ಶಿವಮೊಗ್ಗ | ಡಿಸೆಂಬರ್ ವೇಳೆಗೆ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಬದ್ಧ: ಸಿಎಂ ಬೊಮ್ಮಾಯಿ ಭರವಸೆ

CM Basavaraj Bommai
  • 60 ವರ್ಷಗಳ ಹಿಂದೆ ಜಮೀನು ನೀಡಿದವರನ್ನು ಸ್ಮರಿಸಿದ ಸಿಎಂ ಬೊಮ್ಮಾಯಿ
  • ಈವರೆಗೆ ಅಧಿಕಾರ ನಡೆಸಿದ ಸರ್ಕಾರಗಳು ಸಮಸ್ಯೆ ಬಗೆಹರಿಸದೇ ಇರುವುದಕ್ಕೆ ಕಿಡಿ

“ಕೇಂದ್ರ ಸರ್ಕಾರದ ಅನುಮತಿ ಪಡೆದು ಡಿಸೆಂಬರ್ ಅಂತ್ಯದೊಳಗೆ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಿ ಎಲ್ಲರಿಗೂ ಹಕ್ಕುಪತ್ರ ನೀಡಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಭಾನುವಾರ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “60 ವರ್ಷಗಳ ಹಿಂದೆ ನಿಮ್ಮ ಹಿರಿಯರು ನಾಡಿಗೆ ಬೆಳಕು ನೀಡಲು ತಮ್ಮ ಆಸ್ತಿ-ಮನೆ ತ್ಯಾಗ ಮಾಡಿದ್ದರಿಂದ ಇಡೀ ಕರ್ನಾಟಕಕ್ಕೆ ಬೆಲೆ ಸಿಕ್ಕಿದೆ. ಇದನ್ನು ಯಾರೂ ಮರೆಯಬಾರದು. ಅಂದು ಶರಾವತಿ ಯೋಜನೆಗೆ ತಮ್ಮ ಫಲವತ್ತಾದ ಜಮೀನನ್ನು ಬಿಟ್ಟುಕೊಟ್ಟರು. ತಾವು ತ್ಯಾಗ ಮಾಡಿ ಸ್ಥಳಾಂತರವಾಗಿ ಬೇರೆಲ್ಲೋ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಸ್ಥಳಾಂತರವಾದಾಗ ಬದುಕು ಎಷ್ಟು ದುಸ್ತರ ಎಂಬುದು ಎಲ್ಲರಿಗೂ ಗೊತ್ತಿದೆ" ಎಂದು ಸ್ಮರಿಸಿದರು.

Eedina App

“60 ವರ್ಷ ಆಡಳಿತ ನಡೆಸಿದ ಸರ್ಕಾರಗಳಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಅವಕಾಶಗಳು ಇದ್ದರೂ ಸಾಧ್ಯವಾಗದೆ ಇರುವುದು ಆಶ್ಚರ್ಯಕರ ಮತ್ತು ನೋವಿನ ಸಂಗತಿ. ಸಮಸ್ಯೆಯಾಗಿರುವ ಅರಣ್ಯ ಕಾಯ್ದೆ ಜಾರಿಯಾಗಿರುವುದು 1978ರಲ್ಲಿ. ಇಲ್ಲಿ ಜಲಾಶಯ ಕಟ್ಟಿ ಜನರನ್ನು ಸ್ಥಳಾಂತರ ಮಾಡಿರುವುದು ಅದಕ್ಕೂ ಎರಡು ದಶಕ ಮುಂಚೆ. ಅಂದರೆ, ಕೇಂದ್ರ ಸರ್ಕಾರದ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವ ಮುನ್ನವೇ ಈ ಸಮಸ್ಯೆ ಪರಿಹರಿಸಬಹುದಾಗಿತ್ತು" ಎಂದು ಹೇಳಿದರು.

"1978ಕ್ಕಿಂತ ಮುಂಚೆ ಅಂದಿನ ಕೇಂದ್ರ ಸರ್ಕಾರ ನಿಮ್ಮ ರಾಜ್ಯಗಳಿಗೆ ಗುರುತಿಸಲ್ಪಟ್ಟ ಅರಣ್ಯ ಭೂಮಿ ಯಾವುದು? ರಕ್ಷಿತಾರಣ್ಯ ಯಾವುದು? ವನ್ಯಜೀವಿ ಅರಣ್ಯ ಯಾವುದು? ಎಂಬುದನ್ನು ಗುರುತಿಸಿ ವರದಿ ಸಲ್ಲಿಸಿ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿತ್ತು. ಅಂದು ಸರ್ವೇ ಮಾಡಿದ ಸಂದರ್ಭದಲ್ಲಿ, ಶರಾವತಿ ಯೋಜನೆ ಸಲುವಾಗಿ ಬಿಟ್ಟುಕೊಟ್ಟಿರುವ ಭೂಮಿಯನ್ನು ಬಿಟ್ಟು ಅರಣ್ಯ ಪ್ರದೇಶವನ್ನು ಘೋಷಣೆ ಮಾಡುವ ಅವಕಾಶ ಇತ್ತು. ಆಗಿನ ಸರ್ಕಾರಗಳು ಆ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ" ಎಂದರು.

AV Eye Hospital ad

"ಆ ಬಳಿಕ, ಆಕ್ಷೇಪಣೆಗಳು ಸಲ್ಲಿಕೆಯಾದಾಗ ಮತ್ತೊಮ್ಮೆ ಯಾವುದಾದರೂ ಬಿಟ್ಟು ಹೋಗಿದ್ದರೆ ಮರು ಸರ್ವೇ ಮಾಡಿಕೊಡಿ ಎಂದು 1978ರಿಂದ 1980ರ ವರೆಗೂ ಅವಕಾಶ ನೀಡಲಾಗಿತ್ತು. ಆವಾಗಲೂ ನ್ಯಾಯ ಸಿಗಲಿಲ್ಲ. ಹೀಗೆ ಮೂರು ಬಾರಿ ಅವಕಾಶಗಳನ್ನು ತಪ್ಪಿಸಲಾಗಿದೆ" ಎಂದು ಬೊಮ್ಮಾಯಿ ಹಿಂದಿನ ಸರ್ಕಾರಗಳ ಲೋಪಗಳ ಬಗ್ಗೆ ಬೊಟ್ಟುಮಾಡಿದರು.

"ಮುಂದೆ ಬಂದ ಸರ್ಕಾರಗಳು ಕೇಂದ್ರದ ಅನುಮತಿ ಪಡೆದು ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಲಿಲ್ಲ. ಸಂತ್ರಸ್ತರು ಸಮಸ್ಯೆಯೊಂದಿಗೇ ಜೀವಿಸುವಂತೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಒಂದೇ ಸಮಸ್ಯೆ ಇಟ್ಟುಕೊಂಡು ಎಷ್ಟು ಬಾರಿ ರಾಜಕೀಯ ಲಾಭ ಪಡೆಯುತ್ತೀರಿ?" ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

"ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಕೇಂದ್ರದ ಅನುಮತಿ ಪಡೆಯದೇ ಶರಾವತಿ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮಾಡಿದ್ದ ಅರಣ್ಯ ಭೂಮಿ ಮಂಜೂರಾತಿಯನ್ನು ಈಗ ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮುಳುಗಡೆ ಸಂತ್ರಸ್ತ ಕುಟುಂಬಗಳು ನೆಲೆಕಂಡುಕೊಂಡಿರುವ 24 ಸಾವಿರ ಎಕರೆ ಭೂಮಿ ಅತಂತ್ರವಾಗಿವೆ" ಎಂದರು.

ಈ ಸುದ್ದಿ ಓದಿದ್ದೀರಾ? ಕಾಡಾನೆ ದಾಳಿ ಪರಿಹಾರ ದುಪ್ಪಟ್ಟು| ಮೃತಪಟ್ಟರೆ 15 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

"ನಮ್ಮ ಸರ್ಕಾರ ಈಗಾಗಲೇ ಪ್ರಕ್ರಿಯೆ ಶುರು ಮಾಡಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಿಯೋಗ ಹೋಗಿ ಕೇಂದ್ರ ಅರಣ್ಯ ಸಚಿವ ಭುಪೇಂದ್ರ ಯಾದವ್‌ ಅವರಿಗೆ ಮನವಿ ಸಲ್ಲಿಸಿದೆ. 'ಸರ್ವೆ ಕಾರ್ಯ ಪೂರ್ಣಗೊಳಿಸಿಕೊಂಡು ಬನ್ನಿ ನಮ್ಮಿಂದಾದ ಸಹಕಾರ ಮಾಡುತ್ತೇವೆ' ಎಂದು ಭರವಸೆ ನೀಡಿದ್ದಾರೆ. ಸರ್ವೆ ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ ನಾನೇ ಮತ್ತೊಮ್ಮೆ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ" ಎಂದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಎದುರು ಶರಾವತಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು.

ಬಿಜೆಪಿ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಕೆ ಸಿ ನಾರಾಯಣ ಗೌಡ, ಬೈರತಿ ಬಸವರಾಜ್ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app