
- ಅರ್ಕಾವತಿ ಹಗರಣದ ತನಿಖೆಗೆ ಮುಂದಾದರೆ ಸಿದ್ದರಾಮಯ್ಯ ಅವರಿಗೇಕೆ ಸಿಟ್ಟು
- ಡಿ ಕೆ ಶಿವಕುಮಾರ್ ತಿಹಾರ್ ಜೈಲಿಗೆ ಯಾಕೆ ಹೋಗಿ ಬಂದರು ಎಂದು ಸ್ಪಷ್ಟಪಡಿಸಲಿ
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಕೂಡಲೇ ಭರ್ತಿ ಮಾಡಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಚುನಾವಣೆ ಹಿನ್ನೆಲೆಯಲ್ಲಿ ಕೂಡಲೇ ಕ್ಯಾಬಿನೆಟ್ ವಿಸ್ತರಣೆ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗಮನ ಹರಿಸಬೇಕು” ಎಂದು ಒತ್ತಾಯಿಸಿದರು.
"ಕುಲಶಾಸ್ತ್ರ ಅಧ್ಯಯನ ಬಳಿಕ ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವ ವಿಚಾರವಾಗಿ ತೀರ್ಮಾನ ಮಾಡಲಾಗುವುದು. ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುವ ವಿಶ್ವಾಸವಿದೆ" ಎಂದರು.
ಡಿಕೆಶಿ ಬೇಲ್ಮೇಲೆ ಹೊರಗಿದ್ದಾರೆ
"ಡಿ ಕೆ ಶಿವವಕುಮಾರ್ ಅವರು ತಿಹಾರ್ ಜೈಲಿಗೆ ಯಾಕೆ ಹೋಗಿ ಬಂದರು ಎಂಬುದನ್ನು ರಾಜ್ಯದ ಜನರ ಮುಂದೆ ಉತ್ತರ ಕೊಡಬೇಕು. ಡಿ ಕೆ ಶಿವಕುಮಾರ್ ಮತ್ತು ಸಹೋದರರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ದೇಣಿಗೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಎಷ್ಟೋ ಜನ ದೇಣಿಗೆ ಕೊಟ್ಟಿರಬಹುದು. ಆದರೆ, ಡಿಕೆಶಿ ಸಹೋದರರು ರಾಜ್ಯದ ಜನರ ಮುಂದೆ ಸ್ಪಷ್ಟಪಡಿಸಲಿ" ಎಂದು ಆಗ್ರಹಿಸಿದರು.
"ಸಿಬಿಐ, ಲೋಕಾಯುಕ್ತ, ಇ.ಡಿ. ರೀತಿಯ ತನಿಖಾ ಸಂಸ್ಥೆಗಳು ಅವರ ಅಂಗಡಿ, ಮನೆಗಳ ಮೇಲೆ ದಾಳಿ ಮಾಡಿದಾಗ ನೂರಾರು ಕೋಟಿ ಅಕ್ರಮ ಹಣ ಸಿಕ್ಕಿದ್ದನ್ನೂ ಟಿವಿಗಳಲ್ಲಿ ನೋಡಿದ್ದೇವೆ. ಅದೇ ರೀತಿ ಅಕ್ರಮ ದಾಖಲೆಗಳು ಸಾಕಷ್ಟು ಸಿಕ್ಕಿವೆ. ತನಿಖಾ ಸಂಸ್ಥೆಗಳು ದಾಳಿಯನ್ನೆ ಮಾಡಬಾರದಾ? ಅವರು ಅಕ್ರಮ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಬಿಡಬೇಕಾ? ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಬೇಕು" ಎಂದು ಅವರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ ಯಾತ್ರೆ | ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಎಕ್ಸ್ಪ್ರೆಸ್ ಹೆಸರು ಬದಲಿಸಿದ್ದರೆ ಹಿಂಪಡೆಯಲಿ: ಜಿ ಪರಮೇಶ್ವರ್ ಆಗ್ರಹ
ಸಿದ್ದರಾಮಯ್ಯ ಅವರಿಗೇಕೆ ಸಿಟ್ಟು?
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ತನಿಖೆಗೆ ಮುಂದಾದರೆ ಸಿದ್ದರಾಮಯ್ಯ ಅವರಿಗೆ ಏಕೆ ಸಿಟ್ಟು ಗೊತ್ತಿಲ್ಲ. ಇಷ್ಟು ವರ್ಷ ಯಾಕೆ ಮಾಡಲಿಲ್ಲ ಎಂಬ ಬಂಡ ವಾದ ಮಾಡುವುದು ಸರಿಯಲ್ಲ. ಅರ್ಕಾವತಿ ಹಗರಣದ ವಿಚಾರದಲ್ಲಿ ಬೇಕಾದ ತನಿಖೆ ಮಾಡಲಿ, ನಾನು ಸಿದ್ಧನಿದ್ದೇನೆ" ಎಂದು ಅವರು ಹೇಳಲಿ ಎಂದರು.