋಗ ಮಾಡಿಕೊಂಡು ಕಾರ್ಯ ನಿರ್ವಹಿಸಬಹುದು” ಎಂದು ತಿಳಿಸಿದರು. 

ಈ ಸುದ್ದಿ ಓದಿದ್ದೀರಾ? ಚಿಲುಮೆ ವೋಟರ್‌ ಗೇಟ್| ಮುಕ್ತ ತನಿಖೆಗೆ ಆದೇಶ: ಸಿಎಂ ಬಸವರಾಜ ಬೊಮ್ಮಾಯಿ

“ಭಾರತದಲ್ಲಿ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಇಲ್ಲಿ ಉದ್ಯೋಗ ಸೃಷ್ಟಿಸುವುದು ದೊಡ್ಡ ಜವಾಬ್ದಾರಿ. ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನ ಹೊಂದಾಣಿಕೆ ಮಾಡಿಕೊಂಡು ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು” ಎಂದರು. 

ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಏಟ್ರಿಯಾ ಗುಂಪಿನ ಅಧ್ಯಕ್ಷ  ಸಿ ಎಸ್ ಸುಂದರರಾಜು ಹಾಗೂ ಇತರರಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app