ಮುಂಗಾರು ಅಧಿವೇಶನ | ಕಂದಾಯ, ಶಿಕ್ಷಣ ಇಲಾಖೆಯ ಹಲವು ವಿಧೇಯಕ ಮಂಡನೆ: ವಿಧಾನಸಭೆಯಲ್ಲಿ ಅನುಮೋದನೆ

Mansoon Session
  • ಕರ್ನಾಟಕ ಭೂ ಕಬಳಿಕೆ ನಿಷೇಧ-2022ನ್ನು ಮಂಡಿಸಿದ ಅಶೋಕ್
  • ‘ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ'ಕ್ಕೆ ಒಪ್ಪಿಗೆ 

2022ನೇ ಸಾಲಿನ ಮುಂಗಾರು ಅಧಿವೇಶನದ 13ನೇ ದಿನ ಹಲವು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರಕಿತು.

ಕಂದಾಯ ಸಚಿವ ಆರ್ ಅಶೋಕ್ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, ವಿಧೇಯಕಗಳನ್ನು ಮಂಡಿಸಿ ಸದನದ ಒಪ್ಪಿಗೆ ಪಡೆದರು.

ಕಂದಾಯ ಇಲಾಖೆಗೆ ಸಂಬಂಧಿಸಿದ 2022ನೇ ಸಾಲಿನ ‘ಕರ್ನಾಟಕ ಭೂ ಕಬಳಿಕೆ ನಿಷೇಧ ಮತ್ತು ಸ್ಟಾಂಪ್ ವಿಧೇಯಕ’ವನ್ನು ವಿಧಾನಸಭೆಯಲ್ಲಿ ಆರ್ ಅಶೋಕ್ ಮಂಡಿಸಿದರು. ಕರ್ನಾಟಕ ಸ್ಟಾಂಪ್ ವಿಧೇಯಕದ ಬಗ್ಗೆ ಮಾತನಾಡಿದ ಅಶೋಕ್, “ಚಾರಿಟಿ ನೋಂದಣಿ ಆದ ನಂತರ ಅವರು ಸೇವೆ ಮಾಡುತ್ತಿದ್ದಾರಾ, ಇಲ್ಲವಾ ಎಂಬುದು ತಿಳಿಯುತ್ತಿಲ್ಲ. ಕೆಲವರು ಸರ್ಕಾರದಿಂದಲೂ ನೆರವು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಚಾರಿಟಿಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರುತ್ತಿದ್ದೇವೆ” ಎಂದು ವಿವರ ನೀಡಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದ “ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು ಮತ್ತು ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ’ ಮತ್ತು ‘ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ’ಗಳನ್ನು ಬಿ ಸಿ ನಾಗೇಶ್ ಸದನದಲ್ಲಿ ಮಂಡಿಸಿದರು. 

'ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ'ದ ಬಗ್ಗೆ ಹೆಚ್ಚು ಹೊತ್ತು ಚರ್ಚೆ ನಡೆಯಿತು. ‘ಈ ವಿಧೇಯಕ ಮಂಡಿಸಿದ್ದರ ಉದ್ದೇಶ ಏನು” ಎಂದು ಹಲವು ಸದಸ್ಯರು ನಾಗೇಶ್ ಅವರನ್ನು ಪ್ರಶ್ನಿಸಿದರು. “ಹೊಸ ಶಿಕ್ಷಣ ನೀತಿ ಆಧಾರದಲ್ಲಿ ಇಲಾಖೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ; ಪಿಯು ಮತ್ತು ಎಸ್ಎಸ್ಎಲ್‌ಸಿ ಪರೀಕ್ಷಾ ಮಂಡಳಿಗಳನ್ನು ಒಂದು ಛತ್ರಿಯ ಅಡಿಗೆ ತರುತ್ತಿದ್ದೇವೆ” ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯ ಕೆ ಆರ್ ರಮೇಶ್‌ಕುಮಾರ್ ಮಾತನಾಡಿ, "ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣದಲ್ಲಿ ಮಕ್ಕಳ ಸ್ಥಿತಿಗತಿ ಹೇಗಿರುತ್ತೆ ಎಂಬುದರ ಆಧಾರದಲ್ಲಿ ಹಂತಹಂತವಾಗಿ ಶಿಕ್ಷಣ ನೀಡಲಾಗುತ್ತಿದೆ. ಮನುಷ್ಯನ ಶಾರೀರಿಕ ಬೆಳವಣಿಗೆ ಮತ್ತು ಬುದ್ಧಿಶಕ್ತಿಯನ್ನು ಪರಿಗಣಿಸಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿದೆ. ಎರಡು ಪರೀಕ್ಷಾ ಮಂಡಳಿಗಳಿಗೆ ಈಗ ಐಎಎಸ್ ಅಧಿಕಾರಿಯನ್ನು ನೇಮಕ ಮಾಡುತ್ತಿರುವುದು ಯಾಕೆ” ಎಂದು ರಮೇಶ್‌ಕುಮಾರ್ ಪ್ರಶ್ನಿಸಿದರು.

“ಎರಡು ಪರೀಕ್ಷಾ ಮಂಡಳಿಗಳನ್ನು ಒಟ್ಟುಗೂಡಿಸಿ ಒಬ್ಬರು ನಿರ್ದೇಶಕರನ್ನು ನೇಮಕ ಮಾಡುವುದೇ ಈ ಕಾಯ್ದೆಯ ಉದ್ದೇಶ” ಎಂದು ಜೆ ಸಿ ಮಾಧುಸ್ವಾಮಿ ಕಾಯ್ದೆಯ ತಿದ್ದುಪಡಿಯನ್ನು ಸಮರ್ಥನೆ ಮಾಡಿಕೊಂಡರು.

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ‘ಪೇ ಸಿಎಂ’ ಪೋಸ್ಟರ್ ವಿಚಾರ ಪ್ರಸ್ತಾಪಿಸಿದ ಪಿ ರಾಜೀವ್; ತಿರುಗಿಬಿದ್ದ ಕಾಂಗ್ರೆಸ್

“ನೂತನ ಶಿಕ್ಷಣ ನೀತಿಯ ಅನ್ವಯ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ಹಿಂದೆ ನಾನು ಶಿಕ್ಷಣ ಸಚಿವನಾಗಿದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ” ಎಂದು ಸಭಾಧ್ಯಕ್ಷ ಕಾಗೇರಿ ರಮೇಶ್‌ಕುಮಾರ್ ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರು.

“ಈ ಹೊಸ ವಿಧೇಯಕದ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಬೇಕು. ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸುತ್ತೀರಾ, ಇಲ್ಲವಾ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಸಚಿವರನ್ನು ಪ್ರಶ್ನಿಸಿದರು.

“10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳು ಮೊದಲಿನಂತೆಯೇ ನಡೆಯಲಿವೆ. ಎರಡೂ ಪರೀಕ್ಷೆಗಳನ್ನು ಆಯಾ ನಿರ್ದೇಶಕರು ನೋಡಿಕೊಳ್ಳಲಿದ್ದಾರೆ. ಎರಡೂ ಪರೀಕ್ಷಾ ಮಂಡಳಿಗಳು ಒಂದೇ ಛತ್ರಿಯಡಿ ಕಾರ್ಯ ನಿರ್ವಹಿಸಲಿವೆ” ಎಂದರು.

“ಹಳೇ ವಿಧಾನದಿಂದ ಸಮಸ್ಯೆ ಏನಾಗಿತ್ತು” ಎಂದು ಸಚಿವರನ್ನು ಸಾ ರಾ ಮಹೇಶ್ ಪ್ರಶ್ನಿಸಿದರು. ”ಏನೂ ಬದಲಾವಣೆ ತರದೆ, ಬರೀ ಹೆಸರು ಬದಲಾವಣೆ ಮಾಡುವುದಕ್ಕೆ ಮಾತ್ರ ಒಂದು ವಿಧೇಯಕ ಮಂಡಿಸಿರುವುದು ಯಾಕೆ” ಎಂದು ಶರತ್ ಬಚ್ಚೇಗೌಡ ಮತ್ತೆ ಪ್ರಶ್ನಿಸಿದರು.

ಶರತ್ ಪ್ರಶ್ನೆಯ ನಡುವೆಯೇ ಸ್ಪೀಕರ್ ಕಾಗೇರಿ ವಿಧೇಯಕವನ್ನು ಮತಕ್ಕೆ ಹಾಕಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್