ದೇವೇಗೌಡ, ಸಿದ್ದರಾಮಯ್ಯ ಭೇಟಿ: ಸಂಚಲನ ಮೂಡಿಸಿದ ಅಗ್ರ ನಾಯಕರ ಮಾತುಕತೆ

  • ದೊಡ್ಡ ಗೌಡರ ಮನೆಯಲ್ಲಿ ಒಂದಾದ ಜನತಾ ಪರಿವಾರ ಸದಸ್ಯರು
  • ದೇವೇಗೌಡರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ 

ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ನಿವಾಸಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು( ಸೆ.19) ದಿಢೀರ್‌ ಭೇಟಿ ನೀಡಿದರು.

ವಿಧಾನಸಭೆ ಅಧಿವೇಶನ ನಾಳೆಗೆ ಮುಂದೂಡಿಕೆಯಾಗುತ್ತಿದ್ದಂತೆಯೇ ದಿಢೀರನೆ ಮಾಜಿ ಪ್ರಧಾನಿಗಳ ನಿವಾಸಕ್ಕೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದರು. ಅನಾರೋಗ್ಯ ಪೀಡಿತರಾಗಿರುವ ದೇವೇಗೌಡರನ್ನು ಭೇಟಿಯಾದ ಸಿದ್ದರಾಮಯ್ಯ, ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

Image

ಇದೇ ವೇಳೆ ರಾಜ್ಯ ರಾಜಕಾರಣ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಇಬ್ಬರು ನಾಯಕರು ಮಾತುಕತೆ ನಡೆಸಿದರು ಎನ್ನಲಾಗುತ್ತಿದೆ.

ರಾಜಕೀಯ ಅಖಾಡದಲ್ಲಿ ನೇರಾನೇರಾ ವಾಗ್ದಾಳಿ ನಡೆಸಿಕೊಂಡು, ಒಬ್ಬರನ್ನೊಬ್ಬರು ಕಂಡರಾಗದವರಂತೆ ವರ್ತಿಸುವ ಸಿದ್ದರಾಮಯ್ಯ ಮತ್ತು ದೇವೇಗೌಡರ ಈ ದಿಢೀರ್‌ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ರೈತ ಮತ್ತು ಕಾರ್ಮಿಕ ವಿರೋಧಿ ಬಿಜೆಪಿ ವಿರುದ್ಧ ಹೋರಾಟಕ್ಕಿಳಿದಿರುವ ಕಾಂಗ್ರೆಸ್ಸಿನ  ʼಭಾರತ್‌ ಜೋಡೋ ಯಾತ್ರೆʼಯ ರಾಜ್ಯ ಪರ್ವದ ವೇಳೆ ಜೆಡಿಎಸ್‌ ವರಿಷ್ಠರ ಸಹಕಾರ ಪಡೆಯಲು ಸಿದ್ದರಾಮಯ್ಯ ತಮ್ಮ ಒಂದು ಕಾಲದ ಗುರು ದೇವೇಗೌಡರನ್ನು ಭೇಟಿಯಾಗಿದ್ದಾರೆನ್ನುವುದು ಮೂಲಗಳ ಮಾಹಿತಿ.

ಉಭಯ ನಾಯಕರ ಭೇಟಿ ವೇಳೆ ಕಾಂಗ್ರೆಸ್‌ ಮುಖಂಡರಾದ ಆರ್‌ ವಿ ದೇಶಪಾಂಡೆ, ಅಶೋಕ ಪಟ್ಟಣ, ಜಮೀರ್ ಅಹ್ಮದ್‌ ಉಪಸ್ಥಿತರಿದ್ದರು.

ದೊಡ್ಡಗೌಡರನ್ನು ಕಂಡು ದಢಾರನೇ ಕಾಲಿಗೆರಗಿದ ಜಮೀರ್
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿಗಳ ಭೇಟಿ ವೇಳೆ ಕಾಂಗ್ರೆಸ್‌ ಶಾಸಕ, ಜಮೀರ್ ಅಹ್ಮದ್ ಉಪ‍ಸ್ಥಿತರಿದ್ದರು.

Image

ಸಿದ್ದರಾಮಯ್ಯನವರು ದೇವೇಗೌಡರಿಗೆ ಕೈ ಮುಗಿದು ಕೊಠಡಿ ಪ್ರವೇಶಿಸುತ್ತಿದ್ದ ವೇಳೆ, ಪಕ್ಕದಲ್ಲೇ ಇದ್ದ ಜಮೀರ್‌ ಅಹ್ಮದ್ ತಮ್ಮ ರಾಜಕೀಯ ಗುರುಗಳನ್ನು ಕಂಡಾಕ್ಷಣಕ್ಕೆ‌ ಬಿರುಸಾಗಿ ಅವರತ್ತ ಸಾಗಿ ಕಾಲಿಗೆರಗಿ ಆಶೀರ್ವಾದ ಪಡೆದರು. ಜಮೀರ್‌ ಅವರ ಆ ಗುರುಭಕ್ತಿಗೆ ತಮ್ಮದೇ ಸಿಗ್ನೇಚರ್‌ ನಗುನಕ್ಕು ತಮಗೆ, ಸಿದ್ದರಾಮಯ್ಯ ನೀಡಿದ್ದ ಹೂಗುಚ್ಛವನ್ನೇ ಜಮೀರ್‌ ಗೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್