ನ್ಯಾ. ಸದಾಶಿವ ಆಯೋಗದ ವರದಿ ಪರಿಶೀಲಿಸಿ 'ಒಳ ಮೀಸಲಾತಿ' ಜಾರಿಗೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

basavaraj bommai
  • ಅಲೆಮಾರಿ ಸಮುದಾಯಗಳ ನಿಗಮ ರಚಿಸಲು ತೀರ್ಮಾನ
  • ಒಟ್ಟು ಮೀಸಲಾತಿಯ ಪ್ರಮಾಣ ಶೇ. 50ರಷ್ಟು ದಾಟಿದೆ

‘ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ (ಅ.8) ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಎಸ್ ಸಿ – ಎಸ್‌ಟಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ರಚಿಸಲು ತೀರ್ಮಾನ ಮಾಡಲಾಗಿದೆ” ಎಂದು ಬೊಮ್ಮಾಯಿ ತಿಳಿಸಿದರು. 

Eedina App

“ತಳ ಸಮುದಾಯಗಳಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದೆ. ವಂಚಿತರಿಗೆ ನ್ಯಾಯ ಒದಗಿಸಲು ಕಾನೂನಾತ್ಮಕ ಅಂಶಗಳನ್ನು ತಜ್ಞರು ಪರಿಶೀಲಿಸಿ, ಮುಂದೆ ಕ್ರಮ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ. ಒಳಮೀಸಲಾತಿ ಬಗ್ಗೆ ಅಧ್ಯಯನ ಮಾಡಿರುವ ಸದಾಶಿವ ಆಯೋಗದ ಪ್ರಮುಖ ಅಂಶಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದರು.

“ಅದಕ್ಕೂ ಮುನ್ನ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಜಾತಿಗಳ ಹಿತರಕ್ಷಣೆ ಮಾಡುವ ಸಲುವಾಗಿ ಮತ್ತು ಒಳಮೀಸಲಾತಿಯಿಂದ ಪರಿಣಾಮ ಬೀರುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲಾಗುವುದು. ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದು ಅಧಿಕೃತವಾಗಿ ಚರ್ಚೆ ಮಾಡಿ ಕೈಗೊಂಡಿರುವ ತೀರ್ಮಾನ” ಎಂದರು. 

AV Eye Hospital ad

ಸರ್ವಪಕ್ಷ ಸಭೆಯಲ್ಲಿ ಮೀಸಲಾತಿ ಹೆಚ್ಚಳದ ನಿರ್ಧಾರ

“ನಿನ್ನೆ (ಶುಕ್ರವಾರ) ನಡೆದ ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಶಿಫಾರಸ್ಸು ಮಾಡಿರುವಂತೆ ಪರಿಶಿಷ್ಟ ಜಾತಿಗೆ ಶೇ. 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7 ರಷ್ಟು ಮೀಸಲಾತಿ ಹೆಚ್ಚಿಸಬೇಕೆನ್ನುವ ವಿಚಾರವನ್ನು ಒಪ್ಪಿ ಅದಕ್ಕೆ ಆದೇಶ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ | ಬೇರೆ ಯಾವ 'ಕೆಟಗರಿ'ಗೂ ಮೀಸಲಾತಿ ಪ್ರಮಾಣ ಕಡಿಮೆ ಆಗಲ್ಲ: ಸಚಿವ ಜೆ ಸಿ ಮಾಧುಸ್ವಾಮಿ

“ಈ ನಿರ್ಣಯಕ್ಕೆ ಕಾನೂನಿನ ರಕ್ಷಣೆ ನೀಡಲು ಸಂವಿಧಾನದ ಪರಿಚ್ಛೇದ 9ಕ್ಕೆ ಸೇರಿಸಲು ವಿಧಿವಿಧಾನಗಳನ್ನು ಕಾನೂನು ಸಚಿವರು, ಕಾನೂನು ಆಯೋಗ ಮತ್ತು ಸಂವಿಧಾನದ ತಜ್ಞರು ಹಾಗೂ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಕೂಡಲೇ ಶಿಫಾರಸು ಮಾಡಿ ಅನುಷ್ಠಾನ ಮಾಡುವ ತೀರ್ಮಾನ ಮಾಡಿದೆ” ಎಂದರು. 

“ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಷ್ಟು ದಾಟಿದೆ. ಕಾನೂನು ರಕ್ಷಣೆ ಸಿಗುವುದೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳಿವೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಯಿಂದ ದೂರವಿರುವ ಪರಿಶಿಷ್ಟ ಪಂಗಡಗಳ ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಅದಕ್ಕೆ ಮೀಸಲಾತಿ ನೀಡಬಹುದುದೆಂದು ಹೇಳಲಾಗಿದೆ” ಎಂದರು. 

ಮೀಸಲಾತಿ ಹೆಚ್ಚಳ ವಿಶೇಷ ಪ್ರಕರಣ

“ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ನ್ಯಾಯಮೂರ್ತಿ ಸುಭಾಷ್ ಅಡಿ ಅವರು ಇದು ಯಾಕೆ ವಿಶೇಷ ಪ್ರಕರಣವಾಗುತ್ತದೆ ಎಂದು ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಇರಬೇಕು ಹಾಗೂ ಸಾಮಾಜಿಕವಾಗಿ ಅಂಕಿಅಂಶಗಳ ಸಮೇತವಾಗಿ ಇವೆಲ್ಲವೂ ಮುಖ್ಯ ವಾಹಿನಿಯಿಂದ ದೂರವಿದ್ದು, ಸಾಕಷ್ಟು ಪ್ರಾತಿನಿಧ್ಯ ಇಷ್ಟು ವರ್ಷಗಳಾದರೂ ದೊರೆತಿಲ್ಲ. ಹಾಗಾಗಿ ಇದು ವಿಶೇಷ ಪ್ರಕರಣವಾಗಿದೆ ಎಂದು ಕಾರಣಗಳನ್ನು ನೀಡಿದ್ದಾರೆ” ಎಂದು ವಿವರಿಸಿದರು. 

ಸಮಗ್ರ ಹಾಗೂ ಸಮರ್ಥನೀಯ ವರದಿ

“ಗೆಜೆಟ್ ಅಧಿಸೂಚನೆ ವಿಸ್ತೃತವಾಗಿ ಇರಲಿದೆ. ಇದುವರೆಗೆ ಶೇ.50ರೊಳಗೇ ಇದ್ದರೂ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾಗಮೋಹನ್ ದಾಸ್ ವರದಿ ಸಮಗ್ರ ಹಾಗೂ ಸಮರ್ಥನೀಯವಾಗಿದ್ದು, ವಿಶೇಷ ಪ್ರಕರಣ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಗಟ್ಟಿಯಾದ ನೆಲೆಗಟ್ಟಿದೆ. ಇಂದಿರಾ ಸಹಾನಿ ಪ್ರಕರಣದ ಬೆಂಬಲವಿದೆ. ಹಿಂದಿನ ಪ್ರಕರಣಗಳನ್ನು ಗಮನಿಸಿ ಈ ಸಮುದಾಯಗಳಿಗೆ ತಕ್ಷಣದ ಸೌಲಭ್ಯ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪರಿಚ್ಛೇದ 9ಕ್ಕೆ ಸೇರಿಸಲು ತನ್ನದೇ ವಿಧಾನಗಳಿವೆ. ಸಂವಿಧಾನದ ತಿದ್ದುಪಡಿ ಯಾಗಬೇಕು; ಸಮಯವೂ ಬೇಕು” ಎಂದರು. 

“ಪಂಚಾಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ವರದಿ ಬಂದಾಗ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು” ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app