ರಸ್ತೆ ಗುಂಡಿಗೆ ಬಲಿಯಾದ ನಿವೃತ್ತ ಯೋಧ; ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಆಕ್ರೋಶ

H D Kumaraswamy
  • ರಸ್ತೆಗುಂಡಿಗಳ ಮೇಲೆ ಸಂಪತ್ತಿನ ಗೋಪುರ ಕಟ್ಟುವ ಬಿಜೆಪಿ
  • ಮಗನನ್ನು ಕಳೆದುಕೊಂಡ ತಂದೆ ಕಂಡು ನನಗೆ ಆಘಾತವಾಗಿದೆ

‘ಗುಂಡಿಗಳ ಮೇಲೆ ಸಂಪತ್ತಿನ ಗೋಪುರ ಕಟ್ಟುವ ಬಿಜೆಪಿ ಸರ್ಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ನಿವೃತ್ತ ಯೋಧರೊಬ್ಬರು ರಸ್ತೆಗುಂಡಿಗೆ ಬಿದ್ದು ಲಾರಿ ಕೆಳಕ್ಕೆ ಸಿಕ್ಕಿ ಜೀವ ಕಳೆದುಕೊಂಡ ಘಟನೆಯ ಬಗ್ಗೆ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, “ರಾಜ್ಯದಾದ್ಯಂತ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಗೆ ಬಲಿ ಆಗುವ ಸರಣಿ ಮುಂದುವರಿದಿರುವುದು ಅತ್ಯಂತ ಕಳವಳಕಾರಿ. ಮಂಡ್ಯದಲ್ಲಿ ರಸ್ತೆಗೆ ನಿವೃತ್ತ ಯೋಧರೊಬ್ಬರು ಬಲಿಯಾಗಿರುವುದು ನನಗೆ ತೀವ್ರ ದುಃಖ ಉಂಟು ಮಾಡಿದೆ. ಕರ್ನಾಟಕದ ಕಳಪೆ ರಸ್ತೆಗಳಿಗೆ ಪರಿಹಾರವೇ ಇಲ್ಲವೇ” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

“ಸೇನೆಯಿಂದ ಇತ್ತೀಚೆಗಷ್ಟೇ ನಿವೃತ್ತರಾಗಿದ್ದ ಕುಮಾರ್ (38) ಎಂಬ ಯೋಧರು ಮಂಡ್ಯದ ಕಾರಿಮನೆ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಗುಂಡಿಗೆ ಬಿದ್ದೊಡನೆ ಅವರ ಮೇಲೆ ಲಾರಿ ಹರಿದು ನಿಧನರಾಗಿರುವುದು ಈ ವ್ಯವಸ್ಥೆಯ ಕರಾಳತೆಗೆ ಹಿಡಿದ ಕನ್ನಡಿ” ಎಂದು ಕುಮಾರಸ್ವಾಮಿ ಬೇಸರ ಹೊರಹಾಕಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯರನ್ನು ಸೋಲಿಸಲು ಯಾವುದೇ ಪಕ್ಷದ ಜತೆಗೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ: ಎಚ್ ಡಿ ಕುಮಾರಸ್ವಾಮಿ 

“ಪೊಲೀಸ್ ತರಬೇತಿ ಪಡೆಯುತ್ತಿದ್ದ ಕುಮಾರ್ ಅವರು, ಬದುಕಿನಲ್ಲಿ ಅರ್ಥಪೂರ್ಣ ಕನಸುಗಳನ್ನು ಕಟ್ಟಿಕೊಂಡಿದ್ದರು. ತಮ್ಮ ತಂದೆಯವರ ಜತೆ ಸಾತನೂರು ಗ್ರಾಮಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಆ ವೃದ್ಧ ತಂದೆಗೆ ಆಸರೆಯಾಗಿದ್ದ ಪುತ್ರ ಗುಂಡಿಯಿಂದ ಜೀವ ಕಳೆದುಕೊಂಡಿದ್ದು ಕರ್ನಾಟಕದ ಕಳಪೆ ರಸ್ತೆಗಳಿಗೆ ಹಿಡಿದ ಕನ್ನಡಿ. ಕಣ್ಮುಂದೆಯೇ ಜೀವ ಬಿಟ್ಟ ಪುತ್ರನ ಪಾರ್ಥಿವ ಶರೀರದ ಮುಂದೆ ಗೋಳಾಡುತ್ತಿದ್ದ ಆ ವೃದ್ಧ ತಂದೆಯನ್ನು ಕಂಡು ನನ್ನ ಮನಸ್ಸಿಗೆ ಆಘಾತವಾಗಿದೆ. ಇನ್ನೆಷ್ಟು ತಂದೆ ತಾಯಂದಿರು ಇಂಥ ಗುಂಡಿಗಳಿಂದ ಅನಾಥರಾಗಬೇಕು” ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

“ಯೋಧರ ದುರಂತ ಸಾವಿಗೆ ಕಾರಣವಾದ ರಸ್ತೆಯೂ ಸೇರಿ ಮಂಡ್ಯ ನಗರಸಭೆ ವ್ಯಾಪ್ತಿಯ ಎಲ್ಲ ರಸ್ತೆಗಳ ಅಭಿವೃದ್ಧಿಗೆ ₹50 ಕೋಟಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬಿಡುಗಡೆ ಮಾಡಿದ್ದೆ. ದುರಂತ ಎಂದರೆ, ನನ್ನ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ₹50 ಕೋಟಿ ಹಣವನ್ನು ಕೂಡಲೇ ಹಿಂಪಡೆಯಿತು” ಎಂದು ಅವರು ದೂರಿದ್ದಾರೆ.

“ರಾಜಕೀಯ ಕಾರಣಕ್ಕೆ ಹಣ ವಾಪಸ್ ಪಡೆದ ರಾಜ್ಯ ಬಿಜೆಪಿ ಸರ್ಕಾರವು ರಸ್ತೆಗಳಲ್ಲಿ ಮುಗ್ಧ ಜನರ ಹೆಣಗಳನ್ನು ನೋಡಿ ಮೆರೆಯುತ್ತಿದೆ. ಇದು ಅಮಾನುಷ. ಸರ್ಕಾರವು ನೊಂದ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

“ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ಸಿಗಲಿ, ದುಃಖತಪ್ತ ಕುಟುಂಬಕ್ಕೆ ನೋವು ಭರಿಸುವ ಆ ಶಕ್ತಿಯನ್ನು ಭಗವಂತ ಕರುಣಿಸಲಿ” ಎಂದು ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app