
- ಮುನಿಪಾಲಿಟಿ ತಿದ್ದುಪಡಿ ವಿಧೇಯಕದ ಬಗ್ಗೆ ಗೊಂದಲ
- ವಿಧೇಯಕ ಮಂಡನೆ ಮಂದೂಡಿದ ಸಭಾಧ್ಯಕ್ಷ ಕಾಗೇರಿ
ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾದ ಮುನ್ಸಿಪಾಲಿಟಿಗಳ ತಿದ್ದುಪಡಿ ವಿಧೇಯಕ 2022ನ್ನು ಮುಂದೂಡಲಾಯಿತು.
ವಿಧಾನಸಭೆಯ ಐದನೇ ದಿನದ ಕಲಾಪದಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರ ಪರವಾಗಿ ಕಾನೂನು ಸಚಿವ ಮಾಧುಸ್ವಾಮಿ ಅವರು ವಿಧೇಯಕ ಮಂಡಿಸಿದರು. ಆದರೆ ವಿಧೇಯಕದ ವಿಚಾರದಲ್ಲಿ ಗೊಂದಲವಿರುವ ಕಾರಣ ಮುಂದಿನ ವಾರ ಅದನ್ನು ಚರ್ಚೆಗೆ ಎತ್ತಿಕೊಳ್ಳಲಾಗುವುದೆಂದು ಸಭಾಧ್ಯಕ್ಷರು ಪ್ರಕಟಿಸಿದರು.

ವಿಧೇಯಕ ಕುರಿತು ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಒಂದು ಎಕರೆಗಿಂತ ಹೆಚ್ಚಿನ ಜಾಗದಲ್ಲಿ ಹೊಸ ಬಡಾವಣೆ ಮಾಡಿದರೆ ಟೌನ್ ಪ್ಲಾನಿಂಗ್ ಒಪ್ಪಿಗೆ ಪಡೆಯಬೇಕು. ಹಳೆಯ ಬಡಾವಣೆಯಾದರೆ ಟೌನ್ ಪ್ಲಾನಿಂಗ್ನಿಂದ ಹೊರಗಿಡುತ್ತೇವೆ ಎಂದರು. ಜೊತೆಗೆ ಇ-ಸ್ವತ್ತಿಗೆ ಅಡ್ಡಿ ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಅಕ್ರಮ-ಸಕ್ರಮ ವಿಚಾರಕ್ಕೆ ಸುಪ್ರೀಂಕೋರ್ಟಿನಲ್ಲಿ ತಡೆಯಾಜ್ಞೆಯಿದೆ. ಯೋಜನಾ ಪ್ರಾಧಿಕಾರದ ಅನುಮತಿಯಿಲ್ಲದೆ ನಿರ್ವಹಿಸಿರುವ ಕಟ್ಟಡಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? : ವಿಧಾನಸಭೆ | ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ ಅಂಗೀಕಾರ
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅಕ್ರಮ ಸಕ್ರಮ, ಸೇರಿದಂತೆ ಕೆಲ ವಿಚಾರಗಳಲ್ಲಿ ಗೊಂದಲವಿದೆ. ಬೇರೆ ಬೇರೆ ಇಲಾಖೆಗಳನ್ನು ಅಭಿಪ್ರಾಯ ಸಂಗ್ರಹಿಸಿ ಇ-ಸ್ವತ್ತಿನ ವಿಧೇಯಕ ಬಗೆಹರಿಸಬೇಕು. ಹಾಗಾಗಿ ಈ ವಿಧೇಯಕವನ್ನು ಮುಂದಿನ ವಾರ ಚರ್ಚೆಗೆ ತೆಗೆದುಕೊಂಡ ಬಳಿಕ ಸಾಧಕ ಬಾಧಕ ನೋಡಿಕೊಂಡು ಅಂಗೀಕರಿಸೋಣ ಎಂದು ವಿಧೇಯಕವನ್ನು ಮುಂದೂಡಿದರು.