ಸಿದ್ದರಾಮಯ್ಯ75| ಒಗ್ಗಟ್ಟಿನ ಮಂತ್ರದ ಜೊತೆ ಸಾಮೂಹಿಕ ನಾಯಕತ್ವದ ಜಪ ಮಾಡಿದ ಡಿ ಕೆ ಶಿವಕುಮಾರ್

  • ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದೇ ನಮ್ಮ ಗುರಿ
  • ಸಿದ್ಧರಾಮಯ್ಯ ಕೇವಲ ಹಿಂದುಳಿದವರ ನಾಯಕ ಅಲ್ಲ

“ದೇಶಕ್ಕೆ ರಾಹುಲ್ ಗಾಂಧಿ ಮತ್ತು ರಾಜ್ಯಕ್ಕೆ ಕಾಂಗ್ರೆಸ್. ಈ ಬಾರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸೋಣ. ಒಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ನಮ್ಮ ಮುಖ್ಯ ಗುರಿ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ನೀಡಿದರು.

ದಾವಣಗೆರೆಯ ಎಸ್ ಎಸ್ ಮೈದಾನದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ನಾವೆಲ್ಲರೂ ಸಿದ್ಧರಾಮಯ್ಯ ಮುಂದಾಳತ್ವದಲ್ಲಿ ಕೆಲಸ ಮಾಡೋಣ. ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸೋಣ” ಎಂದರು.

“ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ತುಂಬಿದೆ. ಹಾಗೇ ನಮ್ಮ ನಾಯಕ ಸಿದ್ಧರಾಮಯ್ಯ ಅವರ 75ನೇ ಹುಟ್ಟುಹಬ್ಬ ಕೂಡ. ಹೀಗಾಗಿ ದೇಶಕ್ಕೂ ಸಂಭ್ರಮ, ಕಾಂಗ್ರೆಸ್ ಗೂ ಸಂಭ್ರಮ. ನಮ್ಮ ಉದ್ದೇಶ ರಾಜ್ಯಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಕಾಂಗ್ರೆಸ್ ಶಕ್ತಿಯೇ ದೇಶಕ್ಕೆ ಶಕ್ತಿ” ಎಂದು ಹೇಳಿದರು. 

“2013ರಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಅವರು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯರನ್ನು ನೇಮಿಸಿದ್ದರು. ಬಸವ ಜಯಂತಿ ದಿನ ಮುಖ್ಯಮಂತ್ರಿಯಾಗಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸಿದ್ಧರಾಮಯ್ಯ ಅವರ ಆಡಳಿತ ನೋಡಿದ್ದೇವೆ. ಬಸವಣ್ಣ ಅವರ ತತ್ವವೇ ಕಾಂಗ್ರೆಸ್ ತತ್ವವಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಮೆಲುಕು ಹಾಕಲು ನಾವು ಇಲ್ಲಿ ಸೇರಿದ್ದೇವೆ. ಸಿದ್ಧರಾಮೋತ್ಸವ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಸಂತೋಷಪಟ್ಟೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳು” ಎಂದರು.

ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ 75| ಹಿಂದೂ ವಿರೋಧಿಗಳ ಹಬ್ಬವಷ್ಟೇ ಅಲ್ಲ, ಹಿಂದೂ ವಿರೋಧಿಗಳ ಉರುಸ್: ಬಿಜೆಪಿ ಕಿಡಿ

“ಕೃಷಿ ಭಾಗ್ಯ, ರಸ್ತೆ, ಕೈಗಾರಿಕೆ, ನೀರಾವರಿಯಲ್ಲಿ ಮಾಡಿದ ಕೆಲಸ, ವಿಶ್ವದಲ್ಲಿಯೇ ದೊಡ್ಡ ಸೋಲರ್ ಪಾರ್ಕ್, ಅನ್ನಭಾಗ್ಯ ಸೇರಿ ಹಲವು ಜನರ ಯೋಜನೆ ಜಾರಿಗೆ ತಂದರು. ಅದಕ್ಕೆಲ್ಲಾ ಸಿದ್ದರಾಮಯ್ಯ ಅವರ ನಾಯಕತ್‌ ಕಾರಣ. ಅವರ ಆಡಳಿತದಲ್ಲಿ ಅಂತಹ ಸಾಧನೆಗಳನ್ನು ಮಾಡಲಾಯಿತು ಮತ್ತು ಅವೆಲ್ಲವೂ ರಾಜ್ಯದ ಜನರ ಹಿತಚಿಂತನೆಯ ಯೋಜನೆಗಳು. ಹಾಗಾಗಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಜನಪರ ಕೆಲಸಗಳನ್ನು ಮನವರಿಕೆ ಮಾಡಿ, ಈಗಿನ ಭ್ರಷ್ಟ ಸರ್ಕಾರದ ಜನವಿರೋಧಿ ನೀತಿಗಳನ್ನು ಸಾರಿ ಈ ಸರ್ಕಾರವನ್ನು ಕಿತ್ತು ಹಾಕಬೇಕು" ಎಂದು ಡಿ ಕೆ ಶಿವಕುಮಾರ್‌ ಕರೆ ನೀಡಿದರು.

“ಎಲ್ಲಾ ವರ್ಗದವರು ಸಂಘಟಿಸುವ ಕೆಲಸ ಮಾಡಬೇಕು. ಸಿದ್ಧರಾಮಯ್ಯ ಅವರನ್ನು ಕೇವಲ ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸಬೇಡಿ. ಸಿದ್ಧರಾಮಯ್ಯ ಕೇವಲ ಹಿಂದುಳಿದ ನಾಯಕ ಅಲ್ಲ. ಅವರು ಸರ್ವಜನಾಂಗ, ಸರ್ವಧರ್ಮಕ್ಕೂ ನಾಯಕ. ದೇವರು ಸಿದ್ದರಾಮಯ್ಯ ಅವರಿಗೆ ಉತ್ತಮ ಆರೋಗ್ಯ, ಈ ರಾಜ್ಯಕ್ಕೆ ಗರಿಷ್ಠ ಸೇವೆ ನೀಡುವ ಶಕ್ತಿ ನೀಡಲಿ" ಎಂದು ಡಿ ಕೆ ಶಿವಕುಮಾರ್ ಸಿದ್ದರಾಮಯ್ಯ ಅವರಿಗೆ ಶುಭಕೋರಿದರು.

ತಮ್ಮ ಮಾತಿಗೆ ಮುನ್ನ ಸಿದ್ದರಾಮಯ್ಯ ಅವರಿಗೆ ಶಾಲು ಹೊದೆಸಿ, ಇಂದಿರಾಗಾಂಧಿಯವರ ಕುರಿತ ಪುಸ್ತಕವನ್ನು ಉಡುಗೊರೆ ನೀಡಿ ಅಭಿನಂದಿಸಿದ ಡಿ ಕೆ ಶಿವಕುಮಾರ್‌, ಸಿದ್ದರಾಮಯ್ಯ ಅವರನ್ನು ಅಪ್ಪಿ, ಅವರ ಕೈಹಿಡಿದೆತ್ತಿ ವಿಜಯದ ಸಂಕೇತ ತೋರಿಸಿ ಒಗ್ಗಟ್ಟಿನ ಸಂದೇಶ ರವಾನಿಸಿದರು. ತಮ್ಮ ಇಬ್ಬರೂ ನಾಯಕರು ಪರಸ್ಪರ ಒಂದಾಗಿ ಒಗ್ಗಟಿನ ಸಂದೇಶ ನೀಡಿದ್ದು ನೆರೆದ ಲಕ್ಷಾಂತರ ಕಾರ್ಯಕರ್ತರ ಹರ್ಷೋದ್ಗಾರಕ್ಕೆ ಕಾರಣವಾಯಿತು.

ನಿಮಗೆ ಏನು ಅನ್ನಿಸ್ತು?
0 ವೋಟ್