
- ಮನೆ, ಬೆಳೆ ಹಾನಿಗೆ ತುರ್ತು ಪರಿಹಾರ ಘೋಷಣೆ
- ಹೆಚ್ಚಿನ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ: ಆರ್ ಅಶೋಕ್
"ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಘಟಿಸಿವೆ. ರಾಜ್ಯಕ್ಕೆ ಎನ್ಡಿಆರ್ಎಫ್ ಅಡಿ 1022.05 ಕೋಟಿ ಹಣ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಹಾರದ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಮನವಿ ಸಲ್ಲಿಸಲಾಗುವುದು" ಎಂದು ಕಂದಾಯ ಸಚಿವ ಆರ್ ಆಶೋಕ್ ಹೇಳಿದ್ದಾರೆ.
ಮಳೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್ ಅಶೋಕ್, "ಕಳೆದ 24 ಗಂಟೆಗಳಲ್ಲಿ 830 ಮಿ.ಮೀ ಮಳೆಯಾಗಿದೆ. ರಾಜ್ಯದಲ್ಲಿ 27 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ರಾಮನಗರ, ಚಾಮರಾಜನಗರ, ಮಂಡ್ಯದಲ್ಲಿ 9 ಮಿ.ಮೀ ಮಳೆಯಾಗಿದೆ" ಎಂದರು.
"ಮಳೆಯಿಂದಾಗಿ ರಾಮನಗರದಲ್ಲಿ ಇಬ್ಬರು, ಬಳ್ಳಾರಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 9556 ಜನರನ್ನ ಸ್ಥಳಾಂತರ ಮಾಡಲಾಗಿದೆ. ಮಳೆಯಿಂದಾಗಿ 5.80 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ರಾಜ್ಯದಲ್ಲಿ 499 ಕೆರೆಕೋಡಿ ಒಡೆದು ಹೋಗಿವೆ" ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? : ಒಂದು ನಿಮಿಷದ ಓದು: ಪ್ರವಾಹ ಪೀಡಿತ ರಾಮನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಬೊಮ್ಮಾಯಿ
"ಮಳೆ ಹಾನಿ ಕುರಿತ ವರದಿ ಸಿದ್ಧವಾಗುತ್ತಿದೆ. ಅದನ್ನು ಪರಿಶೀಲಿಸಿ ಕೇಂದ್ರಕ್ಕೆ ಹೆಚ್ಚಿನ ಅನುದಾನ ಕೋರಿ ಮನವಿ ಸಲ್ಲಿಸಲಾಗುತ್ತದೆ" ಎಂದು ಅಶೋಕ್ ಹೇಳಿದರು.
"ರಾಮನಗರ, ಚನ್ನಪಟ್ಟಣ ಸೇರಿದಂತೆ ಮಳೆಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವೆಡೆ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ತಕ್ಷಣಕ್ಕೆ ಮನೆ ಹಾನಿ ಹಾಗೂ ಬೆಳೆಹಾನಿಗೆ ತುರ್ತು ಪರಿಹಾರ ನೀಡಲಾಗುತ್ತಿದೆ" ಎಂದು ಕಂದಾಯ ಸಚಿವರು ತಿಳಿಸಿದರು.