ವಿಧಾನ ಪರಿಷತ್‌ ಏಳು ಸದಸ್ಯರು ನಿವೃತ್ತಿ: ಜೂ.16ಕ್ಕೆ ನೂತನ ಸದಸ್ಯರ ಪ್ರಮಾಣ ವಚನ

  • ಮೇಲ್ಮನೆಗೆ ಮರು ಆಯ್ಕೆಯಾದ ಮಾಜಿ ಸಚಿವ ಲಕ್ಷ್ಮಣ ಸವದಿ
  • ಅವಿರೋಧ ಆಯ್ಕೆಯಾಗಿರುವ ಏಳು ಮಂದಿ ನೂತನ ಸದಸ್ಯರು

ಕರ್ನಾಟಕ ವಿಧಾನ ಪರಿಷತ್ತಿನ ಏಳು ಸದಸ್ಯರು ಸೋಮವಾರ (ಜೂ.14) ನಿವೃತ್ತರಾಗಿದ್ದಾರೆ. ಖಾಲಿಯಾಗಿರುವ ಆ ಸ್ಥಾನಕ್ಕೆ ಈಗಾಗಲೇ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ನೂತನ ಸದಸ್ಯರು ಜೂ.16ರಂದು ಪದಗ್ರಹಣ ಮಾಡಲಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್‌ನ ಮೂವರು, ಜೆಡಿಎಸ್ ಹಾಗೂ ಆಡಳಿತಾರೂಢ ಬಿಜೆಪಿಯ ತಲಾ ಇಬ್ಬರು ಸದಸ್ಯರು ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯಾದವರಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತ್ರ ಮರು ಆಯ್ಕೆಯಾಗಿದ್ದಾರೆ. ಉಳಿದ ಆರು ಸದಸ್ಯರು ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.

ಬಿಜೆಪಿಯ ಲೆಹರ್ ಸಿಂಗ್, ಲಕ್ಷ್ಮಣ ಸವದಿ, ಜೆಡಿಎಸ್‌ನ ಎಚ್ ಎಂ ರಮೇಶ್ ಗೌಡ, ಕೆ ವಿ ನಾರಾಯಣ ಸ್ವಾಮಿ, ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ, ಎಸ್ ವೀಣಾ ಅಚ್ಚಯ್ಯ ಹಾಗೂ ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಅವರು ನಿವೃತ್ತರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬಿಜೆಪಿಯವರಿಗೆ ಅಧಿಕಾರದ ಮದ ಏರಿದೆ: ಕಾಂಗ್ರೆಸ್ ಮುಖಂಡರ ಬಂಧನಕ್ಕೆ ಸಿದ್ದರಾಮಯ್ಯ ಆಕ್ರೋಶ

ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಬಿಜೆಪಿಯ ಲಕ್ಷ್ಮಣ ಸವದಿ, ಟಿ ನಾರಾಯಣಸ್ವಾಮಿ, ಕೇಶವ ಪ್ರಸಾದ್, ಕಾಂಗ್ರೆಸ್‌ನ ಎಂ ನಾಗರಾಜು, ಕೆ ಅಬ್ದುಲ್ ಜಬ್ಬಾರ್ ಹಾಗೂ ಜೆಡಿಎಸ್‌ನ ಟಿ ಎ ಶರವಣ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇದೇ ತಿಂಗಳ 16ರಂದು ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಿಂದ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸಂಖ್ಯಾಬಲ ಹೆಚ್ಚಾದರೆ ಪ್ರತಿ ಪಕ್ಷಗಳ ಸಂಖ್ಯಾಬಲ ಕಡಿಮೆಯಾಗಲಿದೆ. ಬಿಜೆಪಿ ಸದಸ್ಯರ ಸಂಖ್ಯಾಬಲ 37ರಿಂದ 39ಕ್ಕೆ ಏರಿಕೆಯಾಗಲಿದೆ. ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ 26ರಿಂದ 25ಕ್ಕೆ ಇಳಿಕೆಯಾದರೆ, ಜೆಡಿಎಸ್ ಸದಸ್ಯರ ಸಂಖ್ಯಾಬಲ 9 ರಿಂದ 8ಕ್ಕೆ ಇಳಿದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app