ಸದನ ಸ್ವಾರಸ್ಯ | ಕಲಾಪವನ್ನು ನಗೆಗಡಲಿಗೆ ತಳ್ಳಿದ ಸಿದ್ದರಾಮಯ್ಯನವರ 'ಬೆಂಗಳೂರು ಬೋಟ್ ಪ್ರಯಾಣ'

  • ಒಂದು ಅಡಿ ನೀರಿನಲ್ಲಿ ಬೋಟ್ ಓಡಾಟ ಬೇಕಿತ್ತೇ?: ಸಿಎಂ ಬೊಮ್ಮಾಯಿ
  • ಮುಕ್ಕಾಲು ಅಡಿ ನೀರಿನಲ್ಲಿ ಕಾರು ಮುಳುಗುತ್ತಾ ಹೇಳಿ?: ಸಿದ್ದರಾಮಯ್ಯ

"ಮೊಣಕಾಲುದ್ದ ನೀರಲ್ಲಿ ನಮ್ಮ ನಾಯಕರನ್ನ ಬೋಟ್‌ನಲ್ಲಿ ಕರೆದುಕೊಂಡ ಹೋದ ಪುಣ್ಯಾತ್ಮ ಯಾರು?" ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನಕ್ಕೆ ಹಾಕಿದ ಪ್ರಶ್ನೆ.

ಬಸವರಾಜ ಬೊಮ್ಮಾಯಿ ಈ ವಿಚಾರವನ್ನು ಸದನದ ಮುಂದಿಡಲು ಕಾರಣವಾಗಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ನಿಯಮ 69ರಡಿ ನಡೆಸಿದ ಮಳೆ ಹಾನಿ ಸಮಸ್ಯೆಯ ಚರ್ಚೆ. 

ವಿಧಾನ ಮಂಡಲದ ಎರಡನೇ ದಿನದ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿನ ಮಳೆ, ಮಳೆ ಹಾನಿ ವಿಚಾರದಲ್ಲಿ ಚರ್ಚೆಗೆ ಮುಂದಾಗಿದ್ದರು. ರಾಜ್ಯದ ಮಳೆ ಲೆಕ್ಕಾಚಾರವನ್ನು ವಿಪಕ್ಷ ನಾಯಕರು ಸದನದ ಮುಂದಿಟ್ಟು, ವಾಡಿಕೆ ಮಾತ್ತು ಅತಿವೃಷ್ಟಿ ಬಗ್ಗೆ ಮಾಹಿತಿ ನೀಡುತ್ತಿದ್ದರು.

ಈ ವೇಳೆ ಬೆಂಗಳೂರು ಮಳೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಬೆಂಗಳೂರಿಗೆ ಈ ತಿಂಗಳ ಅಂತ್ಯಕ್ಕೆ ವಾಡಿಕೆಯಂತೆ 475 ಮಿಮೀ ಮಳೆಯಾಗಬೇಕಿತ್ತು. ಆದರೆ, ಈ ಬಾರಿ 1086 ಮೀ ಮೀ ಮಳೆಯಾಗಿದೆ. ಹೀಗಾಗಿ ನಗರದ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು. ಸರ್ಕಾರ ಈ ಮುನ್ಸೂಚನೆ ಇದ್ದರೂ ಯಾಕೆ ಸರಿಯಾದ ಕ್ರಮ ಕೈಗೊಂಡಿಲ್ಲ" ಎಂದು ಆಡಳಿತ ಪಕ್ಷವನ್ನು ಪ್ರಶ್ನಿಸಿದರು.

Image

ಜೊತೆಗೆ ಸರ್ಕಾರವನ್ನು ತರಾಟೆಗೆತ್ತಿಕೊಂಡ ಅವರು, "ಬೆಂಗಳೂರಿನ ಮಳೆ ಹಾನಿ ಸಮೀಕ್ಷೆಯನ್ನು ನಾನು ನಡೆಸಿದ್ದೆ. ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಮಲೂರಿನಲ್ಲಿ ರಸ್ತೆ ಬಿಟ್ಟು ಬೋಟ್‌ನಲ್ಲಿ ಓಡಾಡಿಕೊಂಡು ಪರಿವೀಕ್ಷಣೆ ನಡೆಸಿದೆ. ನಗರದ ಪರಿಸ್ಥಿತಿ ಇಷ್ಟರ ಮಟ್ಟಿಗೆ ಹದಗೆಟ್ಟಿದೆ" ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, "ಸರ್ ಅದು ಎಫ್ಸಿಲಾನ್ ಅನ್ನೋ ಖಾಸಗಿ ಲೇ ಔಟ್" ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ನಾನು ಅಲ್ಲಿಗೆ ಬೋಟ್‌ನಲ್ಲಿ ಹೋಗಿದ್ದೆ" ಎಂದರು. ಇದಕ್ಕೆ ಮರು ಉತ್ತರ ನೀಡಿದ ಲಿಂಬಾವಳಿ "ಸರ್ ಅಲ್ಲಿಗೆ ನೀವು ಬೋಟ್‌ನಲ್ಲಿ ಹೋಗೋ ಅವಶ್ಯಕತೆ ಇರಲಿಲ್ಲ, ನಿಮಗ್ಯಾರೋ ದಿಕ್ಕು ತಪ್ಪಿಸಿದ್ದಾರೆ. ಪಕ್ಕದಲ್ಲೇ ರಸ್ತೆ ಇತ್ತು" ಎಂದಾಗ ಸದನದಲ್ಲಿ ನಗೆ ಉಕ್ಕಿತು.

Image

ಇದಕ್ಕೆ ಕೌಂಟರ್ ನೀಡಿದ ಸಿದ್ದರಾಮಯ್ಯ "ಓ ಹೌದೋ, ಹಾಗಿದ್ದ ಮೇಲೆ ನಾನು ಬರೋದು ಗೊತ್ತಿದ್ದ ಮೇಲೆ ನೀವು ಬಂದು ಕರ್ಕೊಂಡು ಹೋಗಿದ್ದಿದ್ದರೆ ನಾನು ಅದ್ರಲ್ಲಿ ಬರೋ ಪ್ರಮೇಯ ಇರುತ್ತಿರಲಿಲ್ಲ" ಎಂದರು. ಆಗ ಸ್ವಲ್ಪ ಹೊತ್ತು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ವಿನಿಮಯವಾಯಿತು.

ಮತ್ತೆ ಮಾತನ್ನಾರಂಭಿಸಿದ ಸಿದ್ದರಾಮಯ್ಯ, "ಅಲ್ಲಪ್ಪ ಲಿಂಬಾವಳಿ ದಿನಾ ಓಡಾಡೋ ರಸ್ತೆಯಲ್ಲೇ ನೀರು ನಿಂತಿದೆ, ಅಲ್ಲೆಲ್ಲಿತ್ತು ರಸ್ತೆ" ಎಂದಾಗ, ಥಟ್ಟನೆ ಎದ್ದ ಲಿಂಬಾವಳಿ, "ಸರ್ ನೀವು ಮುಂದಿನಿಂದ ಬರೋದು ಬಿಟ್ಟು ಹಿಂದಿನಿಂದ ಬಂದ್ರಿ. ಅದಕ್ಕೆ ಹಾಗಾಗಿದೆ" ಎಂದರು.

ಈ ವೇಳೆ ಸಿದ್ದರಾಮಯ್ಯ ಪರವಾಗಿ ಮಾತನಾಡಿದ ರಾಮಲಿಂಗಾರೆಡ್ಡಿ, "ಮುಖ್ಯಮಂತ್ರಿಗಳು ಎಲ್ಲಿ ಪರಿಶೀಲನೆಗೆ ಹೋಗಿದ್ದರೋ, ಅದೇ ರಸ್ತೆಯಲ್ಲಿ ನಾವು ಹೋಗಿದ್ದೆವು" ಎಂದರು. ಇದಕ್ಕೆ ಮತ್ತೆ ಉತ್ತರಿಸಿದ ಲಿಂಬಾವಳಿ, "ಸಿಎಂ ಅಲ್ಲಿ ಬಂದಿರಲಿಲ್ಲ" ಎಂದರು. ಹೀಗೆ ಮಾತು ಸಾಗುತ್ತಿದ್ದ ವೇಳೆ ಚರ್ಚೆಯೊಳಗೆ ಪ್ರವೇಶಿಸಿದ ಬಸವರಾಜ ಬೊಮ್ಮಾಯಿ "ಅಲ್ಲಪ್ಪ , ಒಂದೂವರೆ ಅಡಿ ನೀರಿನಲ್ಲಿ ನಮ್ಮ ನಾಯಕರನ್ನು ಬೋಟ್‌ನಲ್ಲಿ ಕರೆದುಕೊಂಡು ಹೋದರಲ್ಲ, ಆ ಪುಣ್ಮಾತ್ಮರು ಯಾರಪ್ಪಾ?" ಎಂದರು. ಮುಖ್ಯಮಂತ್ರಿಗಳ ಮಾತಿನಿಂದ ಇಡೀ ಸದನ ನಗೆಗಡಲಲ್ಲಿ ತೇಲಿತು.

Image

ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, "ಅಲ್ಲ ಬೊಮ್ಮಾಯಿಯವರೇ, "ಒಂದೂವರೆ ಅಡಿ ನೀರಲ್ಲಿ ದೋಣಿ ಹೋಗಲು ಸಾಧ್ಯವೇ ಇಲ್ಲ. ಅಲ್ಲಿ ನಾಲ್ಕಡಿ ನೀರು ನಿಂತಿತ್ತು. ಕೆಲವು ಕಡೆ ಕಾರು ಮುಳಗಿತ್ತು. ಹಾಗಾದ್ರೆ ಒಂದಡಿಯಲ್ಲಿ ಕಾರು ಮುಳುಗುತ್ತಾ" ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಬಸವರಾಜ ಬೊಮ್ಮಾಯಿ, "ನಾನು ಮಾಧ್ಯಮದಲ್ಲಿ ನೋಡಿದೆ, ಮೊಣಕಾಲಿನವರೆಗೆ ನೀರಿತ್ತು" ಎಂದು ಹೇಳಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, "ಸರಿ ಹಾಗಾದ್ರೆ ಹೋಗಿ ಜನರನ್ನು ಭೇಟಿ ಮಾಡೋಣ, ಅವರು ಒಂದೂವರೆ ಅಡಿ ಇತ್ತು ಎಂದರೆ ನೀವು ಹೇಳಿದ ಹಾಗೆ ಕೇಳೋಣ" ಎಂದು ಸವಾಲು ಹಾಕಿದರು, ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಮುಖ್ಯಮಂತ್ರಿಗಳು "ನಾನು ಮೂರು ಅಡಿ ಇದ್ದಾಗಲೇ ನಡೆದುಕೊಂಡು ಹೋಗಿದ್ದೇನೆ. ನಿಮಗೆ ಯಾರೋ ಕೃಷ್ಣಭೈರೇಗೌಡರಂಥವರು ಮಿಸ್ ಗೈಡ್ ಮಾಡಿರಬಹುದು" ಎಂದರು.

ಈ ಸುದ್ದಿ ಓದಿದ್ದೀರಾ? : ಸದನ ಸ್ವಾರಸ್ಯ | ʼಸಿಎಂ ಬೊಮ್ಮಾಯಿ ನನ್ನ ರಾಜಕೀಯ ಮಾರ್ಗದರ್ಶಕರುʼ ಎಂದ ಕಾಂಗ್ರೆಸ್ಸಿನ ಕೃಷ್ಣ ಬೈರೇಗೌಡ

ಹೀಗೆ ಒಮ್ಮೆ ನಗು ಮಗದೊಮ್ಮೆ ವಿಚಾರ ತೀವ್ರತೆಯಿಂದ ಕಾವೇರಿದ್ದ ಸದನವನ್ನು ಸ್ಪೀಕರ್ ಮಧ್ಯಪ್ರವೇಶ ಮಾಡಿ ಸಮಾಧನಾಗೊಳಿಸಿ ಮುಂದಿನ ಚರ್ಚೆಗೆ ಅನುವು ಮಾಡಿಕೊಟ್ಟರು.

ನಿಮಗೆ ಏನು ಅನ್ನಿಸ್ತು?
2 ವೋಟ್