ಕನ್ನಡದಲ್ಲಿ ಮಾತನಾಡಿ; ಭಾರತ್‌ ಜೋಡೋ ಸಭೆಯಲ್ಲಿ ಜೈರಾಮ್ ರಮೇಶ್‌ಗೆ ಕೈ ಕಾರ್ಯಕರ್ತರ ಒತ್ತಾಯ!

  • ದೆಹಲಿ ನಾಯಕನಿಂದ ಕನ್ನಡ ಮಾತನಾಡಿಸಿದ ಕೈ ಕಾರ್ಯಕರ್ತರು!
  • ಭಾರತ್ ಜೋಡೋ ಯಾತ್ರೆ ಕುರಿತ ಸಭೆಯಲ್ಲಿ ನಡೆದ ಘಟನೆ  

ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರಿಗೆ ಕನ್ನಡದಲ್ಲೇ ಮಾತನಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  

ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನ ಇಂತಹದ್ದೊಂದು ಪ್ರಸಂಗಕ್ಕೆ ಗುರುವಾರ ಸಾಕ್ಷಿಯಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಭಾರತ್ ಜೋಡೋ ಯಾತ್ರೆಯ ಸಿದ್ಧತಾ ಸಭೆಯನ್ನು ಇಂದು (ಸೆಪ್ಟೆಂಬರ್ 1) ಅಂಬೇಡ್ಕರ್ ಭವನದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮದ ರೂಪುರೇಷೆ ಬಗ್ಗೆ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಾರಂಭಿಸಿದರು. ಇಂಗ್ಲಿಷ್‌ನಲ್ಲಿ ಭಾಷಣ ಆರಂಭಿಸಿದ ಜೈರಾಮ್ ರಮೇಶ್ ಅವರೆದುರು ಎದ್ದು ನಿಂತ ಕೆಲ ಕಾರ್ಯಕರ್ತರು ಕನ್ನಡದಲ್ಲಿ ಭಾಷಣ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಉಳಿದವರೂ ದನಿಗೂಡಿಸಿದರು.

ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಬಯಸಿದ್ದೇನೆ: ಮಾಜಿ ಸಂಸದ ಮುದ್ದಹನುಮೇಗೌಡ 

ತತ್‌ಕ್ಷಣದ ಬೆಳವಣಿಗೆಯಿಂದಾಗಿ ಜೈರಾಮ್ ರಮೇಶ್ ಕೆಲಕಾಲ ತಬ್ಬಿಬ್ಬಾದರು. ಬಳಿಕ ಸಾವರಿಸಿಕೊಂಡು ಅದೇ ಕಾರ್ಯಕರ್ತರಿಗೆ ಸಮಜಾಯಿಷಿ ನೀಡಿದ ಅವರು, "ಕನ್ನಡದಲ್ಲೇ ಭಾಷಣವನ್ನು ಮಾಡುವೆ. ಆದರೆ, ತಾಂತ್ರಿಕ ಅಂಶಗಳನ್ನು ಇಂಗ್ಲಿಷ್‌ನಲ್ಲಿ ತಿಳಿಸುವೆ" ಎಂದರು.

ಬಳಿಕ ಕನ್ನಡದಲ್ಲಿ ಭಾಷಣ ಮಾಡಿದ ಜೈರಾಮ್ ರಮೇಶ್ ಅವರನ್ನು ಕಾರ್ಯಕರ್ತರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್