ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಕೆ ಸುಧಾಕರ್ ಅವರಿಂದ ಅಂಗಾಂಗ ದಾನಕ್ಕೆ ನೋಂದಾವಣೆ

  • ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಅಂಗಾಂಗ ದಾನ ದಿನಾಚರಣೆ
  • ಅಂಗಾಂಗ ದಾನದ ಮೂಲಕ ಶ್ರೇಷ್ಠ ಜೀವಗಳನ್ನು ಉಳಿಸಿದಂತಾಗುತ್ತದೆ: ಸಿಎಂ

ವಿಶ್ವ ಅಂಗಾಂಗ ದಾನ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಧಾನಸೌಧದ ಮುಂಭಾಗ ಶನಿವಾರ ಆಯೋಜಿಸಿದ್ದ ಅಂಗಾಗ ದಾನ ಜಾಗೃತಿ ಅಭಿಯಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಅಂಗಾಂಗ ದಾನಕ್ಕೆ ನೋಂದಾಯಿಸಿಕೊಂಡರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಅಂಗಾಂಗ ದಾನ ಮಾನವೀಯತೆಯ ಕೆಲಸ. ಅಂಗಾಂಗಗಳ ದಾನಕ್ಕೆ ಸಂಕಲ್ಪ ಮಾಡುವ ಮುಖಾಂತರ ಸಾವಿನ ನಂತರವೂ ಬದುಕು ನೀಡುವ ಸಾರ್ಥಕ ಕಾರ್ಯ ಮಾಡಬಹುದಾಗಿದೆ” ಎಂದು ಹೇಳಿದರು.

“ವಿಜ್ಞಾನಿಗಳ, ವೈದ್ಯರ ಪರಿಶ್ರಮದಿಂದ ನಮ್ಮ ಸಾವಿನ ನಂತರ ಅಂಗಾಂಗಗಳನ್ನು ನೀಡುವ ಮೂಲಕ ಇತರರ ಜೀವವನ್ನು ಬದುಕಿಸಬಹುದಾಗಿದೆ. ಒಬ್ಬ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಂಟು ಜೀವಗಳನ್ನು ಉಳಿಸಬಹುದು. ಚರ್ಮದಿಂದ ಹಿಡಿದು ಎಲ್ಲ ಅಂಗಗಳನ್ನೂ ದಾನ ಮಾಡಬಹುದು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಮಾನವ ಜನ್ಮ  ಶ್ರೇಷ್ಠವಾದುದು. ಅಂಗಾಂಗ ದಾನದ ಮೂಲಕ ಈ ಶ್ರೇಷ್ಠ ಜೀವವನ್ನು ಉಳಿಸಿದಂತಾಗುತ್ತದೆ” ಎಂದು ವಿವರಿಸಿದರು.

“ರಾಜ್ಯದಲ್ಲಿ ಪ್ರಸ್ತುತ 18 ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿಮಾನ್ಸ್‌ನಲ್ಲಿ ಮೆದುಳು ದಾನ ಹಾಗೂ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೂತ್ರಪಿಂಡ ದಾನಗಳನ್ನು ಮಾಡಬಹುದಾಗಿದೆ. ಇದು ಸರ್ಕಾರದ ದೊಡ್ಡ ಸಾಧನೆ. ಅಂಗಾಂಗ ದಾನ ಮಾನವೀಯತೆ ಕೆಲಸ” ಎಂದರು.

“ಮಾರ್ಕೋನಳ್ಳಿಯ ಕೃಷ್ಣಪ್ಪ, ನವೀನಕುಮಾರ್ ಇವರು ಅತ್ಯಂತ ಬಡಕುಟುಂಬದವರಾಗಿದ್ದು, ಇವರ ಕುಟುಂಬದವರು ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರೂ, ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ದೊಡ್ಡ ಗುಣವನ್ನು ಮೆರೆದಿದ್ದಾರೆ. ಅವರ ಉದಾತ್ತ ಗುಣ ಎಲ್ಲರಿಗೂ ಅನುಕರಣೀಯವಾದುದು” ಎಂದು ಬೊಮ್ಮಾಯಿ ನುಡಿದರು.

ಈ ಸುದ್ದಿ ಓದಿದ್ದೀರಾ? ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಚಾಲನೆ; ಮನೆ ಮನೆ ಮೇಲೂ ಹಾರುತ್ತಿರುವ ತ್ರಿವರ್ಣ ಧ್ವಜಗಳು

ವಿಶ್ವ ಅಂಗಾಂಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 'ಅಂಗಾಂಗ ದಾನ' ಅಭಿಯಾನ ಲೋಗೊವನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆ ಮಾಡಿದರು. ಸಚಿವರಾದ ಕೆ ಗೋಪಾಲಯ್ಯ, ಭೈರತಿ ಬಸವರಾಜ್ ಹಾಗೂ ಮುಂತಾದವರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್