
- ಲೋಕಾಯುಕ್ತಕ್ಕೆ ಸರ್ಕಾರ ಅಗತ್ಯ ಸಿಬ್ಬಂದಿ ನೇಮಿಸಬೇಕು
- ಅಧಿಕಾರಿಗಳ ಭ್ರಷ್ಟಾಚಾರ ತಡೆಗೆ ಇನ್ನಷ್ಟು ಕಠಿಣ ನಿಯಮ ಬೇಕು
ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದರ ಕಡಿವಾಣಕ್ಕೆ ಲೋಕಾಯುಕ್ತ ಕಾನೂನಿನಲ್ಲಿ ಕೆಲ ಅಗತ್ಯ ಬದಲಾವಣೆಗಳಾಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಸಂತೋಷ್ ಹೆಗಡೆ, ಭ್ರಷ್ಟಾಚಾರವೆಂಬುವುದು ಬಹಳ ಹಿಂದಿನಿಂದಲೂ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಿತಿ ಮೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಮಾಜದ ವಿವಿಧ ವಲಯಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದರು.
ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಪುನರ್ ಜಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂತೋಷ್ ಹೆಗಡೆ, ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ಈಗ ಲೋಕಾಯುಕ್ತಕ್ಕೆ ಬಲ ತುಂಬುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ. ಲೋಕಾಯುಕ್ತ ಕೇಳುವ ಅಗತ್ಯ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಬೇಕು. ಹಾಗಾದಲ್ಲಿ ಮಾತ್ರ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಬಲವಾಗಿ ಹೋರಾಟ ಮಾಡಬಹುದು ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? : ಎಸಿಬಿ ರದ್ದು ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಖಾಸಗಿ ವ್ಯಕ್ತಿಗಿಂತ, ಸರ್ಕಾರದೊಳಗಿದ್ದುಕೊಂಡು ಲಂಚ ಸ್ವೀಕರಿಸುವವರ ವಿರುದ್ಧ ಕ್ರಮ ಆಗಬೇಕು. ಇದಕ್ಕಾಗಿ ಲೋಕಾಯುಕ್ತ ಕಾಯ್ದೆಯ ಕೆಲವು ನಿಯಮಗಳು ಬದಲಾಗಬೇಕಿದೆ. ಇವೆಲ್ಲವೂ ಸಾಧ್ಯವಾಗಲು ಕಾಲಾವಕಾಶದ ಅಗತ್ಯವಿದೆ. ನಿರೀಕ್ಷೆ ಮಾಡವ ಮೊದಲು ಸಿದ್ಧತೆಗೆ ಅವಕಾಶ ಕೊಡೋಣ, ಆ ಬಳಿಕ ಮಾತನಾಡೋಣ ಎಂದು ಸಂತೋಷ್ ಹೆಗಡೆ ಹೇಳಿದರು.