ಇಂದಿನಿಂದ ಮಳೆಗಾಲದ ಅಧಿವೇಶನ; ಸರ್ಕಾರ ಹಣಿಯಲು ಸಿದ್ಧವಾದ ವಿಪಕ್ಷ

  • ಜನರ ಸಮಸ್ಯೆಗಳಿಗೆ ಈ ಬಾರಿಯಾದರೂ ಧ್ವನಿಯಾಗುವುದೇ ಸದನ
  • ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧವಾದ ವಿಪಕ್ಷಗಳು

ಸೆಪ್ಟೆಂಬರ್‌ 12ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಕಲಾಪ ಸಮಾವೇಶವಾಗಲಿದೆ. ನಂತರ ಸರ್ಕಾರಿ ಕಲಾಪ ಆರಂಭವಾಗಲಿದ್ದು, ಅಗಲಿದ ಗಣ್ಯರಿಗೆ ಸಂತಾಪ ಸೂಚನೆಯಾಗಲಿದೆ.

ನಾಳೆಯಿಂದ (ಸೆ.12) ಆರಂಭವಾಗಲಿರುವ ಕಲಾಪದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್, ಆಡಳಿತ ಪಕ್ಷ ಬಿಜೆಪಿಯನ್ನು ತರಾಟೆಗೆತ್ತಿಕೊಳ್ಳಲು ತಯಾರು ನಡೆಸಿದೆ.

40% ಕಮಿಷನ್ ಆರೋಪ, ಪಿಎಸ್‌ಐ ಹಗರಣ, ಬೆಂಗಳೂರು ಮಳೆ ಹಾನಿ, ರಾಜ್ಯದಲ್ಲಿನ ಪ್ರವಾಹ ಸೇರಿದಂತೆ ಹಲವು ವಿಚಾರಗಳನ್ನ ಚರ್ಚೆಗೆ ತರುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಬೊಟ್ಟು ಮಾಡಿ ತೋರಿಸಲು ಸಕಲ ಸಿದ್ಧತೆ ಮಾಡಿಕೊಂಡಿವೆ.

ಬೆಂಗಳೂರು ಪ್ರವಾಹ : ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಾಖಲಾದ ಮಳೆ ಹಾನಿ ಮತ್ತು ಪ್ರವಾಹದ ವಿಚಾರಗಳನ್ನು ನಿರ್ವಹಿಸುವಲ್ಲಿ ಎಡವಿರುವ ರಾಜ್ಯ ಸರ್ಕಾರದ ಆಡಳಿತ ಲೋಪವನ್ನು ಎತ್ತಿಹಿಡಿಯಲು ಕಾಂಗ್ರೆಸ್‌ ನಿರ್ಧರಿಸಿದೆ.

ಪಿಎಸ್‌ಐ ಹಗರಣ : ಮಾರ್ಚಿನಲ್ಲಿ ನಡೆದ ಬಜೆಟ್‌ ಅಧಿವೇಶನದ ವೇಳೆ ಪಿಎಸ್‌ ಐ ನೇಮಕಾತಿ ವಿಚಾರದಲ್ಲಿ ಸರ್ಕಾರ ಅಕ್ರಮ ಎಸಗಿದ್ದುದರ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಿತ್ತು. ಇದು ಸದನದೊಳಗೆ ಭಾರೀ ಸದ್ದು ಮಾಡಿತ್ತು. ಆದರೆ ಆ ವೇಳೆ ಅದನ್ನು ಬಿಜೆಪಿ ಸರ್ಕಾರ ನಿರಾಕರಿಸಿತ್ತು. ಅಧಿವೇಶನದ ಬಳಿಕ ಇದೇ ವಿಚಾರದಲ್ಲಿ ನಡೆದ ಬೆಳವಣಿಗಗಳು ರಾಜ್ಯ ಸರ್ಕಾರಕ್ಕೇ ಹಗರಣದ ಉರುಳು ತೊಡಿಸಿತ್ತು. ಇದೇ ವಿಚಾರವನ್ನಿಟ್ಟುಕೊಂಡಿರುವ ಕಾಂಗ್ರೆಸ್, ಈ ಬಾರಿಯೂ ಸದನದಲ್ಲಿ ಸರ್ಕಾರವನ್ನು ತರಾಟೆಗೆತ್ತಿಕೊಳ್ಳಲಿದೆ.

ಹಿಂದೂ ಕಾರ್ಯಕರ್ತರ ಹತ್ಯೆ : ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದ್ದ ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರ, ಸರ್ಕಾರಕ್ಕಾದ ಅಪಮಾನದ ಮತ್ತು ದೇಶದ ಐಕ್ಯತೆ ಮತ್ತು ಭದ್ರತೆ ವಿಚಾರವಾಗಿ ವಿಪಕ್ಷ ಸರ್ಕಾರವನ್ನು ಪ್ರಶ್ನಿಸಲಿದೆ.

40% ಕಮಿಷನ್ ಆರೋಪ : ರಾಜ್ಯ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘ ಮಾಡಿದ್ದ 40% ಕಮಿಷನ್ ಆರೋಪದ ವಿಚಾರವೂ ಸದನದಲ್ಲಿ ಸದ್ದು ಮಾಡಲಿದೆ.  ಸರ್ಕಾರದ ಪ್ರತಿ ಕಾಮಗಾರಿಯಲ್ಲೂ ಸಚಿವರು ಅಧಿಕಾರಿಗಳಿಗೆ ಹಣ ನೀಡದೆ ಕೆಲಸ ಆಗುವುದಿಲ್ಲ ಎಂಬ ಆರೋಪವನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ್ದರು. ಈ ವಿಚಾರ ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿತ್ತು. ಈಗ ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿವೆ.

ಈ ಸುದ್ದಿ ಓದಿದ್ದೀರಾ? : ರಾಷ್ಟ್ರ ರಾಜಕಾರಣದ ಹೊಸ ಬದಲಾವಣೆ ಬಗ್ಗೆ ಮುನ್ಸೂಚನೆ ನೀಡಿದ ಕೆಸಿಆರ್, ಎಚ್‌ಡಿಕೆ

ಹತ್ತು ದಿನಗಳ ಕಾಲ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರವನ್ನ ಹೇಗೆ ಪೇಚಿಗೆ ಸಿಲುಕಿಸಬೇಕು ಎಂಬುದನ್ನು ನಿರ್ಧರಿಸಲು ಕಾಂಗ್ರೆಸ್‌ ಸೋಮವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ಮತ್ತೊಂದು ಕಡೆ ಜೆಡಿಎಸ್‌ ಕೂಡ ಇದೇ ಮಾರ್ಗ ಅನುಸರಿಸುವ ಸಾಧ್ಯತೆ ಇದೆ. ಇವೆಲ್ಲದರ ನಡುವೆ ರಾಜ್ಯ ಸರ್ಕಾರವೂ ವಿಪಕ್ಷಗಳ ಆರೋಪ  ಹಿಮ್ಮೆಟ್ಟಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ ಎನ್ನಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್