
- ಹಣ ಕೊಟ್ಟ ಪರಸಪ್ಪನಿಗೆ ಧಮಿಕಿ ಹಾಕಿದ ಶಾಸಕ ದಢೇಸಗೂರ
- ತನಿಖೆ ನಡೆಸುತ್ತೇವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸಗೂರ ವ್ಯಕ್ತಿಯೊಬ್ಬರ ಪುತ್ರನಿಗೆ ಪಿಎಸ್ಐ ಹುದ್ದೆ ಕೊಡಿಸುವುದಾಗಿ ಹೇಳಿ ₹15 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪದ ಮತ್ತೊಂದು ಮೊಬೈಲ್ ಸಂಭಾಷಣೆಯ ಆಡಿಯೋ ಮಂಗಳವಾರ ವೈರಲ್ ಆಗಿದೆ.
ಪರಸಪ್ಪ ಎಂಬುವವರಿಗೆ ಹಣ ವಾಪಸ್ ವಾಪಸ್ ಕೊಡುವ ಸಂಬಂಧ ನಡೆದ ಮಾತುಕತೆಗಳ ಆಡಿಯೋಗಳು ಮೂರು ದಿನಗಳ ಹಿಂದೆ ವೈರಲ್ ಆಗಿದ್ದವು. ಆದರೆ, ಆ ಆಡಿಯೋ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶಾಸಕ ದಢೇಸಗೂರ, “ನಾನು ಕೇವಲ ಮಧ್ಯಪ್ರವೇಶ ಮಾತ್ರ ಮಾಡಿದ್ದೇನೆ, ಹಣ ಪಡೆದಿಲ್ಲ” ಎಂದು ಸ್ಪಷ್ಟನೆ ನೀಡಿದ್ದರು.
ಮೂರು ದಿನಗಳ ಹಿಂದೆ ವೈರಲ್ ಆಗಿದ್ದ ಆಡಿಯೋಗಳ ವಿವಾದ ಬಿಸಿಯಾಗಿರುವಾಗಲೇ ಮತ್ತೊಂದು ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಪರಸಪ್ಪ ಎಂಬುವವರಿಗೆ ಶಾಸಕ ದಢೇಸಗೂರು ಧಮ್ಕಿ ಹಾಕಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಪರಸಪ್ಪ ಅವರು ತಮ್ಮ ಪುತ್ರನ ನೇಮಕಾತಿ ಸಂಬಂಧ ನೀಡಿದ್ದ ₹15 ಲಕ್ಷ ಹಣ ವಾಪಸ್ ಕೇಳಿದ್ದರು. ‘ಸರ್ಕಾರಕ್ಕೆ ಕೊಟ್ಟಿದ್ದೇನೆ, ವಾಪಸ್ ಕೊಡಿಸುತ್ತೇನೆ” ಎಂದು ಶಾಸಕರು ಹೇಳಿದ್ದರು. ಆಡಿಯೋದಲ್ಲಿರುವ ಧ್ವನಿ ಕೂಡ ನನ್ನದೇ ಎಂದು ದಢೇಸಗೂರ ಒಪ್ಪಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ?: ಪಿಎಸ್ಐ ನೇಮಕಾತಿ ಅಕ್ರಮ | ಹಣ ಪಡೆದ ಬಗ್ಗೆ ಶಾಸಕರು ಮಾತಾಡಲು ನಿರಾಕರಿಸುತ್ತಿರುವುದೇಕೆ?: ಕಾಂಗ್ರೆಸ್ ಪ್ರಶ್ನೆ
ವೈರಲ್ ಆಡಿಯೋದಲ್ಲಿ ಏನಿದೆ?
ಶಾಸಕ: ಏನಪ್ಪ ಪ್ರೆಸ್ಮೀಟ್ ಮಾಡ್ತೀನಿ ಅಂದೆಯಂತಲ್ಲ?
ಪರಸಪ್ಪ: ಪ್ರೆಸ್ಮೀಟ್ ಅಂತ ನಾನು ಹೇಳಿಲ್ಲ ಸರ್. ದೊಡ್ಡವರ ಹತ್ತಿರ ಹೋಗ್ತೀನಿ ಎಂದಿದ್ದೇನೆ ಅಷ್ಟೇ.
ಶಾಸಕ: ಯಾರಪ್ಪ ದೊಡ್ಡವರು?
ಪರಸಪ್ಪ: ದೊಡ್ಡನಗೌಡ್ರ, ಸಂಸದರ ಹತ್ರ ಹೋಗ್ತೀನಿ.
ಶಾಸಕ: ಹೋಗಬೇಕಾಗಿತ್ತು.
ಪರಸಪ್ಪ: ನನಗೆ ಕಷ್ಟ ಐತಿ. ಹೋಗಿ ಅಂದ್ರ ಹೋಗ್ತಿನಿ ಸರ್.
ಶಾಸಕ: ಏ ಬೇಕೂಪ್, ಯಾವಾನ್ ಜೊತೆ ಮಾತಾಡ್ತೀಯಾ? ನಾನೇನ್ ಹಣ ತೆಗೆದುಕೊಂಡು ಬಾ ಎಂದು ನಿನಗೆ ಹೇಳಿದ್ದೆನಾ. ಯಾರ ಮರ್ಯಾದೆ ಕಳೆಯಬೇಕು ಎಂದು ಮಾಡಿದ್ದೀಯಾ? ನಿನ್ನ ಒದಿತೀನಿ ನೋಡಲೇ. ಪ್ರೆಸ್ಮೀಟ್ ಮಾಡಿ ದೊಡ್ಡತನ ತೋರಿಸಬೇಕು ಅಂದುಕೊಂಡಿದ್ದೀಯಾ?
ಪರಸಪ್ಪ: ಸರ್, ನನಗೂ ರಾಜಕಾರಣ ಗೊತ್ತಿದೆ. ಎರಡು ವರ್ಷ ಹಣಕ್ಕಾಗಿ ನಿಮ್ಮ ಹತ್ತಿರ ಅಲೆದಾಡಿದ್ದೇನೆ. ಕೈ ಕಾಲು ಬಿದ್ದಿದ್ದೇನೆ.
ಶಾಸಕ: ಮಗನೇ ನಿನಗೆ ಓದಿತೀನಿ ನೋಡು. ಪ್ರೆಸ್ಮೀಟ್ ಮಾಡ್ತಿಯಾ?
ಪರಸಪ್ಪ: ನನಗೆ ಹೊಡಿತೀರಾ? ಹೊಡಿರೀ ನೋಡೊಣ. ನನಗೆ ಕಷ್ಟ ಇದೆ, ಕಾಲು ಬಿದ್ದು ಹಣ ವಾಪಸ್ ಕೊಡಿ ಅಂತ ಕೇಳಿದೀನಿ. ನಾನೂ ಪೊಲೀಸ್ ಇಲಾಖೆಯಲ್ಲಿ 30 ವರ್ಷ ಕೆಲಸ ಮಾಡಿ ಬಂದಿದ್ದೇನೆ. ನನಗೇ ಅವಾಚ್ಯ ಪದಗಳಿಂದ ಬೈಯ್ದರೆ ನಾನೇಕೆ ಕೇಳಲಿ. ದೊಡ್ಡನಗೌಡ್ರ ಅವರಿಂದ ಹೇಳಿಸಿದ್ದೇನೆ ಅಷ್ಟೇ.
ಶಾಸಕ: ನನ್ನ ಏನ್ ಕೇಳ್ತಿಯಾ. ನೀನು ಕೊಡೊ ಹಣದಿಂದ ನಾನು ಬದುಕುತ್ತೇನೆ ಅಂದುಕೊಂಡಿದ್ದಿಯಾ.
ಪರಸಪ್ಪ: ನನ್ನನ್ನು ಕರೆಯಿಸಿ ಹೊಡೆಯಬೇಕು ಎಂದು ಮಾಡಿದ್ದೀರಿ. ಹೊಡೆಯುವುದಾದರೆ ಹೊಡೆಯಿರಿ.
ಶಾಸಕ: ನಿನ್ನ ಹಣ ನಾನು ತಿಂದಿದ್ದೇನೆ ಅಂದುಕೊಂಡೆಯಾ? ಯಾರ ಹತ್ತಿರ ಬೇಕಾದರೂ ಹೋಗು. ಪ್ರೆಸ್ಮೀಟ್ ಮಾಡ್ತಿಯಾ, ಮಾಡು ಹೋಗು. ಒಂದು ಪೋಸ್ಟ್ ಕೇಳಿದಿಯಾ; ಹಣ ಬೇರೆಯವರ ಬಳಿಯಿದ್ದು ಬರಬೇಕಿದೆ. ಶಾಸಕನಾಗಿ ನೂರು ಜನರ ನೂರು ಕೆಲಸಗಳನ್ನು ಒಪ್ಪಿಕೊಂಡಿರುತ್ತೇನೆ. ಸಮಸ್ಯೆ ಇದೆ, ಹಣ ವಾಪಸ್ ಕೊಡಿ ಎಂದು ಕೇಳಿದರೆ ಒಂದೆರೆಡು ದಿನಗಳಲ್ಲಿ ಕೊಡುತ್ತಿದ್ದೆ.
ತನಿಖೆ ನಡೆಸಲಾಗುವುದು: ಸಿಎಂ ಬೊಮ್ಮಾಯಿ
ದಢೇಸಗೂರ ಆಡಿಯೋ ವೈರಲ್ ಆಗಿರುವ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ “ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ನ್ಯಾಯಾಲಯಕ್ಕೆ ಆರೋಪಪಟ್ಟಿ ಕೂಡ ಸಲ್ಲಿಸಲಾಗಿದೆ. ಹೊಸ ಬೆಳವಣಿಗೆ ಏನೇ ಆದರೂ ತನಿಖೆ ನಡೆಸಲಾಗುವುದು” ಎಂದು ಹೇಳಿದ್ದಾರೆ.