ಈ ದಿನ ವಿಶೇಷ| ಕಾಂಗ್ರೆಸ್ ಉತ್ಸವವಾಗಿ ಬದಲಾದ ಸಿದ್ದರಾಮಯ್ಯ ಅಮೃತ ಮಹೋತ್ಸವದ ಹಕೀಕತ್ತು ಏನು?

ಅಮೃತ ಮಹೋತ್ಸವದ ಹೆಸರಿನಲ್ಲಿ ಮುಂದಿನ ಸಿಎಂ ವಿವಾದ ಬಗೆಹರಿಸಿದ ರಾಹುಲ್ ಗಾಂಧಿ, ಸಿದ್ದರಾಮಯ್ಯನವರ ಜನನಾಯಕತ್ವಕ್ಕೂ ಡಿ ಕೆ ಶಿವಕುಮಾರ್ ಅವರ ಪಕ್ಷ ಸಂಘಟನೆಗೂ ಸಿಗಬೇಕಾದ ಗೌರವ ಸಲ್ಲಿಸುವ ಕಾರ್ಯ ಮಾಡಿದ್ದಾರೆ. ಜೊತೆಗೆ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಾತಿನಂತೆ ನಡೆದುಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಇಬ್ಬರೂ ನಾಯಕರ ಹೆಗಲಿಗೇರಿಸಿದ್ದಾರೆ.

ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವ ಕರ್ನಾಟಕದ ರಾಜಕೀಯ ರಂಗದಲ್ಲಿ ಹೊಸ ಇತಿಹಾಸ ಬರೆದಾಗಿದೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಎಳೆದ ಸಿದ್ದರಾಮೋತ್ಸವದ ತೇರು ರಾಜ್ಯ ಕಾಂಗ್ರೆಸ್ ಪಕ್ಷದ ಮುಂದಿನ ದಿನಗಳ ಭವಿಷ್ಯ ಹೇಳಿದೆ.

ಅಮೃತ ಮಹೋತ್ಸವದ ವೇದಿಕೆ ಮೇಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಜನ್ಮ ದಿನ ಆಚರಿಸಿಕೊಂಡ ಸಿದ್ದರಾಮಯ್ಯ ಜೋಡೆತ್ತಿನಂತೆ ಅಭಿಮಾನಿಗಳೆದರು ಕೈಕೈ ಬೆಸೆದು ನಿಂತು, ಆಲಿಂಗಿಸಿಕೊಂಡದ್ದು ವಿರೋಧಿಗಳನ್ನೂ ಒಳಗೊಂಡಂತೆ ಇಡೀ ರಾಜ್ಯಕ್ಕೆ ಸ್ಪಷ್ಟ ಸಂದೇಶವೊಂದು ರವಾನಿಸಿದೆ. ಅದರ ಪ್ರಕಾರ ಜನನಾಯಕನಾಗಿ ಸಿದ್ದರಾಮಯ್ಯ, ಜನ ಸಂಘಟಕನಾಗಿ ಡಿ ಕೆ ಶಿವಕುಮಾರ್ ಹೊರ ಹೊಮ್ಮಿದ್ದಾರೆ.

ಇಂತಹದ್ದೊಂದು ಸ್ಪಷ್ಟ ಸಂದೇಶ ಭರಿತ ಕರುನಾಡಿನ ʼಕೈʼ ಭವಿಷ್ಯವಾಣಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಚ್ಚುಕಟ್ಟಾಗಿ ಬರೆಯಿಸಿ ವೇದಿಕೆ ಮೇಲೆ ಪ್ರದರ್ಶಿಸಿದೆ. ಎಲ್ಲವೂ ಅಂದುಕೊಂಡಂತೆ ಅಚ್ಚುಕಟ್ಟಾಗಿ ನಡೆಯಿತು ಎನ್ನುವ ಕೊನೆಯ ಘಟ್ಟದಲ್ಲಿ, ಕಾಂಗ್ರೆಸ್ ದಿಗ್ಗಜರಿಬ್ಬರು ಒಗ್ಗಟ್ಟು ಪ್ರದರ್ಶಿಸಿದ ಹೈಕಮಾಂಡ್ ನಿರ್ದೇಶನದ ಮೇರೆಗೆ ಎನ್ನುವುದೂ ಈಗ ಬಿಜೆಪಿ ಟ್ರೋಲ್ ರೂಪದಲ್ಲಿ ದಾಖಲಾಗಿದೆ.

ಹೌದು.. ಕಾಂಗ್ರೆಸ್ ಎಂದಿಗೂ ಹೈಕಮಾಂಡ್ ನಿರ್ದೇಶಿತ ಪಕ್ಷವೇ. ಅಲ್ಲಿನ ನಿರ್ಧಾರವೇ ಅಂತಿಮ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ರಾಜ್ಯದ ವಿಚಾರದಲ್ಲಿ ಈ ಮಾತನ್ನು ಸಿದ್ದರಾಮಯ್ಯ ಕೊಂಚ ತಮ್ಮತ್ತ ವಾಲಿಸಿಕೊಂಡು, ಸ್ವಂತಕ್ಕೂ ಪಕ್ಷಕ್ಕೂ ಲಾಭವಾಗುವಂತೆ ನಡೆದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಹೈಕಮಾಂಡ್ ನೀತಿಯನ್ನು ಮಾರ್ಪಡಿಸಿದ್ದಾರೆ. 
ಒಂದರ್ಥದಲ್ಲಿ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನಡುವಿನ ತಾಳಮೇಳ ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ ಎನ್ನುವಂತಾಗಿದೆ.

Image

ಸಿದ್ದರಾಮಯ್ಯ ಅಮೃತ ಮಹೋತ್ಸವದ ಅಸಲಿಯತ್ತು…
ಆರಂಭದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಸಿದ್ದರಾಮಯ್ಯ ಅವರಿಗಾಗಿ ಮಾಡುವ ಕಾರ್ಯಕ್ರಮ ಸಿದ್ದರಾಮೋತ್ಸವ ಎಂದಾಗಿತ್ತು. ಹೀಗಾಗಿ ಅದು ಕೇವಲ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಎನ್ನುವ ಮಾತು ಕೇಳಿ ಬಂದಿತ್ತು. ಅದೇ ವಿಚಾರ ಪಕ್ಷಾಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಪರೋಕ್ಷ ವೈಮಸ್ಸಿಗೆ ಕಾರಣವಾಗಿತ್ತು.

ಕಾರ್ಯಕ್ರಮದ ಅಂತಿಮ ಸಿದ್ಧತೆಯ ಹೊತ್ತಿಗೆ ಆಯೋಜಕರ ನಿರೀಕ್ಷೆ ಮೀರಿ ಸಮಾರಂಭಕ್ಕೆ ಜನಸಾಗರ ಸೇರುವ ವಿಚಾರ ಶಿವಕುಮಾರ್ ಅವರಿಗೆ ತಲುಪಿತ್ತು. ಅಲ್ಲಿಯವರೆಗೆ ಕೇವಲ ಸಿದ್ದರಾಮಯ್ಯ ಬೆಂಬಲಿಗರ ಬಾಯಿಮುಚ್ಚಿಸುವ ಕೆಲಸ ಮಾಡುತ್ತಿದ್ದ ಶಿವಕುಮಾರ್ ಈ ಮಾಹಿತಿಯನ್ನು ಹೈಕಮಾಂಡ್ ವಲಯಕ್ಕೆ ತಲುಪಿಸಿಬಿಟ್ಟರು. ಆ ಮಾಹಿತಿ ದೆಹಲಿ ತಲುಪುತ್ತಲೇ ಅಲ್ಲಿಯವರೆಗೂ ಸಿದ್ದರಾಮಯ್ಯ ಸ್ವಂತಕ್ಕೆ ಎಂದಿದ್ದ ಕಾರ್ಯಕ್ರಮ ಆ ಬಳಿಕ ಕಾಂಗ್ರೆಸ್ ಕಾರ್ಯಕ್ರಮವಾಗಿ ಬದಲಾಯಿತು.

ಇದಕ್ಕೂ ಮೊದಲು ತಮ್ಮ ಕ್ಷೇತ್ರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಭೇಟಿ ಮಾಡಿ ಅದಕ್ಕೆ ಒಪ್ಪಿಗೆ ಪಡೆಯಲು ಹೋಗಿದ್ದ ಸಿದ್ದರಾಮಯ್ಯ, ಇದೇ ವೇಳೆ ತಮ್ಮ ಜನ್ಮದಿನದ ಕಾರ್ಯಕ್ರಮಕ್ಕೆ ಬರುವಂತೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸಿದ್ದರು. ಆರಂಭದಲ್ಲಿ ಇದಕ್ಕೆ ನೋಡೋಣ ಎಂದು ರಾಹುಲ್ ಹೇಳಿದ್ದರಂತೆ. ಆದರೆ ಡಿ ಕೆ ಶಿವಕುಮಾರ್ ಯಾವಾಗ ಅಮೃತ ಮಹೋತ್ಸವ ಜನೋತ್ಸವವಾಗಿ ಬದಲಾಗುತ್ತದೆ ಎನ್ನುವ ಮಾಹಿತಿ ನೀಡಿದರೋ ಆ ಕ್ಷಣಕ್ಕೆ ತಮ್ಮ ನಿಲುವು ಬದಲಿಸಿದ ರಾಹುಲ್ ಗಾಂಧಿ ಅದರ ಪೂರ್ವತಯಾರಿಗಾಗಿ ಕೆಸಿ ವೇಣುಗೋಪಾಲ್ ಅವರನ್ನು ಖಾಸಗಿಯಾಗಿ ಬೆಂಗಳೂರಿಗೆ ಕಳುಹಿಸಿ ಮಾಹಿತಿ ಕಲೆ ಹಾಕುವಂತೆ ಹೇಳಿದರು.

ಸಿದ್ದರಾಮಯ್ಯ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಕೆಸಿ ವೇಣುಗೋಪಾಲ್ ಡಿಕೆಶಿ ಹೇಳಿದ ಇಲ್ಲಿನ ವಾಸ್ತವದ ಜೊತೆಗೆ ತಮ್ಮ ಗೆಳೆತನಕ್ಕೂ ಒಳಿತಾಗುವಂತೆ ರಾಹುಲ್ ಗಾಂಧಿಗೆ ವರದಿ ನೀಡಿ ಇದನ್ನೇ ಪಕ್ಷದ ಕಾರ್ಯಕ್ರಮವನ್ನಾಗಿಸಲು ಸಲಹೆ ನೀಡಿದರು. ಇದಾದ ಬಳಿಕ ಪಕ್ಷಕ್ಕೆ ಒಳಿತಾಗುವುದಾದರೆ ನಾನು ಕಾರ್ಯಕ್ರಮಕ್ಕೆ ಬರಲು ಸಿದ್ಧ ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯಗೆ ಸಂದೇಶ ಕಳುಹಿಸಿದರು. ಅಲ್ಲಿಂದ ಮುಂದೆ ಸಿದ್ದರಾಮೋತ್ಸವ, ಸಿದ್ದರಾಮಯ್ಯ ಅಮೃತ ಮಹೋತ್ಸವ ಎಂದು ಬದಲಾಗಿದ್ದು ಈಗ ಇತಿಹಾಸ.

Image

ಷರತ್ತನ್ನಿಟ್ಟು ಭಾವೀ ಸಿಎಂ ಭವಿಷ್ಯ ಅಂತಿಮಗೊಳಿಸಿದ ಹೈಕಮಾಂಡ್ 
ಕಾರ್ಯಕ್ರಮಕ್ಕೆ ಬರುವುದನ್ನು ಅಂತಿಮಗೊಳಿಸಿದ ಬಳಿಕ ದೆಹಲಿಗೆ ಬಂದ ಡಿಕೆ ಶಿವಕುಮಾರ್ ಅವರ ಜೊತೆ ಮಹತ್ವದ ಚರ್ಚೆಯೊಂದನ್ನ ರಾಹುಲ್ ಗಾಂಧಿ ನಡೆಸಿದ್ದಾರೆ. ಮುಂದಿನ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ನೀವು ಇಬ್ಬರೂ ಮನಸ್ತಾಪ ಬಿಟ್ಟು ನಡೆದುಕೊಳ್ಳಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಇಬ್ಬರಿಗೂ ಸಮಾನ ಅವಕಾಶ ಕಲ್ಪಸಿಕೊಡುವ ಯೋಚನೆ ನಮಗಿದೆ. ಇದಕ್ಕೆ ನೀವು ಬದ್ಧರಾಗಬೇಕು ಎಂದು ತಿಳಿಸಿದ್ದಾರೆ.

ಈ ವೇಳೆ ಶಿವಕುಮಾರ್ ಎದುರು ವಾಸ್ತವ ರಾಜಕೀಯ ಲೆಕ್ಕಾಚಾರಗಳನ್ನು, ಸಿದ್ದರಾಮಯ್ಯ ವರ್ಚಸ್ಸು ಮತ್ತು ಪಕ್ಷಕ್ಕಾಗುವ ಲಾಭದ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನಿಮ್ಮ ವಿಚಾರದಲ್ಲಾಗುವ ತೊಡಕಿನ ಬಗ್ಗೆಯೂ ಯೋಚಿಸಿ ನೋಡಿ ಎಂದು ಹೇಳಿದ್ದಾರೆ. ಮೊದಲು ರಾಹುಲ್ ಪ್ರಸ್ತಾಪಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಶಿವಕುಮಾರ್ ಅವರಿಗೆ ಅವರಿಗೆ ಇಡಿ, ಐಟಿ ಮತ್ತಿತರ ಮತ್ತಿತರೆ ಕಾನೂನು ಸಂಕಷ್ಟಗಳಿರುವುದನ್ನು ಮನವರಿಕೆ ಮಾಡಿಕೊಟ್ಟ ರಾಹುಲ್ ಗಾಂಧಿ ಇವೆಲ್ಲನ್ನೂ ಮುಂದಿಟ್ಟುಕೊಂಡು ಪಕ್ಷ ಅವರ ಹೆಸರನ್ನು ಘೋಷಿಸಲಾಗದ ಸ್ಥಿತಿಯಲ್ಲಿರುವ ಮನವರಿಕೆ ಮಾಡಿಕೊಟ್ಟರು.

ಇವೆಲ್ಲವನ್ನೂ ಒಪ್ಪಿಕೊಂಡ ಬಳಿಕವೂ ಇಲ್ಲಿಯವರೆಗೆ ಮಾಡಿದ ಪಕ್ಷ ಸಂಘಟನೆ ಕಾರ್ಯ, ಅಧ್ಯಕ್ಷ ಪದವಿಯ ಗೌರವಕ್ಕಾದರೂ ಅವಕಾಶ ನೀಡುವಂತೆ ಶಿವಕುಮಾರ್ ರಾಹುಲ್ ಗಾಂಧಿ ಬಳಿ ಕೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ರಾಹುಲ್ ಗಾಂಧಿ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ನಂತರ ನಿಮಗೂ ಅವಕಾಶ ಕೊಡಿಸುತ್ತೇವೆ ಎಂಬ ಭರವಸೆಯನ್ನು ನೀಡಿ ಸಮಾಧಾನ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಸಿದ್ದರಾಮಯ್ಯ75| ಶುಭಾಶಯ ಕೋರದೆ ಸೌಜನ್ಯ ಮರೆತರೇ ವಿರೋಧ ಪಕ್ಷಗಳ ಘಟಾನುಘಟಿಗಳು?

ನಂತರ ಇದೇ ವಿಚಾರವನ್ನು ಸಿದ್ದರಾಮಯ್ಯ ಜೊತೆಗೂ ಚರ್ಚಿಸಿದ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ಗೂ ಒಂದಷ್ಟು ಅವಧಿಗೆ ಅಧಿಕಾರ ನೀಡಲು ಸಿದ್ಧರಾಗುವಂತೆ ತಿಳಿಸಿದ್ದಾರೆ. ಇಲ್ಲೂ ಶಿವಕುಮಾರ್ ಮಾದರಿಯಲ್ಲೇ ಮೊದಲು ಈ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ ಪೂರ್ಣಾವಧಿಯ ಬೇಡಿಕೆಯನ್ನಿಟ್ಟಿದ್ದಾರೆ. ಈ ವೇಳೆ ಪಕ್ಷಕ್ಕಾಗಿ ಶಿವಕುಮಾರ್ ತೆಗೆದುಕೊಂಡ ಸವಾಲು ಅವನ್ನು ಜಯಿಸಿದ ರೀತಿ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ತಮ್ಮ ಬೇಡಿಕೆ ಸಡಿಲಗೊಳಿಸಲು ಕೇಳಿಕೊಂಡಿದ್ದಾರೆ.

ಸಿದ್ದರಾಮಯ್ಯ ಇದಕ್ಕೊಪ್ಪದ್ದಿದ್ದಾಗ ಹೈಕಮಾಂಡ್ ಸೂತ್ರ ಉರುಳಿಸಿದ ರಾಹುಲ್, ಮೊದಲ ಅವಧಿಗೆ ನಿಮ್ಮನ್ನೇ ಮುಖ್ಯಮಂತ್ರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೇ ಬಯಸಿದ್ದ ಸಿದ್ದರಾಮಯ್ಯ ಈ ಪ್ರಸ್ತಾಪ ಒಪ್ಪಿಕೊಂಡು ಸಿದ್ದರಾಮೋತ್ಸವನ್ನು ಕಾಂಗ್ರೆಸ್ ಉತ್ಸವವನ್ನಾಗಿಸಲು ಸಹಮತ ನೀಡಿದ್ದಾರೆ. ಈ ಸಂದರ್ಭವನ್ನೇ ಸಮರ್ಥವಾಗಿ ಬಳಸಿಕೊಂಡ ರಾಹುಲ್ ಗಾಂಧಿ ಇಬ್ಬರೂ ನಾಯಕರಿಗೂ ಈ ವಿಚಾರ ತಿಳಿಸಿ ಪಕ್ಷ ಸಂಘಟನೆಗೆ ಒಗ್ಗಟ್ಟಿನ ಮಂತ್ರ ಪಠಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯಗತಾಯ ಪ್ರಯತ್ನಿಸುವಂತೆ ಹೇಳಿದ್ದಾರೆ.

Image

ಅಮೃತ ಮಹೋತ್ಸವದ ಹಿಂದಿನ ದಿನ ನಡೆದಿದ್ದೇನು? 
ಹೈಕಮಾಂಡ್ ವಲಯದಲ್ಲಿ ಸಿಹಿ ವಿಚಾರ ಪಡೆದುಕೊಂಡು ಬಂದ ನಾಯಕರಿಬ್ಬರೂ ಅಮೃತ ಮಹೋತ್ಸವ ಸಮಾರಂಭದ ಹಿಂದಿನ ದಿನ ಪಕ್ಷದ ಇತರ ನಾಯಕರುಗಳಿಗೆ ಈ ವಿಚಾರ ತಿಳಿಸಲು ರಾಜಕೀಯ ಕಮಿಟಿ ಸಭೆ ಹೆಸರಿನಲ್ಲಿ ಕಾರ್ಯಕ್ರಮವೊಂದನ್ನು ರೂಪಿಸುತ್ತಾರೆ. ಇಲ್ಲಿ ಮೊದಲೇ ನಿರ್ಧಾರವಾದ ವಿಚಾರಗಳ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಿದ ರಾಹುಲ್ ಗಾಂಧಿ ವೇದಿಕೆ ಮೇಲೆ ಇಬ್ಬರೂ ಹೇಗಿರಬೇಕು ಎಂಬುದರ ಪೂರ್ಣ ನಿರ್ದೇಶನ ನೀಡಿ ಮುನ್ನಡೆಯಲು ಸೂಚಿಸುತ್ತಾರೆ.

ಇದಾದ ಮೇಲೆ ಇಬ್ಬರೂ ನಾಯಕರು ಸಭೆಯಲ್ಲಿದ್ದ ಪ್ರಮುಖರ ಸಮ್ಮುಖದಲ್ಲಿ ಒಗ್ಗಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಲು ಒಪ್ಪಿಕೊಂಡು ವೈಮನಸ್ಸು, ಭಿನ್ನಾಭಿಪ್ರಾಯ ಮರೆತು ಮುನ್ನಡೆಯಲು ಸಂಕಲ್ಪ ಮಾಡುತ್ತಾರೆ. ಇದೇ ತಡರಾತ್ರಿ ಹೊಟೇಲ್ ನಲ್ಲಿ ನಡೆದ ಡಿಕೆಶಿ ಮತ್ತು ಸಿದ್ದರಾಮಯ್ಯ ಮಾಡಿದ ಮೊದಲ ಕೇಕ್ ಕಟ್ಟಿಂಗ್ ಸಮಾರಂಭದ ಹಿಂದಿನ ಸಿಹಿ ಹಂಚಿಕೆ ವಿಚಾರ.

Image

ಹೀಗೆ ಅಮೃತ ಮಹೋತ್ಸವದ ಹೆಸರಿನಲ್ಲಿ ಮುಂದಿನ ಸಿಎಂ ವಿವಾದ ಬಗೆಹರಿಸಿದ ರಾಹುಲ್ ಗಾಂಧಿ, ಸಿದ್ದರಾಮಯ್ಯನವರ ಜನ ನಾಯಕತ್ವಕ್ಕೂ ಡಿಕೆ ಶಿವಕುಮಾರ್ ಅವರ ಪಕ್ಷ ಸಂಘಟನೆಗೂ ಸಿಗಬೇಕಾದ ಗೌರವ ಸಲ್ಲಿಸುವ ಕಾರ್ಯ ಮಾಡಿದ್ದಾರೆ. ಜೊತೆಗೆ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಾತಿನಂತೆ ನಡೆದುಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಇಬ್ಬರೂ ನಾಯಕರ ಹೆಗಲಿಗೇರಿಸಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಕಾಂಗ್ರೆಸ್‌ನಲ್ಲಿ ಮುಂದೆ ನಡೆಯುವುದು ಸಿದ್ದರಾಮೋತ್ಸವವೇ…!

ನಿಮಗೆ ಏನು ಅನ್ನಿಸ್ತು?
5 ವೋಟ್