ಪಿಎಸ್ಐ ನೇಮಕಾತಿ ಹಗರಣ | ಅಮೃತ್ ಪೌಲ್ ಮಂಪರು ಪರೀಕ್ಷೆ ನಡೆಸಿದರೆ ರಾಜಕಾರಣಿಗಳ ಪಾತ್ರ ಹೊರಬರುತ್ತದೆ: ಸಿದ್ದರಾಮಯ್ಯ

Siddaramaiah
  • ಸರ್ಕಾರಕ್ಕೆ ಮಾನ ಮಾರ್ಯಾದೆ ಇದ್ದರೆ ಶೇ.40ರ ತನಿಖೆ ನಡೆಸಲಿ
  • ಕಟೀಲ್‌ಗೆ ಕಾನೂನು ಗೊತ್ತಿಲ್ಲ; ಅವನೊಬ್ಬ ಆರ್ ಎಸ್ ಎಸ್ ಗಿರಾಕಿ

'ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಪರೀಕ್ಷೆ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಮಗ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅದು ಯಡಿಯೂರಪ್ಪ ಮಗನಾ, ಸಿದ್ದರಾಮಯ್ಯ ಮಗನಾ ಅಥವಾ ದೇವೇಗೌಡರ ಮಗನಾ ಎಂಬುದು ಜನರಿಗೆ ಗೊತ್ತಾಗಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಜನರಿಗೆ ಸತ್ಯ ಗೊತ್ತಾಗಬೇಕು. ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥರಾದ ಅಮೃತ್ ಪೌಲ್ ಬಂಧನವಾಗಿದೆ. ಈ ಹಗರಣದಲ್ಲಿ ಇನ್ನೂ ಯಾರ‍್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಯಬೇಕಾದರೆ ಅಮೃತ್ ಪೌಲ್ ಮಂಪರು ಪರೀಕ್ಷೆ ನಡೆಸಬೇಕು. 364ರ ಅಡಿಯಲ್ಲಿ ಅವರ ಹೇಳಿಕೆ ದಾಖಲಿಸಬೇಕು. ಆಗ ಮಾತ್ರ‌ ಹಗರಣದಲ್ಲಿ ರಾಜಕಾರಣಿಗಳ ಪಾತ್ರ ಹೊರಬರುತ್ತೆ” ಎಂದು ಸಿದ್ದರಾಮಯ್ಯ ಹೇಳಿದರು.

"ವಿಧಾನ ಮಂಡಲ ಕಲಾಪವನ್ನು ಎರಡು ವಾರ ಮಾತ್ರ ಕರೆದಿದ್ದಾರೆ. ವಿಧಾನಸಭೆಯಲ್ಲಿ ಪ್ರವಾಹ ನಿಲುವಳಿ ‌ಕೊಟ್ಟಿದ್ದೆ, ಅದರ ಬಗ್ಗೆ ಸುದೀರ್ಘವಾದ ಚರ್ಚೆ ಆಗಿದೆ. ಆದರೆ, ಸರ್ಕಾರ ನಮ್ಮ ಪ್ರಶ್ನೆಗಳಿಗೆ ಸಮಂಜಸ ಉತ್ತರ ಕೊಡಲಿಲ್ಲ. ಸದನದ ಬಾವಿಗಿಳಿದು‌ ಪ್ರತಿಭಟನೆಯನ್ನೂ ನಡೆಸಿದ್ದೇವೆ. ಪಿಎಸ್ಐ ನೇಮಕಾತಿ ಹಗರಣದ ನಿಳುವಳಿ ಕೊಟ್ಟಿದ್ವಿ, ಇದು ಕೂಡ ಚರ್ಚೆಯಾಯ್ತು. ಅಕ್ರಮ ನಡೆದೇ ಇಲ್ಲ ಎನ್ನುತ್ತಿದ್ದವರು ಒತ್ತಡ ಬಂದ ಬಳಿಕ ಸಿಐಡಿ ತನಿಖೆಗೆ ಕೊಟ್ರು” ಎಂದರು.

“ಬೊಮ್ಮಾಯಿ ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲೇ ಎಡಿಜಿಪಿ ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಪೌಲ್ ಅವರೇ ಅಕ್ರಮ ಎಸಗಲು 'ಸ್ಟ್ರಾಂಗ್ ರೂಮ್' ಬೀಗದ ಕೈ ಕೊಟ್ಟು ಖಾಲಿ‌ ಉತ್ತರ ಪತ್ರಿಕೆಯಲ್ಲಿ ಉತ್ತರ ಬರೆಸಿದ್ದಾರೆ. 545 ಜನರು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ” ಎಂದು ಆರೋಪ ಮಾಡಿದರು.

“ಅಮೃತ್ ಪೌಲ್ ಮಂಪರು ಪರೀಕ್ಷೆ ಆಗಬೇಕು. 364 ಅಡಿಯಲ್ಲಿ ಹೇಳಿಕೆ ದಾಖಲಿಸಿದಾಗ ಮಾತ್ರ ಹಗರಣದಲ್ಲಿ ರಾಜಕಾರಣಿಗಳ ಪಾತ್ರ ಹೊರ ಬರುತ್ತೆ. ಈವರೆಗೆ ಕೇವಲ ಅಧಿಕಾರಿಗಳ ಮೇಲೆ ಮಾತ್ರ ಕ್ರಮ ಆಗಿದೆ. ಬಿಜೆಪಿ ಶಾಸಕ ಬಸವರಾಜ ದಡೇಸುಗೂರ್ ಆಡಿಯೋ ಹೊರಬಂದಿದ್ದರೂ ತನಿಖೆಯಾಗಿಲ್ಲ” ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಈ ಸುದ್ದಿ ಓದಿದ್ದೀರಾ?: ಬಿಎಂಎಸ್ ಟ್ರಸ್ಟ್ ವಿವಾದ | ಅಶ್ವತ್ಥ ನಾರಾಯಣ ರಾಜೀನಾಮೆಗೆ ಎಚ್‌ಡಿಕೆ ಪಟ್ಟು; ಆಸ್ತಿ ಮುಟ್ಟುಗೋಲಿಗೆ ಆಗ್ರಹ 

ಸರ್ಕಾರಕ್ಕೆ ಮಾನ ಮಾರ್ಯಾದೆ ಇಲ್ಲ

“ಶೇ. 40 ಗುತ್ತಿಗೆ ಕಮಿಷನ್ ಬಗ್ಗೆ ರಾಜ್ಯದ ಗುತ್ತಿಗೆದಾರರ ಸಂಘ ಸರ್ಕಾರದ ಮೇಲೆ ಆರೋಪ ಮಾಡಿದೆ. ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪಧಾನ ಮಂತ್ರಿ ಮೋದಿಗೆ ಪತ್ರ ಬರೆದಿದ್ದರು. ರಾಜ್ಯಪಾಲರು ಮತ್ತು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೂಡ ಪತ್ರ ಬರೆದಿದ್ದರು” ಎಂದರು.

“ಗುತ್ತಿಗೆದಾರರು ಜಿಎಸ್‌ಟಿ ಕಟ್ಟಬೇಕು. ಉಳಿದ ಶೇ.20ರಲ್ಲಿ ಕಾಮಗಾರಿ ಆಗಬೇಕು. ಇದರ ಬಗ್ಗೆ ಮಾತನಾಡಿದ್ರೆ ಸರ್ಕಾರ ದಾಖಲೆ ಕೇಳುತ್ತೆ. ನ್ಯಾಯಾಂಗ ತನಿಖೆಯಾಗಲಿ ಎಂದು ಕೆಂಪಣ್ಣ ಒತ್ತಾಯಿಸಿದ್ದಾರೆ. ಕಮಿಷನ್ ಬಗ್ಗೆ ದಾಖಲೆ ಕೊಡುತ್ತೇವೆ, ನಮ್ಮ ತಪ್ಪು ಇದ್ರೆ ನಮಗೂ ಶಿಕ್ಷೆ ಆಗಲಿ ಎಂದು ಕೆಂಪಣ್ಣ ಹೇಳಿದ್ದಾರೆ” ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

“ಸರ್ಕಾರ ಕುಂಟು‌ ನೆಪ ಹೇಳುತ್ತಿದೆ. ಅರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಲೋಕೋಪಯೋಗಿ, ಗ್ರಾಮೀಣಾಭಿವೃದ್ದಿ, ಇಂಧನ ಇಲಾಖೆಗಳ ಮೇಲೆ ಆರೋಪ ಮಾಡಿದ್ದಾರೆ. ಸರ್ಕಾರಕ್ಕೆ ಮಾನ ಮಾರ್ಯಾದೆ ಇಲ್ಲ. ದಾಖಲೆ ಮಾತ್ರ ಕೇಳುತ್ತಿದ್ದಾರೆ, ತನಿಖೆಗೆ ಕೊಡುತ್ತಿಲ್ಲ. ಸದನದಲ್ಲಿ ಚರ್ಚೆ ನಡೆಸಲು ಅವಕಾಶವೇ ಕೊಡಲಿಲ್ಲ. ಮೂರು ದಿನದಿಂದ ಸುಮ್ಮನೆ ಕಾಲ ದೂಡಿದರು” ಎಂದರು.

“ಸರ್ಕಾರಕ್ಕೆ ಮರ್ಯಾದೆ ಇದ್ದಿದ್ರೆ ಚರ್ಚೆಗೆ ಬರಬೇಕಿತ್ತು. ಸೋಮವಾರ ಮತ್ತೊಂದು ದಿನ ಸದನ ನಡೆಸಿ ಅಂದೆ. ಆದರೆ, ಸರ್ಕಾರ ತಯಾರಿಲ್ಲ” ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ನಾನು ಜೈಲಿಗೆ ಹೋಗಬೇಕು ಅಂದರೆ ತನಿಖೆ ಆಗಬೇಕು ತಾನೇ? ಮೊದಲು ನನ್ನ ವಿರುದ್ಧ ಅವರು ಕೋರ್ಟ್‌ಗೆ ದೂರು ಕೊಡಲಿ. ಕಟೀಲ್‌ಗೆ ಪಾಪ ಕಾನೂನು ಗೊತ್ತಿಲ್ಲ. ಅವನೊಬ್ಬ ಆರ್ ಎಸ್ ಎಸ್ ಗಿರಾಕಿ. ಅಲ್ಲಿ ಕೊಟ್ಟ ಸುಳ್ಳು ತಗೊಂಡು ಬಂದು ಹೇಳಿದ್ದಾನೆ. ಅವನಿಗೆ ಯಾವ ಕಾನೂನೂ ಗೊತ್ತಿಲ್ಲ. ನಮ್ಮ ಕೈ ಬಾಯಿ ಶುದ್ಧ ಇರೋದ್ರಿಂದ 20 ಪ್ರಕರಣಗಳನ್ನು ಸಿಬಿಐಗೆ‌ ಕೊಟ್ಟಿದ್ದೇವೆ” ಎಂದು ಕಟೀಲ್‌ಗೆ ತಿರುಗೇಟು ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್