ಸಿದ್ದರಾಮೋತ್ಸವ, ಜೆಡಿಸ್‌ನ ಜನತಾ ಜಲಧಾರೆಯ ಶೇ. 50ರಷ್ಟು ಇಲ್ಲ; ಎಚ್‌ಡಿಕೆ

  • ಕಾಂಗ್ರೆಸ್ ದೌರ್ಬಲ್ಯದ ಮೇಲೆ ನಾವು ರಾಜಕೀಯ ಮಾಡುವುದಿಲ್ಲ 
  • ಮೃತಪಟ್ಟ ಕಾರ್ಯಕರ್ತನಿಗೆ ಶ್ರದ್ಧಾಂಜಲಿ ಸಲ್ಲಿಸದ ಕೈ ನಾಯಕರು

“ಸಿದ್ದರಾಮೋತ್ಸವದ ಬಗ್ಗೆ ನನಗೆ ಆಸಕ್ತಿ ಇಲ್ಲ. ಜೆಡಿಎಸ್‌ನಿಂದ ಜನತಾ ಜಲಧಾರೆ ಮಾಡಿದ್ದೆವು. ಅದರ ಶೇ. 50ರಷ್ಟು ಈ  ಸಮಾವೇಶ ಇಲ್ಲ. ನಮ್ಮ ಕಾರ್ಯಕ್ರಮದ ಮುಂದೆ ಸಿದ್ದರಾಮೋತ್ಸವ ಕಾರ್ಯಕ್ರಮ ಏನೂ ಅಲ್ಲ” ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಜೆಡಿಎಸ್ ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಕರೆದಿರುವ ಪಕ್ಷದ ಮುಖಂಡರು, ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.

“7 ಲಕ್ಷ, 8 ಲಕ್ಷ, 20 ಲಕ್ಷ ಅಂತಾರೆ. ಅವರ ಲೆಕ್ಕಕ್ಕೆ ಅರ್ಥವೇ ಇಲ್ಲ. ನಮಗೂ ಎಲ್ಲ ಮಾಹಿತಿ ಇದೆ. ಅಡುಗೆ ಮಾಡಿರುವುದು, ಶಾಮಿಯಾನ ಹಾಕಿರುವುದು ಎಲ್ಲದರ ಮಾಹಿತಿ ನನಗೆ ಇದೆ. ಎಷ್ಟೇ ಆರ್ಭಟ ಮಾಡಿದರೂ ನಮ್ಮ ಕಾರ್ಯಕ್ರಮಕ್ಕೆ ಅವರ ಕಾರ್ಯಕ್ರಮ ಸರಿಸಾಟಿ ಆಗುವುದಿಲ್ಲ” ಎಂದರು.

“ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇನ್ನೂ ಹೆಚ್ಚಾಗುತ್ತದೆ ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ದೌರ್ಬಲ್ಯದ ಮೇಲೆ ನಾವು ರಾಜಕೀಯ ಮಾಡುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.

”ಸಿದ್ದರಾಮೋತ್ಸವಕ್ಕೆ ಬರುವಾಗ ಅವರ ಕ್ಷೇತ್ರದ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಆ ಕಾರ್ಯಕ್ರಮದಲ್ಲಿ ಆ ಕಾರ್ಯಕರ್ತನಿಗಾಗಿ ಒಂದು ಶ್ರದ್ಧಾಂಜಲಿ ಕೂಡ ಸಲ್ಲಿಕೆ ಮಾಡಿಲ್ಲ. ಇದು ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ರೀತಿ! ಕಾರ್ಯಕರ್ತ ಸತ್ತರು ಯಾರೂ ಕೇಳಲಿಲ್ಲ. ಕಾರ್ಯಕರ್ತನಿಗೆ ಬೆಲೆ ಕೊಡದೇ ಸಿದ್ದರಾಮಯ್ಯ ಅವರು ವೀರಾವೇಶದಲ್ಲಿ ಮಾತನಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿ ಓದಿದ್ದೀರಾ? ಸಿದ್ದು-ಡಿಕೆಶಿ: ಕಾರ್ಯಕರ್ತರ ಹರ್ಷೋದ್ಗಾರದ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವರೇ ನಾಯಕರು?

ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ಕುಮಾರಸ್ವಾಮಿ, “ಎಲ್ಲರಿಗೂ ಮುಖ್ಯಮಂತ್ರಿಯಾಗಬೇಕೆಂದು ಆಸೆ ಇರುತ್ತದೆ. ಇದೇ ಸಿದ್ದರಾಮಯ್ಯ ಅವರು ಹಿಂದೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ, ಅವರ ಅಪ್ಪನ ಆಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದರು. ಆದರೆ, ನಾವಿಬ್ಬರೂ ಮುಖ್ಯಮಂತ್ರಿಗಳಾದೆವು. ಅವರ ಆಸೆ  ಈಡೇರಬೇಕಾದರೆ 113 ಸೀಟು ಬೇಕು. ಇದನ್ನು ಜನರು ತೀರ್ಮಾನ ಮಾಡುತ್ತಾರೆ” ಎಂದು ಹೇಳಿದರು. 

“ಮುಖ್ಯಮಂತ್ರಿ ಆಗುತ್ತೇನೆಂದು ಆಶಾಗೋಪುರ ಕಟ್ಟುತ್ತಿದ್ದಾರೆ, ಕಟ್ಟಲಿ. ನಾಡಿನ ಜನರು ಅಂತಿಮವಾಗಿ ತೀರ್ಪು ಕೊಡುತ್ತಾರೆ. ಜನ ಏನು ತೀರ್ಪು ಕೊಡುತ್ತಾರೆ ನೋಡೋಣ" ಎಂದರು.

ಅಧಿವೇಶನ ಕರೆಯಲು ಒತ್ತಾಯ

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, “ಕಾಂಗ್ರೆಸ್‌ನವರು ಏನು ಬೇಕಾದರೂ ಮಾಡಿಕೊಳ್ಳಲಿ. ಮೊದಲು ರಾಜ್ಯ ಸರ್ಕಾರ ಅಧಿವೇಶನ ಕರೆಯಬೇಕು. ರಾಜ್ಯದಲ್ಲಿ ಮಳೆ ಬಂದು ದೊಡ್ಡ ಅನಾಹುತ ಆಗಿದೆ. ಅನೇಕ ಸಮಸ್ಯೆಗಳು ಆಗಿವೆ. ಈ ಬಗ್ಗೆ ಚರ್ಚೆ ಆಗಬೇಕು. ಕೂಡಲೇ ಸರ್ಕಾರ ಅಧಿವೇಶನ ಕರೆಯಬೇಕು” ಎಂದು ಆಗ್ರಹಿಸಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್