ಮಳೆಗಾಲ ಅಧಿವೇಶನ | ಬೆಂಗಳೂರಿನ ಸಮಸ್ಯೆಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು: ಮುಖ್ಯಮಂತ್ರಿ ಬೊಮ್ಮಾಯಿ

Basavaraj Bommai
  • ಕೆರೆ ತುಂಬಿ ಹರಿದಿರುವ ಪ್ರದೇಶದಲ್ಲಿ ಬೆಳೆನಾಶವಾಗಿ, ಜನರಿಗೆ ಸಮಸ್ಯೆಯಾಗಿದೆ
  • ಬೆಂಗಳೂರು ನಗರದಲ್ಲಿ 400 ಕಿ.ಮಿ. ರಾಜಕಾಲುವೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ

ಬೆಂಗಳೂರಿನ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದರು.

ಅತಿವೃಷ್ಟಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಮಳೆ ಹೆಚ್ಚಾಗಿದೆ. ನದಿಗಳು ಉಕ್ಕಿ ಪ್ರವಾಹ ಉಂಟಾಗಿ, ಅನಾಹುತ ಆಗಿದೆ. ಅಲ್ಲಿ ಅಗತ್ಯವಿರುವ ಕಾಮಗಾರಿ ನಡೆಸಲಾಗುತ್ತಿದೆ” ಎಂದು ಮಾಹಿತಿ ನೀಡಿದರು. 

“ಎರಡು ವರ್ಷದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವೆಡೆ ಅಂತರ್ಜಲ ಹೆಚ್ಚಾಗಿದೆ. ಆದ್ದರಿಂದ, ಮಳೆಯಾದಾಗ ಕೆರೆಗಳು ಉಕ್ಕಿ ಹರಿಯುತ್ತಿವೆ. ಬರದ ನಾಡು ಎನ್ನುವ ಜಿಲ್ಲೆಗಳಲ್ಲೂ ಎಲ್ಲ ಕೆರೆಗಳು ತುಂಬಿ, ಕೋಡಿ ಹರಿದಿವೆ. ಈ ಪ್ರವಾಹ ಬೇರೆ ಪ್ರವಾಹಕ್ಕಿಂತ ಭಿನ್ನವಾಗಿದೆ. ಎಲ್ಲೆಲ್ಲಿ ಕೆರೆ ತುಂಬಿ ಹರಿದಿದೆಯೋ ಅಲ್ಲೆಲ್ಲ ಬೆಳೆ ನಾಶವಾಗಿ, ಜನರಿಗೆ ಸಮಸ್ಯೆಯಾಗಿದೆ” ಎಂದರು. 

“ಅಲ್ಪ ಸಮಯದಲ್ಲಿ ಹೆಚ್ಚು ಹಾಗೂ ನಿರಂತರ ಮಳೆಯಿದಾಗಿ ಕೆರೆಗಳು ತುಂಬಿ ಹರಿಯುತ್ತಿವೆ. ಬೆಂಗಳೂರಿನಲ್ಲಿ 1 ಕೋಟಿಗೂ ಅಧಿಕ ಜನರಿದ್ದಾರೆ. ಜನವಸತಿ ಪ್ರದೇಶ ಹೆಚ್ಚಾಗಿರುವುದರಿಂದ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮಳೆ ಹೆಚ್ಚಾದಾಗ ಸಹಜವಾಗಿಯೇ ಸಮಸ್ಯೆ ಆಗಿದೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಯಾವ ಮುಖ್ಯಮಂತ್ರಿಯೂ ಇದರ ಹೊರತಾಗಿಲ್ಲ. ಬೆಂಗಳೂರಿನ ಸಮಸ್ಯೆಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು” ಎಂದು ಬೊಮ್ಮಾಯಿ ಸದನಕ್ಕೆ ವಿವರಿಸಿದರು.

“ತಪ್ಪುಗಳು ಆಗಿದೆ; ಆಗಿಲ್ಲ ಎಂದು ಹೇಳುತ್ತಿಲ್ಲ. ಅವೈಜ್ಞಾನಿಕವಾಗಿ ನಾವು ಬೆಂಗಳೂರನ್ನು ಕಟ್ಟಿದ್ದೇವೆ. ಮೂಲ ಬೆಂಗಳೂರು ಒಂದು ಚೌಕಟ್ಟಿನಲ್ಲಿದೆ. ಮೂಲ ಬೆಂಗಳೂರು ಮತ್ತು ತದನಂತರದ ಬೆಂಗಳೂರಿಗೆ ಸೇರಿಸಿರುವ ಕೆರೆಗಳು ತುಂಬಿ ಹರಿದಾಗ ತಳಮಟ್ಟದಲ್ಲಿ ಇರುವ ಬೆಂಗಳೂರಿಗೆ ಸಮಸ್ಯೆ ಆಗುತ್ತಿದೆ” ಎಂದು ಮುಖ್ಯಮಂತ್ರಿಗಳು ಹೇಳಿದರು.

“ಶಿವಾಜಿನಗರ, ಸ್ಯಾಂಕಿ ಕೆರೆ ಮತ್ತು ಹಲಸೂರಿನಲ್ಲಿ ಮಳೆಯಾಗಿದೆ. ಆದರೆ, ಅಲ್ಲಿ ಕಾಲುವೆ ಸಮರ್ಪಕವಾಗಿರುವುದರಿಂದ ಸಮಸ್ಯೆಯಾಗಿಲ್ಲ. ನಗರದ ಬೇರೆ ಕಡೆ ಸಮರ್ಪಕ ಕಾಲುವೆ ಇರದಿರುವುದು ಮತ್ತು ಒತ್ತುವರಿಯಾಗಿರುವುದರಿಂದ ಪ್ರವಾಹ ಬಂದಿದೆ” ಎಂದು ಹೇಳಿದರು.

“ಮೊಟ್ಟಮೊದಲಿಗೆ ಕೆರೆಯಿಂದ ಹೊರಬರುತ್ತಿರುವ ನೀರನ್ನು ನಿರ್ವಹಣೆ ಮಾಡಬೇಕು. ಬೇಸಿಗೆಯಲ್ಲೂ ನೀರು ಇರುವಂತೆ ನೋಡಿಕೊಳ್ಳಬೇಕು. ನಗರದ ಎಲ್ಲ ಕೆರೆಗಳಿಗೂ ಕೊಳಚೆ ನೀರು ಸೇರದಂತೆ ಗೇಟ್ ಹಾಕಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಬೊಮ್ಮಾಯಿ ಹೇಳಿದರು. 

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ಬೆಂಗಳೂರು ಮುಳುಗಿದ್ದು ಯಾರ ಕರ್ಮದ ಫಲ ಎಂದ ಅಶೋಕ್: ಸದನದಲ್ಲಿ ಕೋಲಾಹಲ

“ಕೆ ಸಿ ವ್ಯಾಲಿ ಕಣಿವೆಗೆ ಕೊಳಚೆ ನೀರು ಹರಿಸಲು ಕೆ-100 ಯೋಜನೆ ನಡೆಸಲಾಗುತ್ತಿದೆ. ರಾಜಕಾಲುವೆಗೆ ಕೊಳಚೆ ನೀರು ಬರದಂತೆ ತಡೆದು, ಅದಕ್ಕೆ ಸಮಾನಾಂತರವಾಗಿ ಮೆಜೆಸ್ಟಿಕ್‌ನಿಂದ ಕೊಳಚೆ ನೀರು ಹರಿಸಲು ಕಾಮಗಾರಿ ನಡೆಸುತ್ತಿದ್ದೇವೆ. ಬಹುತೇಕ ಕಾಮಗಾರಿ ಮುಗಿಯುತ್ತಿದೆ. ಸಹಜವಾಗಿಯೇ ಈ ಕಾಮಗಾರಿ ದುಬಾರಿಯಾಗುತ್ತಿದೆ. ನಾನು ಕೋರಮಂಗಲಕ್ಕೆ ಭೇಟಿ ಕೊಟ್ಟು ನೋಡಿದ್ದೇನೆ. ಅಲ್ಲಿ ಮಳೆ ನೀರು ಮಾತ್ರ ಬರುತ್ತಿತ್ತು. ಜನರು ಕಾಲುವೆ ಪಕ್ಕದಲ್ಲಿ ವಾಯು ವಿಹಾರ ಮಾಡಬಹುದು” ಎಂದರು.

ಮುಖ್ಯಮಂತ್ರಿಗಳು ಮಾತನಾಡುವಾಗ ಮಧ್ಯಪ್ರವೇಶಿಸಿದ ಕೃಷ್ಣ ಭೈರೇಗೌಡ, “ಮಳೆ ಬಂದಾಗ ಮ್ಯಾನ್ ಹೋಲ್ ಕೂಡ ಓವರ್ ಫ್ಲೋ (ತುಂಬಿ ಹರಿಯುತ್ತಿದೆ) ಆಗುತ್ತಿದೆ. ಮಳೆ ನೀರನ್ನು ಮನೆಗಳ ಕೊಳಚೆ ನೀರಿನ ಪೈಪ್‌ಗೆ ಸಂಪರ್ಕಿಸಿದ್ದಾರೆ; ಇದು ಕಾನೂನು ಬಾಹಿರ. ಅದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು” ಎಂದು ಮನವಿ ಮಾಡಿದರು.

ಮಾತು ಮುಂದುವರೆಸಿದ ಮುಖ್ಯಮಂತ್ರಿ ಬೊಮ್ಮಾಯಿ, “ಬೆಂಗಳೂರು ನಗರದಲ್ಲಿ 400 ಕಿ.ಮಿ. ರಾಜಕಾಲುವೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. ಮೊದಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ನಡೆಸುತ್ತೇವೆ” ಎಂದು ಬೊಮ್ಮಾಯಿ ಹೇಳಿದರು.

“ವಿದೇಶಗಳಲ್ಲಿ 'ಇಂಡಿಯಾ ಎಂದರೆ ಬೆಂಗಳೂರು' ಎನ್ನುವ ಮೆಚ್ಚುಗೆಗೆ ರಾಜ್ಯದ ಐಟಿ-ಬಿಟಿ ಕಂಪನಿಗಳ ಪಾತ್ರ ದೊಡ್ಡದು. ಆ ಕಂಪನಿಗಳು ಸ್ವಂತ ಕಟ್ಟಡ ಹೊಂದಿಲ್ಲ. ಕೆಲವು ಕಂಪನಿಗಳು ಮಾತ್ರ ಸ್ವಂತ ಕಟ್ಟಡ ಹೊಂದಿದ್ದಾರೆ. ಉಳಿದವರು ಐಟಿ ಪಾರ್ಕ್‌ನಲ್ಲಿದ್ದಾರೆ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್