- ಬಿಎಸ್ ಯಡಿಯೂರಪ್ಪ ತ್ಯಾಗ ಮಾಡಿದ ಕ್ಷೇತ್ರಕ್ಕೆ ಭಾರಿ ಬೇಡಿಕೆ
- ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳಿಂದ ನಾನಾ ಕಸರತ್ತು
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಈಗಗಲೇ ಟಿಕೆಟ್ಗಾಗಿ ಎಂಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಅರ್ಜಿಗಳು ಬರುವ ಸಾಧ್ಯತೆ ಇದೆ.
ಕಳೆದ ಕೆಲವು ದಶಕಗಳಿಂದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆಲೆಯೂರಿದ್ದರು. ಇದೀಗ ಅವರು ಕ್ಷೇತ್ರವನ್ನು ತ್ಯಾಗ ಮಾಡಿದ್ದು, ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳು ಸಂಭವಿಸುವ ನಿರೀಕ್ಷೆ ಇದೆ. ಈ ನಡುವೆ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆಯೂ ಉಂಟಾಗಿದೆ.
ಕಾಂಗ್ರೆಸ್ ಟಿಕೆಟ್ಗಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೌಲಿ ಗಂಗಾಧರಪ್ಪ, ನಾಗರಾಜಗೌಡ, ಪುಷ್ಪಾ ಶಿವಕುಮಾರ್, ನಿರ್ಮಲಾ ಪಾಟೀಲ್, ಉಳ್ಳಿ ದರ್ಶನ್, ರಾಘವೇಂದ್ರ ನಾಯ್ಕ್, ಮಾಜಿ ಶಾಸಕ ಬಿಎನ್ ಮಹಾಲಿಂಗಪ್ಪ ಅರ್ಜಿ ಸಲ್ಲಿಸಿದ್ದಾರೆ.
ಗೋಣಿ ಮಾಲತೇಶ್ ಅವರು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿಯಾಗಿ ಬಿಎಸ್ವೈ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೂ ಕೂಡ ಪಕ್ಷದ ಕಾರ್ಯಕ್ರಮ ನಡೆಸುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? : ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಪಕ್ಷದ ಜ್ಯೋತಿಷಿ ಎಚ್ ಡಿ ರೇವಣ್ಣ ತಕರಾರು: ಕುಮಾರಸ್ವಾಮಿ
ಬಿ.ಎನ್ ಮಹಾಲಿಂಗಪ್ಪ ಅವರು ಈಗಾಗಲೇ ಬಿಎಸ್ವೈ ವಿರುದ್ಧ ಗೆದ್ದು ಶಾಸಕರಾಗಿದ್ದರು. ಪುಷ್ಪಾ ಶಿವಕುಮಾರ್ ಶಿರಾಳಕೊಪ್ಪ ಭಾಗದಲ್ಲಿ ಸರಣಿ ಸಭೆ ನಡೆಸುತ್ತಾ ಹಲವು ಗ್ರಾಮಗಳಿಗೆ ತೆರಳಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ.
ಪುರಸಭೆ ಸದಸ್ಯ ನಾಗರಾಜಗೌಡ ತಾಲೂಕಿನ ಬಹುತೇಕ ಗ್ರಾಮಗಳಿಗೆ ಭೇಟಿ ನೀಡುತ್ತಾ ಮುಖಂಡರನ್ನು ಭೇಟಿಯಾಗಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ರಾಘವೇಂದ್ರ ನಾಯ್ಕ್ ಸೌಲಭ್ಯ ವಂಚಿತರ ಪರವಾಗಿ ಫೇಸ್ಬುಕ್ ಲೈವ್, ಸುದ್ದಿಗೋಷ್ಠಿ ಸೇರಿದಂತೆ ಹಲವು ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಕೌಲಿ ಗಂಗಾಧರಪ್ಪ ಪಕ್ಷದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮತದಾರರನ್ನು ಗೆಲ್ಲಲ್ಲು ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾನಾ ಕಸರತ್ತು ನಡೆಯುತ್ತಿದ್ದು, ಮತದಾರರು ತಮ್ಮ ಕೃಪಾಕಟಾಕ್ಷವನ್ನು ಯಾರ ಮೇಲೆ ತೋರಿಸುತ್ತಾರೆಂಬುದು ಯಕ್ಷ ಪ್ರಶ್ನೆಯಾಗಿದೆ.
ನವೆಂಬರ್ 21ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕಿದೆ.