ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷ್ ಸೈನ್ಯಕ್ಕೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ: ಸಿಎಂ ಬಣ್ಣನೆ

  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 225ನೇ ಜಯಂತ್ಸೋತ್ಸವ
  • ಬೆಂಗಳೂರಿನಲ್ಲಿ ರೈತ-ಕನ್ನಡಪರ ಹೋರಾಟದ ಸ್ಮಾರಕಗಳ ಸ್ಥಾಪನೆ

“ಸ್ವಾಮಿನಿಷ್ಠೆ ಮತ್ತು ಧೀರತನ ಸಂಗೊಳ್ಳಿ ರಾಯಣ್ಣನ ವಿಶೇಷತೆ. ರಾಯಣ್ಣನ ಚರಿತ್ರೆಯಲ್ಲಿ ಎಲ್ಲಿಯೂ ಮುಂದಿಟ್ಟ ಹೆಜ್ಜೆ ಹಿಂದೆ ತೆಗೆದಿಲ್ಲ. ಅವರು ಶೂರತ್ವ, ಧೈರ್ಯಕ್ಕೆ ಹೆಸರುವಾಸಿ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷ್ ಸೈನ್ಯಕ್ಕೆ ದೊಡ್ಡ ಸಿಂಹಸ್ವಪ್ನವಾಗಿದ್ದರು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 225ನೇ ಜಯಂತ್ಸೋತ್ಸವದ ಅಂಗವಾಗಿ ಬೆಂಗಳೂರಿನ ದೇವರಾಜ ಅರಸು ವೃತ್ತದಲ್ಲಿರುವ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಗೌರವ ಸಮರ್ಪಣೆ ನೆರವೇರಿಸಿ ಬಳಿಕ ಅವರು ಮಾತನಾಡಿದರು.

“ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಬ್ರಿಟಿಷರು ಬೈಲಹೊಂಗಲದ ಸೆರೆಮನೆಯಲ್ಲಿ ಇಟ್ಟಿದ್ದರು. ಈ ವೇಳೆ ಹೊರಗಡೆ ಸಂಗೊಳ್ಳಿ ರಾಯಣ್ಣ ಬಹಾಳ ಪ್ರಬಲ ಹೋರಾಟ ಮಾಡಿದರು. ಬ್ರಿಟಿಷರ ಖಜಾನೆ ಲೂಟಿ ಮಾಡಿದರು. ನಂತರ ಬ್ರಿಟಿಷರು ಅನೇಕ ಹೋರಾಟಗಾರರನ್ನು ಸೆರೆ ಹಿಡಿದ್ದರು, ಆದರೆ, ರಾಯಣ್ಣ ಬಹಳ ಕಾಲದವರೆಗೆ ಸೆರೆಸಿಕ್ಕಿರಲಿಲ್ಲ. ಇದರಿಂದಾಗಿ ಚೆನ್ನಮ್ಮಳಿಗೆ ರಾಯಣ್ಣನ ಮೇಲೆ ಅದಮ್ಯ ವಿಶ್ವಾಸವಿತ್ತು. ಹೋರಾಟವನ್ನು ರಾಯಣ್ಣ ಮುಂದುವರಿಸುತ್ತಾನೆ, ನಮಗೆ ಒಂದಲ್ಲ ಒಂದು ದಿನ ಜಯ ಸಿಕ್ಕೇ ಸಿಗಲಿದೆ ಎಂದು ಚೆನ್ನಮ್ಮ ನಂಬಿದ್ದಳು” ಎಂದು ವಿವರಿಸಿದರು.

“ಕೊನೆಗೆ ಮೋಸದಿಂದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟರು. ಈ ಸುದ್ದಿಯಿಂದ ಚೆನ್ನಮ್ಮ ಕುಸಿದುಬಿದ್ದಳು. ಅದೇ ಕೊರಗಿನಲ್ಲಿ ಪ್ರಾಣ ಬಿಟ್ಟಳು. ನಂದಗಡದಲ್ಲಿ ರಾಯಣ್ಣನನ್ನು ಗಲ್ಲಿಗೆ ಹಾಕುವಾಗ ಎಲ್ಲರ ಕಣ್ಣಲ್ಲಿಯೂ ನೀರು ತುಂಬಿಕೊಂಡಿತ್ತು. ಆದರೆ, ರಾಯಣ್ಣ ಮಾತ್ರ ನಗುನಗುತ್ತಲೇ ಗಲ್ಲಿಗೇರಿದರು” ಎಂದು ಅವರು ಸ್ಮರಿಸಿದರು.

“ಇದು ನಮ್ಮ ಕನ್ನಡ ನಾಡಿನ ಕೆಚ್ಚೆದೆಯ ಇತಿಹಾಸ. ಇದೇ ರೀತಿ ಈಸೂರಿನ ಸತ್ಯಾಗ್ರಹ ನಡೆಯಿತು. ಅಲ್ಲಿಯೆ ಅನೇಕರನ್ನು ಗಲ್ಲಿಗೇರಿಸಲಾಯಿತು. ಅಂಕೋಲದ ಉಪ್ಪಿನ ಸತ್ಯಾಗ್ರಹವನ್ನು ಯಾರೂ ಮರೆಯುವಂತಿಲ್ಲ. ಇವೆಲ್ಲವೂ ನಮಗೆ ಪ್ರೇರಣೆ. ಈ ಎಲ್ಲ ಸ್ವಾತಂತ್ರ್ಯ ಸ್ಮಾರಕಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ನಿರ್ಧರಿಸಿದೆ” ಎಂದು ಹೇಳಿದರು.

“ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ನಂದಗಡ ಅಭಿವೃದ್ಧಿ ಮತ್ತು ರಾಯಣ್ಣ ಹೆಸರಿನಲ್ಲಿರುವ ಶಾಲೆಯನ್ನು ಮಿಲಿಟರಿ ಸ್ಕೂಲ್ ಮಾಡಬೇಕು ಎಂದು ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಆ ಶಾಲೆಯನ್ನು ಆರ್ಮಿ ಶಾಲೆ ಮಾಡಲಾಗಿದೆ. ಹಿಂದಿನ ಸರ್ಕಾರ ಸೇರಿದಂತೆ ಈವರೆಗೆ 180 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ಸೆಪ್ಟೆಂಬರ್ ವೇಳೆಗೆ ಆರ್ಮಿ ಶಾಲೆ ಉದ್ಘಾಟನೆ ಆಗಲಿದೆ” ಎಂದು ತಿಳಿಸಿದರು.

“ಸ್ವಾತಂತ್ರ್ಯದ ನಂತರ ಕನ್ನಡ ನಾಡನ್ನು, ಭಾಷೆಯನ್ನು ಉಳಿಸಲು, ಕಟ್ಟಲು ಹತ್ತು ಹಲವು ಹೋರಾಟಗಳು ನಡೆದಿವೆ. ಕರ್ನಾಟಕ ಏಕೀಕರಣ, ಗಡಿ ಸಮಸ್ಯೆ ಸಂಬಂಧಿಸಿದ ಹೋರಾಟಗಳು ಆಗಿವೆ. ಈ ಹೋರಾಟಗಳ ನೆನಪಿಗಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಹೋರಾಟ ಮತ್ತು ರೈತ ಹೋರಾಟದ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ ಅಮೃತ ಮಹೋತ್ಸವ| ಭಾರತದ ಜಿಡಿಪಿಯಲ್ಲಿ ಶೇಕಡ 9ರಷ್ಟು ಕೊಡುಗೆ ಕರ್ನಾಟಕದ್ದು: ಸಿಎಂ ಬೊಮ್ಮಾಯಿ

ಹರ್ ಘರ್ ತಿರಂಗಾ ಯಶಸ್ವಿಯಾಗಿದೆ: ಸಿಎಂ ಬೊಮ್ಮಾಯಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 'ಹರ್ ಘರ್ ತಿರಂಗಾ' ಅತ್ಯಂತ ಯಶಸ್ವಿಯಾಗಿದೆ. ಮುಂದಿನ 25 ವರ್ಷಕ್ಕೆ ಭದ್ರ ಬುನಾದಿಯಾಗಿದೆ. ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ” ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “75 ವರ್ಷದ ಸ್ವಾತಂತ್ರ್ಯೋತ್ಸವವನ್ನು ಇಡೀ ದೇಶವೇ ಆಚರಣೆ ಮಾಡುತ್ತಿದೆ. ದೇಶದಲ್ಲಿ 40 ಕೋಟಿ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ಕರ್ನಾಟಕದಲ್ಲಿ 1.25 ಕೋಟಿ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ಎಲ್ಲರೂ ಸೇರಿ ಸಂಭ್ರಮಿಸಬೇಕು. ಇದರಲ್ಲಿ ಜಾತಿ, ಮತ, ಪಕ್ಷ, ಪಂಗಡ ಇಲ್ಲ. ನಾವೆಲ್ಲರೂ ಭಾರತೀಯರು. ಒಗ್ಗಟ್ಟಾಗಿ ಒಂದಾಗಿ ಮಾಡಬೇಕು. ಎಷ್ಟು ಜನ ಇದರಲ್ಲಿ ಪಾಲ್ಗೊಳ್ಳುತ್ತಾರೆ ಅಷ್ಟು ಒಳ್ಳೆಯದು. ನಾನು ಎಲ್ಲವನ್ನೂ ಸ್ವಾಗತ ಮಾಡುತ್ತೇನೆ. ದೇಶ ಒಂದಾಗಿ ಎದ್ದು ನಿಲ್ಲಬೇಕೆಂದು ಎಲ್ಲರೂ ಸಹಕಾರ ಕೊಡುತ್ತಿದ್ದಾರೆ” ಎಂದು ಹೇಳಿದರು.

“ಬಾವುಟದ ಬಗ್ಗೆ ಜಗಳ ಏನಿಲ್ಲ. ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಒಂದೇ. ಉಳಿದ ವೇಳೆ ಬೇರೆ. ಭಾರತದ ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳು” ಎಂದರು.

ಕಾರ್ಯಕ್ರಮದಲ್ಲಿ ಶಾಸಕ ದಿನೇಶ್ ಗುಂಡೂರಾವ್, ಮಾಜಿ ಸಚಿವ ರೇವಣ್ಣ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್