ನಕಲಿ ದೇಶಭಕ್ತರ ಬಾಯಿ ಮುಚ್ಚಿಸುವ ಕೆಲಸ ಮಾಡಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

  • ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಮಾಡುವವರೆದುರು ನಾವು ನಾಲ್ಕು ಬಾರಿ ಸತ್ಯ ಹೇಳಬೇಕಿದೆ.
  • ನಮ್ಮ ಪಕ್ಷಕ್ಕಷ್ಟೇ ಸ್ವಾಂತತ್ರ್ಯ ಸಂಗ್ರಾಮದ ನಿಜ ಭಾಗೀಧಾರಿಕೆ ಇದೆ: ಸಿದ್ದರಾಮಯ್ಯ

"ಕಾಂಗ್ರೆಸ್‌ ನಿಜವಾದ ದೇಶಪ್ರೇಮಿ; ನಮ್ಮ ಪಕ್ಷಕ್ಕೂ ಸ್ವಾತಂತ್ರ್ಯ ಹೋರಾಟಕ್ಕೂ ನಂಟಿದೆ. ನಮ್ಮ ಹಿರಿಯರೆಲ್ಲರೂ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡವರು. ಇಂತಹ ಪಕ್ಷದ ಸದಸ್ಯರಾಗಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಆದರೆ, ಇಂತಹ ಪಕ್ಷದ ಬಗ್ಗೆ ನಕಲಿ ದೇಶಪ್ರೇಮಿಗಳು ಸಿಕ್ಕಸಿಕ್ಕಂತೆ ಮಾತನಾಡುತ್ತಿದ್ದಾರೆ. ಹಾಗಾಗಿ ನಾವು ಇವರುಗಳ ಬಾಯನ್ನು ಮೊದಲು ಮುಚ್ಚಿಸುವಂತಾಗಬೇಕು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿನ 'ಕ್ವಿಟ್‌ ಇಂಡಿಯಾ ದಿನಾಚರಣೆ'ಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, "ನಮ್ಮ ಪಕ್ಷ ಮತ್ತು ನಮ್ಮ ಸಾಧನೆಗಳ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಇಂತಹವರ ಬಗ್ಗೆ ನಾವೀಗ ಗಮನ ಹರಿಸಬೇಕಿದೆ. ನೂರು ಬಾರಿ ಸುಳ್ಳು ಹೇಳುವ ಅವರುಗಳ ಬಾಯನ್ನು ಮುಚ್ಚಿಸುವುದಕ್ಕಾಗಿ ನಾಲ್ಕು ಬಾರಿ ಸತ್ಯ ಹೇಳುವ ಕೆಲಸ ಮಾಡಬೇಕಿದೆ" ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

"ಬಿಜೆಪಿಯವರಿಗೆ ತಾವೇನು ಮಾತನಾಡುತ್ತಿದ್ದೇವೆಂದು ಅರ್ಥವೇ ಆಗುವುದಿಲ್ಲ. ಹೇಳಿದ್ದೆಲ್ಲವೂ ಸತ್ಯ ಎಂದು ಜನರನ್ನು ನಂಬಿಸಲು ಹೊರಟಿದ್ದಾರೆ. ನರೇಂದ್ರ ಮೋದಿ ಒಬ್ಬ ದೊಡ್ಡ ಮಾತುಗಾರ ಹಾಗೂ ಸುಳ್ಳುಗಾರ. ಅವರಿಗೂ ಅವರ ಪಕ್ಷಕ್ಕೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ರಾಷ್ಟ್ರಧ್ವಜ, ಸಂವಿಧಾನದ ಬಗೆಗೂ ಅವರಿಗೆ ಗೌರವ ಇಲ್ಲ, ಅದಕ್ಕಾಗಿ ಎಲ್ಲದರ ಬಗ್ಗೆ ಅಪ್ರಚಾರ ಮಾಡುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಟೀಕಿಸಿದರು. 

ಪ್ರಧಾನಿ ಮೋದಿ ಬಗ್ಗೆ ಲೇವಡಿ ಮಾಡಿದ ಸಿದ್ದರಾಮಯ್ಯ, "ಕನಿಷ್ಠ ನಾನು ಸ್ವಾತಂತ್ರ್ಯ ದಿನಕ್ಕೂ 12 ದಿನ ಮೊದಲು ಹುಟ್ಟಿದ್ದೆ. ಅವರು ಅದಾದ ಮೇಲೆ ಹುಟ್ಟಿದವರು. ಆ ಲೆಕ್ಕದಲ್ಲಾದರೂ ನಾನು ಸ್ವಾತಂತ್ರ್ಯಪೂರ್ವದವನು ಎಂದುಕೊಳ್ಳಬಹುದು. ಮೋದಿಗೆ ಇದು ಸಾಧ್ಯವೆ" ಎಂದು ಚಟಾಕಿ ಹಾರಿಸಿದರು.

ಈ ಸುದ್ದಿ ಓದಿದ್ದೀರಾ? :ಅಮೃತ ಮಹೋತ್ಸವ ಪಾದಯಾತ್ರೆ| ಕಾರ್ಯಕ್ರಮಕ್ಕೆ ಬರುವವರಿಗೆ ಪ್ರಯಾಣ ವೆಚ್ಚ ರಿಯಾಯ್ತಿ ಕೊಡಿ: ಸರ್ಕಾರಕ್ಕೆ ಡಿಕೆಶಿ ಮನವಿ 

"ನಮ್ಮ ಮಾಜಿ ಪ್ರಧಾನಿ ನೆಹರು ಸ್ವಾತಂತ್ರ್ಯ ಸಂಗ್ರಾಮದಲ್ಲಿ 11 ಬಾರಿ ಜೈಲಿಗೆ ಹೋಗಿದ್ದರುಯ. ಹೆಡ್ಗೇವಾರ್‌, ಸಾವರ್ಕರ್‌ ಎಂದಾದರೂ ಈ ವಿಚಾರಕ್ಕೆ ಜೈಲಿಗೆ ಹೋಗಿದ್ದರಾ? ನಮ್ಮ ಪಕ್ಷಕ್ಕಷ್ಟೇ ಸ್ವಾತಂತ್ರ್ಯ ಸಂಗ್ರಾಮದ ನಿಜ ಭಾಗೀಧಾರಿಕೆ ಇದೆ. ಹೀಗಾಗಿ ನಾವು ಹೆಮ್ಮೆಯಿಂದ ನಮ್ಮ ಪಕ್ಷದ ಸಾಧನೆಯನ್ನು ಬಿಂಬಿಸಿಕೊಳ್ಳಬೇಕು. ಹಾಗೆಯೇ ಕೋಮುವಾದಿ ಬಿಜೆಪಿಯನ್ನು ತೆಗೆಯಲು ಶಪಥ ಮಾಡೋಣ" ಎಂದು ಸಿದ್ದರಾಮಯ್ಯ ಹೇಳಿದರು.

"ಸ್ವಾತಂತ್ರ್ಯ ಮಹೋತ್ಸವದ 75ನೇ ವರ್ಷದ ಅವಧಿಯಲ್ಲಿ ಇಡೀ ದೇಶದಲ್ಲಿ ನಾವು ಐತಿಹಾಸಿಕ ಕಾರ್ಯಕ್ರಮ ನಡೆಸುತ್ತಿದ್ದೇವೆ. ರಾಜ್ಯದಲ್ಲೂ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ" ಎಂದು ಸಿದ್ದರಾಮಯ್ಯ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್