ಜೆಡಿಎಸ್‌ನ ʼಜಲಧಾರೆʼಯಿಂದ ರಾಮನಗರಕ್ಕೆ ಜಾಸ್ತಿ ಮಳೆಯಾಗಿದೆ: ಸಿ ಟಿ ರವಿ ಲೇವಡಿ

  • ಬೆಂಗಳೂರಿನ ಹೆಸರನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ
  • ಬಿಜೆಪಿ ವಿರುದ್ಧ ಸುಮ್ಮನೆ ದೂರುವುದು ಸರಿಯಲ್ಲ 

ಜೆಡಿಎಸ್ ಮುಖಂಡರು ಜಲಧಾರೆ ಮಾಡಿದ್ದಕ್ಕೆ ಒಳ್ಳೆಯ ಮಳೆಯಾಗಿದೆ ಎನ್ನುತ್ತಾರೆ. ಆ ಕಾರಣಕ್ಕೆ ಏನೋ ರಾಮನಗರಕ್ಕೆ ಜಾಸ್ತಿ ಮಳೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಲೇವಡಿ ಮಾಡಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಳೆ ಸಮಸ್ಯೆಗೆ ಅದರದ್ದೇ ಆದ ಕಾರಣಗಳಿವೆ. ಹತ್ತಾರು ವರ್ಷಗಳಿಂದ ಈ ಸಮಸ್ಯೆ ಇದೆ. ಈಗ ಏಕಾಏಕಿ ಬಿಜೆಪಿಯ ಮೇಲೆ ಇದರ ಹೊಣೆ ಹೊರಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಹೆಸರನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ಮೂಲಸೌಕರ್ಯ ಒದಗಿಸುವುದು ಮೂರು ದಿನಗಳಲ್ಲಿ ಮಾಡುವ ಕೆಲಸವೋ? ಅಥವಾ ಮೂರು ವರ್ಷದಲ್ಲಿ ಮಾಡುವ ಕಾರ್ಯವೋ? ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಾಣ ನಡೆಸಿದ್ದು ಬಿಜೆಪಿ ಸರಕಾರ ಬಂದ ಮೇಲೋ ಅಥವಾ ಹತ್ತಿಪ್ಪತ್ತು ವರ್ಷದ ಹಿಂದಿನಿಂದಲೂ ಎನ್ನುವುದಕ್ಕೆ ಮೊದಲು ಉತ್ತರ ಸಿಗಬೇಕು. ರಾಜಕಾಲುವೆ ಒತ್ತುವರಿ ಪ್ರವೃತ್ತಿ ನಡೆದುಕೊಂಡು ಬಂದಿರುವುದು ಯಾವಾಗಿನಿಂದ ? ಕೆರೆಗಳನ್ನು ಮುಳುಗಿಸಿದ್ದು ಯಾರು? ಕೆರೆಗಳನ್ನು ಅಕ್ರಮ ಬಡಾವಣೆಯಾಗಿ ನಿರ್ಮಿಸಿದವರು ಯಾರು? ಅವರೆಲ್ಲರೂ ಇದಕ್ಕೆ ಉತ್ತರಿಸಬೇಕಾಗುತ್ತದೆ ಎಂದು  ಸಿ ಟಿ ರವಿ ಮಾರ್ಮಿಕವಾಗಿ ನುಡಿದರು.

ಈ ಸುದ್ದಿ ಓದಿದ್ದೀರಾ? : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಹಗರಣ ಸಿಬಿಐ ತನಿಖೆಗೆ ವಹಿಸಿ: ಶಾಸಕ ಎ ಮಂಜುನಾಥ್ ಆಗ್ರಹ

ಜೆಡಿಎಸ್ ಅನ್ನು ಕುಟುಕಿದ ಸಿ ಟಿ ರವಿ, ಕುಮಾರಸ್ವಾಮಿಯವರು ಜಲಧಾರೆ ಕಾರ್ಯಕ್ರಮದಿಂದ ರಾಜ್ಯದ ತುಂಬಾ ಮಳೆ ಆಗಿದೆ ಎಂದಿದ್ದಾರೆ. ಅವರಿಂದಲೇ ಮಳೆ ಆಗಿದ್ದರೆ ಅತಿವೃಷ್ಟಿಗೂ ಅವರೇ ಕಾರಣ ಇರಬೇಕಲ್ಲವೇ? ಅವರ ಮೇಲಿನ ಪ್ರೀತಿ ಜಾಸ್ತಿಯಾಗಿ ರಾಮನಗರಕ್ಕೆ ಅತಿ ಹೆಚ್ಚು ಮಳೆ ಬಂದಿರಬೇಕು ಎಂದು ಸಿ ಟಿ ರವಿ ಲೇವಡಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್